
ಹಿರೀಸಾವೆ: ಹೋಬಳಿಯ ಬೂಕನಬೆಟ್ಟದ ರಂಗನಾಥ ಸ್ವಾಮಿಯ ದನಗಳ ಜಾತ್ರೆ ಆವರಣವು ಹಳ್ಳಿಕಾರ್ ತಳಿಯ ಹೋರಿ, ಎತ್ತುಗಳಿಂದ ತುಂಬಿದೆ. ಜಾತ್ರೆಗೆ ಬಂದಿರುವ ಒಂದು ಜೊತೆ ಕೋಣಗಳು ರೈತರನ್ನು ಆಕರ್ಷಿಸುತ್ತಿವೆ.
ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರು ಗ್ರಾಮದ ರೈತ ನಂಜುಂಡೇಗೌಡ, ಎರಡು ವರ್ಷದಿಂದ ಸಾಕಿರುವ ಕೋಣಗಳನ್ನು ಜಾತ್ರೆಯಲ್ಲಿ ಕಟ್ಟಿದ್ದಾರೆ. ಈ ಭಾಗದಲ್ಲಿ ಎತ್ತು, ಹೋರಿ, ಹಸುಗಳನ್ನು ಸಾಕುವುದು ಸಾಮಾನ್ಯ. ಆದರೆ ಈ ರೈತ ಉತ್ತಮ ರೀತಿಯಲ್ಲಿ ಕೋಣಗಳನ್ನು ಸಾಕಿ, ಉಳುಮೆ ಮಾಡಿ, ಗಾಡಿ ಹೂಡಿ, ಇದೀಗ ಜಾತ್ರೆಯಲ್ಲಿ ಕೋಣಗಳನ್ನು ಮಾರಾಟ ಮಾಡಲು ಬಂದಿದ್ದಾರೆ.
‘ಸುಮಾರು ₹1.70 ಲಕ್ಷ ಬೆಲೆ ಹೇಳುತ್ತೇನೆ. ವ್ಯಾಪಾರಕ್ಕೆ ಕೂತಾಗ, ನಾನು ನಿಗದಿ ಪಡಿಸಿರುವ ಬೆಲೆ ಸಮೀಪಕ್ಕೆ ಬಂದರೆ ಮಾರುತ್ತೇನೆ’ ಎನ್ನುತ್ತಾರೆ ಕೋಣದ ಮಾಲೀಕರು.
ಸಾವಿರಾರು ಜಾನುವಾರುಗಳು ಜಾತ್ರೆಗೆ ಬಂದಿದ್ದು, ಬುಧವಾರ ₹75 ಸಾವಿರದಿಂದ ₹1.50 ಲಕ್ಷದೊಳಗಿನ ಉಳುಮೆಯ ಎತ್ತುಗಳ ವ್ಯಾಪಾರವನ್ನು ಸ್ಥಳೀಯ ರೈತರು ಮಾಡಿದರು. ಗುರುವಾರ ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು, ಹೋರಿಗಳು ಮೆರವಣಿಗೆಯಲ್ಲಿ ಬರುತ್ತವೆ. ಉತ್ತರ ಕರ್ನಾಟಕದ ರೈತರು ನಾಳೆಯಿಂದ ಜಾತ್ರೆಗೆ ಬರಲಿದ್ದು, ಉತ್ತಮ ಜಾನುವಾರುಗಳು ವ್ಯಾಪಾರವಾಗುವ ನಿರೀಕ್ಷೆಯಲ್ಲಿ ಇದ್ದಾರೆ ಸ್ಥಳೀಯ ರೈತರು.
ನಾಟಕ ಪ್ರದರ್ಶನ, ಕ್ರೀಡಾ ಸ್ಪರ್ಧೆ
ಜಾತ್ರೆಯಲ್ಲಿನ ರೈತರ ಮನರಂಜನೆಗಾಗಿ ಜ.9 10 ಮತ್ತು 11ರಂದು ರಾತ್ರಿ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ಎಂಬ ಪೌರಾಣಿಕ ನಾಟಕವನ್ನು ಸ್ಥಳೀಯ ಕಲಾವಿದರು ಪ್ರದರ್ಶನ ಮಾಡಲಿದ್ದಾರೆ. ತಾಲ್ಲೂಕು ಆಡಳಿತವು ಹಿರೀಸಾವೆ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಜ.17ರಂದು ಬೆಳಿಗ್ಗೆ 8 ಗಂಟೆಯಿಂದ ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ. ಮಹಿಳೆಯರಿಗೆ ರಂಗೋಲಿ ಮ್ಯಾರಥಾನ್ ಓಟ ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಪುರಷರಿಗೆ ಮ್ಯಾರಥಾನ್ ಓಟ ಹಗ್ಗ ಜಗ್ಗಾಟ ಸ್ಲೋ ಸೈಕಲ್ ರೇಸ್ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ತಿಳಿಸಿದ್ದಾರೆ.
ಮೊದಲು ಎತ್ತು ಹೋರಿಗಳನ್ನು ಸಾಕಿ ಕೃಷಿ ಮಾಡುತ್ತಿದ್ದೆ. ನಂತರ ದಿನಗಳಲ್ಲಿ ಕೋಣಗಳನ್ನು ಸಾಕುವ ಆಸಕ್ತಿ ಮೂಡಿತು.ನಂಜುಂಡೇಗೌಡ, ಚನ್ನರಾಯಪಟ್ಟಣ ತಾಲ್ಲೂಕು ದಿಂಡಗೂರು ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.