
ಹಳೇಬೀಡು: ಅಹಿಂಸೆಯಿಂದ ವಿಶ್ವ ಶಾಂತಿ ಎಂಬ ಸಂದೇಶ ಸಾರಿದ ಜೈನ ಧರ್ಮದ 24 ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿ ಆಚರಣೆಅಡಗೂರು ಗ್ರಾಮದಲ್ಲಿ ಗುರುವಾರ ವೈಭವದಿಂದ ನರವೇರಿತು.
ಮಹಾವೀರ ಜೈನ ಸಂಘ, ರತ್ನತ್ರಯ ಮಹಿಳಾ ಸಮಾಜ ಹಾಗೂ ಯುವಕರ ಬಳಗದವರು ಶ್ರದ್ದಾಭಕ್ತಿಯಿಂದ ಮಹಾವೀರ ಜಯಂತಿ ಆಚರಿಸಿದರು.
ಅಡಗೂರು ಜಿನ ಮಂದಿರದಲ್ಲಿ ವಾದ್ಯ ಹಾಗೂ ಗಂಟೆನಾದದೊಂದಿಗೆ ನಸುಕಿನ 5 ಗಂಟೆಯಿಂದಲೇ ಧಾರ್ಮಿಕ ಕಾರ್ಯ ಆರಂಭವಾಯಿತು. ನಿತ್ಯಪೂಜೆ, ಜಯಂತಿಯ ಪೂಜೆ ನೆರವೇರಿತು. ಬಿಳಿ ಉಡುಪು ಧರಿಸಿದ್ದ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಮಸ್ತಕಾಭಿಷೇಕಕ್ಕೆ ಕಳಸ ನೀರು ತಂದರು. ಅಲಂಕೃತ ಪಲ್ಲಕ್ಕಿಯಲ್ಲಿ ಮಹಾವೀರರ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಚಿಣ್ಣರು ಪಂಚವರ್ಣದ ಬಾವುಟ ಹಿಡಿದು ಸಂಭ್ರಮಿಸಿದರು. ಪಲ್ಲಕ್ಕಿಯ ಮುಂದೆ ಯುವತಿಯರು ಚಾಮರ ಬೀಸುತ್ತ ಸಾಗಿದರು.
ಜಿನ ಮಂದಿರದಿಂದ ಕಲ್ಲೇಶ್ವರ ದೇಗುಲ ರಸ್ತೆಯಲ್ಲಿ ಸಾಗಿ ಪುನಃ ಜಿನ ಮಂದಿರಕ್ಕೆ ಸೇರಿತು.
ಮಸ್ತಕಾಭಿಷೇಕ: ಮಹಾವೀರ ತೀರ್ಥಂಕರ ಮೂರ್ತಿಗೆ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನಡೆಸಲಾಯಿತು. ದ್ರವ್ಯಗಳನ್ನು ಪೈಪೋಟಿಯಲ್ಲಿ ಹರಾಜಿನಲ್ಲಿ ಪಡೆದು ಜೈನ ಶ್ರಾವಕರು ಅಭಿಷೇಕ ನೆರವೇರಿಸಿದರು. ಪುರೋಹಿತರು ಪೂಜೆ ನಡೆಸಿ ಅರ್ಘ್ಯ ಸಮರ್ಪಿಸಿದ ನಂತರ ಅಭಿಷೇಕಕ್ಕೆ ಚಾಲನೆ ನೀಡಲಾಯಿತು. ಜಲ, ಗಂಧ, ಅರಿಸಿಣ, ಹಾಲು, ಎಳನೀರು, ಕಷಾಯ, ಕಬ್ಬಿನಹಾಲು, ಕಲ್ಕಚೂರ್ಣ, ಹೂವಿನ ಅಭಿಷೇಕ ನೆರವೇರಿತು. ಬಿಳಿ ಅಮೃತ ಶಿಲೆಯ ಪದ್ಮಾಸನ ಭಂಗಿಯ ಮೂರ್ತಿ ದ್ವವ್ಯಗಳಿಂದ ವಿಭಿನ್ನವಾಗಿ ಕಂಗೊಳಿಸಿತು. ಮಧ್ಯಾಹ್ನ ಪುಷ್ಪಾಲಂಕೃತ ಮಂಟಪದಲ್ಲಿ ಮಹಾವೀರ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ದಾರಿ ಉದ್ದಕ್ಕೂ ಭಕ್ತರು ಹಣ್ಣಕಾಯಿ ಪೂಜೆ ಸಲ್ಲಿಸಿದರು.
ಭಕ್ತರಿಗೆ ಊಟ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ತಂಪುಪಾನೀಯ ಸಹ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.