
ಹಳೇಬೀಡು: ಇಲ್ಲಿನ ಬೇಲೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ (ಬಿಸಿಎಂ) ಬಾಲಕರ ವಿದ್ಯಾರ್ಥಿ ನಿಲಯ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಹಾಸ್ಟೆಲ್ ವಿಶಾಲವಾದ ಕಟ್ಟಡ ಹೊಂದಿದ್ದು, ಊಟೋಪಚಾರಕ್ಕೆ ಕೊರತೆ ಇಲ್ಲ. ಆದರೆ, ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ನೀರು ಶುದ್ಧೀಕರಿಸುವ ಫಿಲ್ಟರ್ ಕೆಟ್ಟು ಹೋಗಿದ್ದು, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಕೊರತೆಯಾಗಿದೆ. ಪಕ್ಕದಲ್ಲಿರುವ ಕಲ್ಪತರು ಶಾಲೆಯಿಂದ ಮಕ್ಕಳು ಕುಡಿಯುವ ನೀರನ್ನು ಹೊತ್ತು ತರುವಂತಾಗಿದೆ. ಸೌರ ವಾಟರ್ ಹೀಟರ್ ಕೆಲಸ ನಿರ್ವಹಿಸದೇ ಇರುವುದರಿಂದ ಸ್ನಾನಕ್ಕೆ ಬಿಸಿ ನೀರೂ ದೊರಕುತ್ತಿಲ್ಲ. ಮಕ್ಕಳು ತಣ್ಣೀರಿನಲ್ಲಿ ಸ್ನಾನ ಮಾಡಿ ಶಾಲೆಗೆ ಹೋಗುವಂತಾಗಿದೆ ಎಂಬ ದೂರು ಪೋಷಕರಿಂದ ಕೇಳಿ ಬರುತ್ತಿದೆ.
ಒಮ್ಮೊಮ್ಮೆ ಗಂಟೆ ಗಟ್ಟಲೆ ವಿದ್ಯುತ್ ಸಂಪರ್ಕ ಕಡಿತ ಆಗುವುದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಆಗುತ್ತಿರುತ್ತದೆ. ಹಾಸ್ಟೆಲ್‌ನಲ್ಲಿ ಯುಪಿಎಸ್ ಬ್ಯಾಟರಿ ಇದ್ದರೂ, ಉಪಯೋಗಕ್ಕೆ ಇಲ್ಲದಂತಾಗಿದೆ. ಬ್ಯಾಟರಿ, ಯುಪಿಎಸ್ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಆದರೆ ದುರಸ್ತಿ ಆಗಿಲ್ಲ. ವಿದ್ಯುತ್ ಕಡಿತವಾದಾಗ ಮಕ್ಕಳು ಕತ್ತಲೆಯಲ್ಲಿ ಕಳೆಯುವಂತಾಗಿದೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ರಾತ್ರಿ ವೇಳೆ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ ಎನ್ನುತ್ತಾರೆ ಮುಖಂಡ ಹುಲಿಕೆರೆ ಕಲ್ಲೇಶ್.
ಸಂಜೆ ಸಮಯ ವಾಲಿಬಾಲ್, ಬ್ಯಾಡ್ಮಿಂಟನ್ ಆಡಲು ಕ್ರೀಡಾ ಪರಿಕರಗಳಿಗೆ ಕೊರತೆ ಇಲ್ಲ. ಆದರೆ ಆಟ ಆಡಲು ಸೂಕ್ತವಾದ ಮೈದಾನ ಇಲ್ಲ. ಹಾಸ್ಟೆಲ್ ಮುಂಭಾಗ ಕೋರ್ಟ್ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಹಾಸ್ಟೆಲ್ ಕಟ್ಟಡ ಸುಣ್ಣ ಬಣ್ಣ ಕಂಡು ಹಲವು ವರ್ಷ ಕಳೆದಿವೆ. ಗೋಡೆಗಳು ಬಣ್ಣ ಮಾಸಿದೆ. ಹೊರಾಂಗಣ, ಒಳಾಂಗಣ ಎರಡೂ ಕಡೆಯ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ತುರ್ತಾಗಿ ಆಗಬೇಕಾಗಿದೆ.
ವಾರ್ಡನ್ ಸಕಾಲಕ್ಕೆ ಹಾಸ್ಟೆಲ್‌ಗೆ ಬರುವುದಿಲ್ಲ. ಒಂದು ವೇಳೆ ಹಾಸ್ಟೆಲ್‌ಗೆ ಬಂದರೂ ಹೆಚ್ಚು ಸಮಯ ನಿಲ್ಲುವುದಿಲ್ಲ. ಸಿಬ್ಬಂದಿ ಬೆಳಿಗ್ಗೆ ಯೋಗ ಮಾಡಿಸುತ್ತಾರೆ. ದಿನಪತ್ರಿಕೆ ಓದಿಸುತ್ತಾರೆ. ಹೊರಗಡೆ ಹೋಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತಾರೆ. ಊಟ, ಉಪಾಹಾರ ಮಾತ್ರವಲ್ಲದೇ ವಿವಿಧ ಕಾಳುಗಳ ಖಾದ್ಯ, ಮೊಟ್ಟೆ ಹಾಗೂ ಮಾಂಸಾಹಾರವನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. ಆಹಾರ ನಿರ್ವಹಣೆ ವ್ಯತ್ಯಾಸವಾಗುತ್ತಿಲ್ಲ. ಆದರೆ ಹಲವು ಸೌಲಭ್ಯಗಳ ಕೊರತೆ ನಿವಾರಣೆ ಆಗಬೇಕಾಗಿದೆ ಎನ್ನುತ್ತಾರೆ ಪೋಷಕರು.
ಬೋವಿ ವಿದ್ಯಾರ್ಥಿಗಳಿಗೆ ಅನುಕೂಲ: ಬಿಸಿಎಂ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 5 ರಿಂದ 10ನೇ ತರಗತಿ ಓದುತ್ತಿರುವ 50 ವಿದ್ಯಾರ್ಥಿಗಳಿದ್ದಾರೆ. ಬಹುತೇಕ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದಾರೆ. ಕೂಲಿ ಕೆಲಸ ಮಾಡುವ ಬೋವಿ ಸಮುದಾಯದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬೋವಿ ಸಮುದಾಯದ ಕೂಲಿ ಕಾರ್ಮಿಕರು ದೂರದ ಕಾಫಿ ತೋಟ ಹಾಗೂ ಶುಂಠಿ ಹೊಲದ ಕೆಲಸಗಳಿಗೆ ಹೋಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅನುಕೂಲವಾಗಿದೆ ಎನ್ನುತ್ತಾರೆ ಬೋವಿ ಸಮಾಜದ ಮುಖಂಡ ವೆಂಕಟೇಶ್.
ಶೀಘ್ರ ಸಮಸ್ಯೆ ನಿವಾರಣೆ
ಹಳೇಬೀಡು ಬಿಸಿಎಂ ಹಾಸ್ಟೆಲ್ ಸಮಸ್ಯೆಗಳನ್ನು ಗಮನಿಸಿದ್ದೇವೆ. ಯುಪಿಎಸ್ ಬ್ಯಾಟರಿ ಸೌರ ವಾಟರ್ ಹೀಟರ್ ದುರಸ್ತಿ ಮಾಡಿಸಲು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಹಣ ಬಂದ ತಕ್ಷಣ ದುರಸ್ತಿ ಮಾಡಿಸುತ್ತೇವೆ ಎಂದು ಹಿಂದು ವರ್ಗಗಳ ಇಲಾಖೆ ತಾಲ್ಲೂಕು ಅಧಿಕಾರಿ ಮದುಕಪ್ಪ ಎಂ.ಬಿ. ತಿಳಿಸಿದರು. ಹಾಸ್ಟೆಲ್‌ನ ಕೊಳವೆಬಾವಿನೀರು ಗಡುಸಾಗಿರುವುದರಿಂದ ಶುದ್ಧ ಕುಡಿಯುವ ನೀರಿನ ಫಿಲ್ಟರ್ ಕೆಲಸ ಮಾಡುತ್ತಿಲ್ಲ. ಪರ್ಯಾಯ ವ್ಯವಸ್ಥೆಯ ಕುರಿತು ಚಿಂತನೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಹಾಸ್ಟೆಲ್ ಕೆಲಸಗಳು ಕಾರ್ಯಗತವಾಗುತ್ತವೆ ಎನ್ನುತ್ತಾರೆ ಅವರು.
ಹಳೇಬೀಡಿನ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ ಸಮಸ್ಯೆಗಳ ಪಟ್ಟಿ ಮಾಡುತ್ತೇವೆ. ನಂತರ ಉನ್ನತ ಅಧಿಕಾರಿಗಳೊಂದಿಗೆ ಸಮಸ್ಯೆ ಇತ್ಯರ್ಥ ಕುರಿತು ಮಾತುಕತೆ ನಡೆಸುತ್ತೇವೆ.ದೇಶಾಣಿ ಆನಂದ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡುತ್ತಿದೆ. ಗ್ರಾಮೀಣ ಭಾಗದ ಹಾಸ್ಟೆಲ್‌ಗಳ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.ಕಾಂತರಾಜು ಸವಾಸಿಹಳ್ಳಿ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.