
ಹಳೇಬೀಡು: ಶಾಂತಿಯ ಸಂದೇಶ ಸಾರಿದ ತೀರ್ಥಂಕರರಲ್ಲಿ ಒಬ್ಬರಾದ 1008 ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಇಲ್ಲಿನ ಬಸ್ತಿಹಳ್ಳಿಯಲ್ಲಿ ಭಾನುವಾರ ವರ್ಣಮಯ ಮಸ್ತಕಾಭಿಷೇಕ ನಡೆಯಿತು.
ಹಾಸನದ ದಿಗಂಬರ ಜೈನ ಯುವಕ ಸಂಘ, ದೊಡ್ಡಬಸದಿ ಜೈನ ಸಂಘ ಹಾಗೂ ಹಾಸನದ ಸಮಸ್ತ ಜೈನ ಸಮಾಜದ ಅಶ್ರಯದಲ್ಲಿ ನಡೆದ ಮಸ್ತಕಾಭಿಷೇಕವನ್ನು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದ ಮಸ್ತಕಾಭಿಷೇಕದಲ್ಲಿ ಕಂಬದಹಳ್ಳಿ ಜೈನ ಮಠದ ವಿಚಾರ ಪಟ್ಟ ಕ್ಷುಲ್ಲಕ ಆನಂದ ಕೀರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಿನ ಮಂದಿರ ಆವರಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಭವ್ಯವಾದ ಶಾಂತಿನಾಥ ಮಂದಿರದಲ್ಲಿ ಗಂಧ, ಚಂದನದ ಕಂಪಿನೊಂದಿಗೆ ವಿಭಿನ್ನ ಬಣ್ಣದ ಹೂವುಗಳು ಘಮಘಮಿಸಿದವು. ಪುರೋಹಿತರು ಹಾಗೂ ಜೈನ ಶ್ರಾವಕ, ಶ್ರಾವಕಿಯರು, ಶಾಂತಿನಾಥ ಸ್ವಾಮಿಯಲ್ಲಿ ಪ್ರಾರ್ಥನೆ ನಡೆಸಿದ ನಂತರ ಶ್ರವಣಬೆಳಗೊಳ ಚಾರುಕೀರ್ತಿ ಪೀಠದ ಬಿರುದಾವಳಿಗಳನ್ನು ಘೋಷಿಸಿ, ಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಾಯಿತು. ವಿವಿಧ ಪೂಜಾ ವಿಧಾನದೊಂದಿಗೆ ಪುರೋಹಿತರ ಮಂತ್ರಘೋಷ ಮಾಡಿದರು.
ತೀರ್ಥಂಕಕರ ಮೂರ್ತಿಗೆ ದ್ರವ್ಯಗಳಿಂದ ಅಭಿಷೇಕ ನೆರವೇರಿದಾಗ ಭಕ್ತರಿಂದ ಶಾಂತಿನಾಥ ಭಗವಾನ್ ಕೀ ಜೈ, ವಿಶ್ವಧರ್ಮಕೀ ಜೈ, ಅಹಿಂಸೋ ಪರಮೋ ಧರ್ಮಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿದವು. ಮಹಿಳೆಯರು ಸುಶ್ರಾವ್ಯವಾಗಿ ಜಿನ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು.
108 ಕಳಸಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಮಂದಸ್ಮಿತ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ನಂತರ ಎಳನೀರು, ಕ್ಷೀರ(ಹಾಲು), ಇಕ್ಷುರಸ (ಕಬ್ಬಿನಹಾಲು), ಚತುಷ್ಕೋನ (ನಾಲ್ಕುದಿಕ್ಕಿನಲ್ಲಿ ಸ್ಥಾಪಿಸಿದ) ಕಳಸ, ಶ್ರೀಗಂಧ, ಅರಿಶಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಸರ್ವೌಷದ (ಕಷಾಯ)ಗಳಿಂದ ಅಭಿಷೇಕ ನೆರವೇರಿಸಲಾಯಿತು.
ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿನಾಥ ಮೂರ್ತಿಗೆ ಶಾಂತಿಧಾರೆ ನೆರವೇರಿತು. ಕೊನೆಯಲ್ಲಿ ಬಣ್ಣದ ಹೂವುಗಳಿಂದ ಪುಷ್ಪವೃಷ್ಟಿ ನಡೆಯಿತು. ವಿವಿಧ ದ್ರವ್ಯಗಳು ಶಾಂತಿನಾಥ ಮೂರ್ತಿಯ ಮಸ್ತಕದಿಂದ ಮುಖಕ್ಕೆ ಇಳಿದಾಗ ಮುಖದ ಭಾವನೆಗಳು ವಿಭಿನ್ನವಾಗಿ ಕಂಗೊಳಿಸಿದವು.
ಅರಿಸಿನ, ಗಂಧ, ಚಂದನದ ಬಣ್ಣದೋಕುಳಿಯಲ್ಲಿ ಶಾಂತಿನಾಥ ಮೂರ್ತಿ ಮಿಂದೆದ್ದಾಗ ತೀರ್ಥಂಕರ ಮೂರ್ತಿಯ ಮುಖದಲ್ಲಿ ವಿಭಿನ್ನ ಭಾವನೆಗಳು ವ್ಯಕ್ತವಾದಂತೆ ಕಂಗೊಳಿಸಿತು ಎಂಬ ಮಾತು ನೆರದಿದ್ದ ಭಕ್ತರಿಂದ ಕೇಳಿ ಬಂತು.
ಪುರೋಹಿತರಾದ ಜಿನರಾಜೇಂದ್ರ, ಚಂದ್ರಪ್ರಸಾದ್ ಇಂದ್ರ, ಕಡದರವಳ್ಳಿ ಜಿನೇಂದ್ರ, ಎಚ್.ಎನ್.ಸುಖಿಕುಮಾರ್, ಜಯಕುಮಾರ ಬಾಬು ಪೂಜಾ ವಿಧಾನ ನೆರವೇರಿಸಿದರು. ಹಾಸನ ದಿಗಂಬರ ಜೈನ ಯವಕ ಸಂಘದ ಅಧ್ಯಕ್ಷ ಎಚ್.ಕೆ ದೇವ್ ನಾಗು, ಪದಾಧಿಕಾರಿಗಳಾದ ನಾಗರಾಜು ಎಚ್.ಪಿ., ಅಮೃತ್ ಎ., ಎಚ್.ಎಸ್. ಧನುಶ್, ಎಚ್.ಎ. ಸಮಂತ್, ಶ್ರೇಯಸ್, ಸನ್ಮತಿ, ಸ್ಥವನ್, ವಿಕಾಸ್ ನೇತೃತ್ವ ವಹಿಸಿದ್ದರು.
ಹಳೇಬೀಡಿನ ಬಸ್ತಿಹಳ್ಳಿಯ ಜಿನ ಮಂದಿರಗಳಲ್ಲಿ ಹೊಯ್ಸಳರ ಕಾಲದಿಂದಲೂ ಮಸ್ತಕಾಭಿಷೇಕ ನಡೆದಿದೆ. ಇಲ್ಲಿಯ ಶಾಂತಿನಾಥ ಮಸ್ತಕಾಭಿಷೇಕ ಜನಮನ್ನಣೆ ಪಡೆದಿದೆ.ಅಮೃತ್ ಎ. ಹಾಸನ ದಿಗಂಬರ ಜೈನ ಯುವಕ ಸಂಘದ ಸಂಘಟನಾ ಕಾರ್ಯದರ್ಶಿ
ಬಸ್ತಿಹಳ್ಳಿಯ ಜಿನ ಮಂದಿರದಲ್ಲಿ ನಡೆಯುವ ಮಸ್ತಕಾಭಿಷೇಕ ಭಕ್ತಿ ಭಾವಕ್ಕೆ ಕೊಂಡೊಯ್ಯುತ್ತದೆ. ಒಂದು ಧರ್ಮದ ಆಚರಣೆ ಎನ್ನುವುದಕ್ಕಿಂತ ಊರಿನ ಹಬ್ಬ ಎನಿಸುತ್ತದೆ.ವಿಜಯ್ ಕುಮಾರ್ ಬಿ.ಪಿ. ಬಸ್ತಿಹಳ್ಳಿ ನಿವಾಸಿ
ಭಗವಂತನ ದರ್ಶನದಿಂದ ಮನಸ್ಸು ಪ್ರಫುಲ್ಲ
ಭಗವಂತನ ದರ್ಶನದಿಂದ ಮನಸ್ಸು ಪ್ರಫುಲ್ಲವಾಗುತ್ತದೆ ಎಂದು ಕಂಬದಹಳ್ಳಿ ಜೈನ ಮಠದ ವಿಚಾರ ಪಟ್ಟ ಕ್ಷುಲ್ಲಕ ಆನಂದ ಕೀರ್ತಿ ಸ್ವಾಮೀಜಿ ಹೇಳಿದರು. ಮಸ್ತಕಾಭಿಷೇಕದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ದೇವರಿಗೆ ಅರ್ಘ್ಯ ಸಮರ್ಪಿಸುವುದರಿಂದ ಜೀವನದಲ್ಲಿ ಏಳಿಗೆ ಆಗುತ್ತದೆ. ಉತ್ತರ ಭಾರತದ ಯಾವುದೇ ಜಿನ ಮಂದಿರಕ್ಕೆ ತೆರಳಿದರೂ ಅರ್ಘ್ಯ ಸಮರ್ಪಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಹೀಗಾಗಿ ಅವರು ಸ್ಥಿತಿವಂತರಾಗಿದ್ದಾರೆ ಎಂದರು. ಮಕ್ಕಳಿಗೆ ದೇವರನ್ನು ಆರಾಧಿಸುವ ಅಭ್ಯಾಸ ರೂಢಿಸಿದರೆ ಮಕ್ಕಳಲ್ಲಿ ಉತ್ತಮ ಆಲೋಚನೆ ವೃದ್ಧಿಸುತ್ತದೆ ಎಂದು ಹೇಳಿದರು.
ಶಾಂತಿನಾಥ ಮಸ್ತಕಾಭಿಷೇಕ ವೈಶಿಷ್ಟ್ಯ
ಮೋಕ್ಷಪ್ರಾಪ್ತಿಯಾಗಿ ತೀರ್ಥಂಕರರಾಗುವ ಮೊದಲು ಚಕ್ರವರ್ತಿಯಾಗಿದ್ದ ಶಾಂತಿನಾಥರು ಅಂಹಿಸಾ ತತ್ವವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಶಾಂತಿನಾಥರ ಆಳ್ವಿಕೆಯ ಕಾಲದಲ್ಲಿ ಯುದ್ದಗಳ ಸಂಭವಿಸದಂತೆ ನೋಡಿಕೊಂಡಿದ್ದರು. ಪ್ರಜೆಗಳು ಶಾಂತಿಪ್ರೀಯರಾಗಿದ್ದಲ್ಲದೇ ಸುಭಿಕ್ಷವಾದ ಜೀವನ ಸಾಗಿಸಿದ್ದರು ಎಂಬ ಮಾತು ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕಕ್ಕೆ ಬಾಹುಬಲಿ ಮಸ್ತಕಾಭಿಷೇಕದಷ್ಟೇ ಪ್ರಾಮುಖ್ಯತೆ ಇದೆ. ಪಲ್ಲಕ್ಕಿ ಉತ್ಸವ: ವಿವಿಧ ಪೂಜಾ ವಿಧಾನಗಳು ಮುಗಿದ ನಂತರ ತೀರ್ಥಂಕರರ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಆರೋಹಣ ಮಾಡಲಾಯಿತು. ಮಂತ್ರಘೋಷ ಹಾಗೂ ಘಂಟೆ ಜಾಗಟೆಯ ನಾದದೊಂದಿಗೆ ಬಸ್ತಿಹಳ್ಳಿಯ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ಸಾಗಿತು. ಶ್ರಾವಕ ಶ್ರಾವಕಿಯರು ಪುಷ್ಪವೃಷ್ಟಿಯೊಂದಿಗೆ ಛತ್ರಿ ಚಾಮರ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಚಿಣ್ಣರು ಪಂಚವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.