ADVERTISEMENT

ಹಾಸನ | 5,34 ಲಕ್ಷ ಮನೆಗಳು; 4,900 ಗಣತಿದಾರರು

ಇಂದಿನಿಂದ ಅಧಿಕೃತವಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:10 IST
Last Updated 23 ಸೆಪ್ಟೆಂಬರ್ 2025, 6:10 IST
   

ಹಾಸನ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಾದ್ಯಂತ ವಿದ್ಯುತ್ ಸಂಪರ್ಕ ಪಡೆದ 5,34,221 ಮನೆಗಳಿಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು, ಸೆ.22ರಿಂದ ಅಕ್ಟೋಬರ್ 7ರವರೆಗೆ ನಡೆಸಲಾಗುತ್ತಿದೆ.

ಸೋಮವಾರ ಜಿಲ್ಲೆಯ ಎಲ್ಲ ಗಣತಿದಾರರಿಗೆ ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಡಲಾಗಿದೆ. ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನಗರಕ್ಕೆ ಬರಲಿದ್ದು, ಅಧಿಕೃತ ಚಾಲನೆ ನೀಡುವ ಸಾಧ್ಯತೆ ಇದೆ.

ಮನೆಗಳಿಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ಕುಟುಂಬದ ಎಲ್ಲ ಸದಸ್ಯರ ಸರಿಯಾದ, ಸಂಪೂರ್ಣ ವಿವರ, ಪಡಿತರ ಚೀಟಿ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಅಂಗವಿಕಲರಾಗಿದ್ದಲ್ಲಿ ಅಂಗವಿಕಲರ ಕಾರ್ಡ್ ಅಥವಾ ಪ್ರಮಾಣಪತ್ರಗಳನ್ನು ಸಿದ್ದವಾಗಿ ಇಟ್ಟುಕೊಳ್ಳಬೇಕು. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್‍ಗಳು ಮೊಬೈಲ್ ಸಂಖ್ಯೆಗಳಿಗೆ ಜೋಡಣೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ADVERTISEMENT

ಸಮೀಕ್ಷೆ ವೇಳೆ ಇ–ಕೆವೈಸಿ ಪ್ರಕ್ರಿಯೆಗಾಗಿ ಒಟಿಪಿ ಬರಲಿದ್ದು, ಒಂದು ವೇಳೆ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರ ಫೋನ್ ಮೂಲಕ ಒಟಿಪಿ ಪಡೆದು ಮಾಹಿತಿ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್‌ ತಿಳಿಸಿದ್ದಾರೆ.

ಗಣತಿದಾರರ ಪ್ರಶ್ನಾವಳಿಯಲ್ಲಿ ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಕೌಶಲ ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ಥಿ ವಿವರ, ಧರ್ಮ, ಜಾತಿ, ಉಪ ಜಾತಿ, ಕುಲಕಸುಬು, ಮುಂತಾದ ಮಾಹಿತಿಗಳ ಬಗ್ಗೆ ಪ್ರಶ್ನೆಗಳಿದ್ದು, ಪ್ರತಿ ಕುಟುಂಬಗಳು ಮಾಹಿತಿ ನೀಡಬೇಕು. ಸಂಬಂಧಪಟ್ಟ ದಾಖಲಾತಿ ಸಿದ್ದಪಡಿಸಿ ಇಟ್ಟುಕೊಂಡು ಗಣತಿದಾರರಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಗಣತಿದಾರರು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.