
ಹಳೇಬೀಡು: ಬಸ್ತಿಹಳ್ಳಿಯ ಹೊಯ್ಸಳರ ಕಾಲದ ಜಿನ ಮಂದಿರದಲ್ಲಿ ವಿರಾಜಮಾನರಾಗಿರುವ 18 ಅಡಿ ಎತ್ತರದ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಜ.25 ರಂದು ಮಸ್ತಕಾಭಿಷೇಕ ನೆರವೇರಲಿದೆ.
ಹಾಸನದ ದಿಗಂಬರ ಜೈನ ಯುವಕ ಸಂಘ, ದೊಡ್ಡ ಬಸದಿ ಜೈನ ಸಂಘ ಹಾಗೂ ಹಾಸನದ ಸಮಸ್ತ ಜೈನ ಸಮಾಜದ ಆಶ್ರಯದಲ್ಲಿ ಮಸ್ತಕಾಭಿಷೇಕ ಆಯೋಜಿಸಲಾಗಿದೆ. ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಿಶೇಷ ಪೂಜಾ ವಿಧಾನಗಳು ನಡೆಯಲಿವೆ. ಕಂಬದಹಳ್ಳಿ ಮಠದ ವಿಚಾರ ಪಟ್ಟ ಕ್ಷುಲ್ಲಕ ಆನಂದ ಕೀರ್ತಿ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಜಲ, ಹಾಲು, ಗಂಧ, ಚಂದನ, ಅರಿಶಿಣ, ಕಲ್ಕಚೂರ್ಣ, ಕಬ್ಬಿನಹಾಲು, ಎಳನೀರು, ಕಷಾಯಗಳಿಂದ ಶಾಂತಿನಾಥ ಮೂರ್ತಿ ಮಿಂದೆಳುವ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧೆಡೆಯಿಂದ ಭಕ್ತರು ಬರಲಿದ್ದಾರೆ ಎಂದು ಹಾಸನ ದಿಗಂಬರ ಜೈನ ಯುವಕರ ಸಂಘದ ಅಧ್ಯಕ್ಷ ದೇವನಾಗ್ ಎಚ್.ಕೆ. ತಿಳಿಸಿದರು.
ಭವ್ಯವಾದ ಜಿನ ಮಂದಿರದಲ್ಲಿ ದಿಗಂಬರನಾಗಿ ವಿರಾಜಮಾನನಾಗಿರುವ ವೈರಾಗ್ಯ ಮೂರ್ತಿಗೆ ನಡೆಯುವ ಮಸ್ತಕಾಭಿಷೇಕ ಮಹೋತ್ಸವ, ಆಹಿಂಸೆ, ತ್ಯಾಗ ಹಾಗೂ ಶಾಂತಿಯುತ ಬದುಕಿನ ಸಂದೇಶ ಸಾರಲಿದೆ. ಹೊಯ್ಸಳ ರಾಜ ಬಿಟ್ಟಿದೇವ (ವಿಷ್ಣುವರ್ಧನ)ನ ಪಟ್ಟದರಿಸಿ ಶಾಂತಲೆ ಶಾಂತಿನಾಥ ತೀರ್ಥಂಕರರನ್ನು ಆರಾಧಿಸುತ್ತಿದ್ದಳು. ಅಂದಿನ ಕಾಲದಲ್ಲಿಯೇ ಬಸದಿಯಲ್ಲಿ ಮಸ್ತಕಾಭಿಷೇಕ ಹಾಗೂ ಆರಾಧನೆಗಳು ನಡೆಯುತ್ತಿದ್ದವು.
4 ದಶಕಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಪಾಯಣ್ಣಶೆಟ್ಟಿ ಎಂಬ ಶ್ರಾವಕರು ಜೈನ ಸಮಾಜವನ್ನು ಒಗ್ಗೂಡಿಸಿ, ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನೆರವೇರಿಸುತ್ತಿದ್ದರು. ಪಾಯಣ್ಣಶೆಟ್ಟರ ಕಾಲದ ಮಸ್ತಕಾಭಿಷೇಕ ವೈಭವವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು ಎನ್ನುತ್ತಾರೆ ಸ್ಥಳೀಯರು.
30 ವರ್ಷಗಳಿಂದ ಹಾಸನ ಜೈನ ಸಮಾಜದ ವಿವಿಧ ಸಂಘಗಳು ಮಸ್ತಕಾಭಿಷೇಕ ನಡೆಸಿಕೊಂಡು ಬಂದಿವೆ. 10 ವರ್ಷದಿಂದ ಹಾಸನದ ದಿಗಂಬರ ಜೈನ ಯುವಕ ಸಂಘದವರು ಮಸ್ತಕಾಭಿಷೇಕ ನಡೆಸುತ್ತಿದ್ದಾರೆ.
ಬಸ್ತಿಹಳ್ಳಿಯ ವಿಜಯಿ ಪಾರ್ಶ್ವನಾಥ, ಆದಿನಾಥ ಹಾಗೂ ಶಾಂತಿನಾಥ ತೀರ್ಥಂಕರರ ಮೂರು ಜಿನಮಂದಿರಗಳು ಶ್ರವಣಬೆಳಗೂಳದ ಚಾರುಕೀರ್ತಿ ಭಟ್ಟಾರಕ ಪೀಠದ ಪರಂಪರೆಯ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ಶ್ರವಣಬೆಳಗೊಳ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರತಿವರ್ಷ ಮಸ್ತಕಾಭಿಷೇಕ ನಡೆಸಲಾಗುತ್ತಿದೆ.
ನಂತರ ಶಾಂತಿನಾಥ ತೀರ್ಥಂಕರರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸ್ವಾಮೀಜಿಗಳ ಪ್ರವಚನ, ಪಾದಪೂಜೆ ನೆರವೇರಲಿದೆ. ಧಾರ್ಮಿಕ ಸಭೆಯಲ್ಲಿ ಶಾಂತಿನಾಥ ಪುರಾಣ ಹಾಗೂ ಹೊಯ್ಸಳರ ಇತಿಹಾಸದ ಮಾಹಿತಿ ಲಭ್ಯವಾಗಲಿದೆ. ಜಿನ ಮಂದಿರ ಆವರಣದಲ್ಲಿ ರಾಜವೈಭವ ಮರುಕಳಿಸಲಿದೆ. ಜಿನಮಂದಿರದ ಪೂಜಾ ಕಾರ್ಯಗಳಿಗಾಗಿ ರಾಜರು ಉಂಬಳಿ ಬಿಟ್ಟಿದ್ದರು ಎಂಬುದು ಶಿಲಾ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಯುವಕರ ಸಂಘದ ಮಾಜಿ ಅಧ್ಯಕ್ಷ ಎಚ್.ಪಿ.ನಾಗರಾಜು ಹೇಳಿದರು.
ಹೊಯ್ಸಳರ ಕಾಲದಿಂದಲೂ ನಡೆಯುತ್ತಿದೆ ಪೂಜಾ ವಿಧಾನ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ಹಲವು ವರ್ಷ ಮಸ್ತಕಾಭಿಷೇಕ ನಡೆಸಿದ್ದ ಶ್ರಾವಕ ಮುಕ್ತಿಹಳ್ಳಿ ಪಾಯಣ್ಣ ಶೆಟ್ಟಿ
ಬಸ್ತಿಹಳ್ಳಿ ಜಿನಮಂದಿರದ ಶಾಂತಿನಾಥ ತೀರ್ಥಂಕರರಿಗೆ ಹಾಸನ ಜೈನ ಸಮಾಜದವರು ಪ್ರತಿ ವರ್ಷ ಮಸ್ತಕಾಭಿಷೇಕ ನಡೆಸುತ್ತಿದ್ದಾರೆ. ಧಾರ್ಮಿಕ ಆಚರಣೆ ಜಾತ್ರೆಯಂತೆ ಅಭಿವೃದ್ಧಿ ಆಗಬೇಕು.ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರವಣಬೆಳಗೊಳ ಜೈನ ಮಠ
ತೀರ್ಥಂಕರರು ಹೇಳಿದ ಶಾಂತಿ ಸಂದೇಶವನ್ನು ಎಲ್ಲರಿಗೂ ತಿಳಿಸುವುದರೊಂದಿಗೆ ಲೋಕಕಲ್ಯಾಣಾರ್ಥವಾಗಿ ಶಾಂತಿನಾಥ ತೀರ್ಥಂಕರರಿಗೆ ಪ್ರತಿ ವರ್ಷ ಮಸ್ತಕಾಭಿಷೇಕ ನಡೆಸಲಾಗುತ್ತಿದೆದೇವನಾಗ್ ಎಚ್.ಕೆ. ಹಾಸನ ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ
ಜಿನಮಂದಿರದ ವೈಶಿಷ್ಟ್ಯ 900 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಜಿನಮಂದಿರಗಳ ಕಂಬಗಳಲ್ಲಿ ಶಿಲ್ಪಿಗಳು ತಮ್ಮ ಕೈಚಳಕದಿಂದ ಸೂಕ್ಷ್ಮ ಕೆತ್ತನೆ ಮಾಡಿದ್ದಾರೆ. ಕಂಬಗಳಲ್ಲಿ ಕನ್ನಡಿಯ ಹೊಳಪು ಮೂಡಿಸಲಾಗಿದೆ. ಕಂಬಗಳಲ್ಲಿ ಪ್ರತಿಬಿಂಬ ವಿಭಿನ್ನವಾಗಿ ಕಾಣಿಸುತ್ತದೆ. ಜಿನಮಂದಿರದ ಆವರಣದಲ್ಲಿರುವ ಶಿಲಾಶಾಸನಗಳು ಹಾಗೂ ಗೋಡೆ ಬರಹಗಳಲ್ಲಿ ಇತಿಹಾಸದ ಆಮೂಲ್ಯ ಸಾಕ್ಷಿ ಅಡಗಿದೆ. ಒಂದು ಮಂದಿರದಲ್ಲಿ ವಿಜಯಿ ಪಾರ್ಶ್ವನಾಥ ಮತ್ತೊಂದು ಮಂದಿರದಲ್ಲಿ ಶಾಂತಿನಾಥ ತೀರ್ಥಂಕರರ ಮೂರ್ತಿಗಳನ್ನು ನಿಲ್ಲಿಸಲಾಗಿದೆ. ಪುಟ್ಟಗುಡಿಯಲ್ಲಿ ಆದಿನಾಥ ತೀರ್ಥಂಕರರ ಎರಡು ಅಡಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಯಕ್ಷಿ ಕೂಷ್ಮಾಂಡಿನಿ ಮಾತೆ ಜಿನವಾಣಿ (ಸರಸ್ವತಿ) ಮಾತೆ ಹಾಗೂ ಜೈನ ಯಕ್ಷ ಬ್ರಹ್ಮದೇವ ಮೂರ್ತಿಗಳು ಕುಸುರಿ ಕೆತ್ತನೆ ಕೆಲಸದಿಂದ ನಯನ ಮನೋಹರವಾಗಿವೆ. 25 ಅಡಿ ಎತ್ತರದ ಬ್ರಹ್ಮದೇವರ ಮಾನಸ್ತಂಭ 8 ಅಡಿ ಎತ್ತರದ ಕ್ಷೇತ್ರಪಾಲ ಸ್ವಾಮಿಯ ಮಾನಸ್ತಂಭ ಭಕ್ತಿ ಲೋಕಕ್ಕೆ ಕೊಂಡೊಯ್ಯುತ್ತವೆ. ಜಿನ ಮಂದಿರಗಳು ಜೈನ ಶ್ರಾವಕ ಶ್ರಾವಕಿಯರು ಆರಾಧನಾ ವಿಧಾನಗಳನ್ನು ನಡೆಸಲು ಅನುಕೂಲವಾಗಿದೆ. ಜೈನ ಮುನಿಗಳು ಧ್ಯಾನ ಮಾಡಲು ಸ್ಥಳ ಪ್ರಶಸ್ತವಾಗಿದೆ ಎನ್ನುತ್ತಾರೆ ಹಾಸನದ ನಿವೃತ್ತ ಶಿಕ್ಷಕಿ ಅಜಿತ್ ಗೋಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.