
ಹಾಸನ: ಕಾರ್ಮಿಕರ ಆರ್ಥಿಕ ಭದ್ರತೆ ಹಾಗೂ ವೃದ್ಧಾಪ್ಯದಲ್ಲಿ ಪಿಂಚಣಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕಾರ್ಮಿಕ ಇಲಾಖೆ ವಿವಿಧ ಯೋಜನೆ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಎರಡು ದಿನಗಳಿಂದ ಜಿಲ್ಲಾ ಕಾರ್ಮಿಕ ಇಲಾಖೆ ವತಿಯಿಂದ ವಿಶೇಷ ಉಚಿತ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕಾರ್ಮಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ 6,458 ಮಂದಿ, ಪ್ರಧಾನಮಂತ್ರಿ ಕಿಸಾನ್ ಮಾನ್-ಧನ್ ಯೋಜನೆಯಡಿ 5,795 ಮಂದಿ ಹಾಗೂ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಅನ್ವಯಿಸುವ ಎನ್‌ಪಿಎಸ್–ಟ್ರೇಡರ್ಸ್ ಯೋಜನೆಯಡಿ 45 ಮಂದಿ ನೋಂದಾಯಿಸಿಕೊಂಡಿದ್ದಾರೆ.
ಫೆ. 6 ಮತ್ತು 7ರಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಯಿತು. ಸದ್ಯ ಹಾಸನ, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ನೋಂದಣಿ ಪ್ರಕ್ರಿಯೆ ನಡೆದಿದೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ 70 ಮಂದಿ, ಇ-ಶ್ರಮ ಯೋಜನೆಯಡಿ 70 ಮಂದಿ ಹಾಗೂ ಎನ್‌ಪಿಎಸ್ ಯೋಜನೆಯಡಿ 14 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ: ಅಸಂಘಟಿತ ವಲಯದ ಕಾರ್ಮಿಕರ ವೃದ್ಧಾಪ್ಯದ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತಂದಿದೆ.
ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಗೃಹ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಹಮಾಲಿಗಳು, ರಿಕ್ಷಾ ಚಾಲಕರು, ಕೃಷಿ ಹಾಗೂ ಕಟ್ಟಡ ಕಾರ್ಮಿಕರು, ಕೈಮಗ್ಗ, ಚರ್ಮೋದ್ಯಮ, ಬೀಡಿ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಗಳ ಕಾರ್ಮಿಕರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
ಅರ್ಜಿ ಸಲ್ಲಿಸುವವರು ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು. 18 ರಿಂದ 40 ವರ್ಷದೊಳಗಿರಬೇಕು. ಮಾಸಿಕ ಆದಾಯ ₹15ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇಎಸ್‌ಐ, ಪಿಎಫ್ ಅಥವಾ ಎನ್‌ಪಿಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಉಳಿತಾಯ ಖಾತೆ ಹೊಂದಿರಬೇಕು. ಇಂತಹ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿ ಮಾಡಬಹುದು.
ಅರ್ಹ ಕಾರ್ಮಿಕರು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ವಿವರಗಳು, ಪ್ರಾರಂಭಿಕ ವಂತಿಕೆ ಮೊತ್ತ ಹಾಗೂ ನಾಮನಿರ್ದೇಶಿತರ ಮಾಹಿತಿಯೊಂದಿಗೆ ನೋಂದಣಿ ಮಾಡಿಸಿಕೊಳ್ಳಬಹುದು. ಮುಂದಿನ ಮಾಸಿಕ ವಂತಿಕೆ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ಮೂಲಕ ಕಟಾವು ಮಾಡಲಾಗುತ್ತದೆ.
ಫಲಾನುಭವಿಗಳು 60 ವರ್ಷ ವಯಸ್ಸು ಪೂರ್ಣಗೊಳಿಸಿದ ನಂತರ ತಿಂಗಳಿಗೆ ಕನಿಷ್ಠ ₹3ಸಾವಿರ ಪಿಂಚಣಿ ಪಡೆಯಲಿದ್ದಾರೆ. ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ. ಯೋಜನೆ ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಎಲ್ಲ ಮಾಹಿತಿ ಎಸ್‌ಎಂಎಸ್ ಮೂಲಕ ಫಲಾನುಭವಿಗಳಿಗೆ ತಲುಪಿಸಲಾಗುತ್ತದೆ.
ಎನ್‌ಪಿಎಸ್–ಟ್ರೇಡರ್ಸ್ ಯೋಜನೆ:
ಚಿಲ್ಲರೆ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬೆಂಬಲಿತ ಎನ್‌ಪಿಎಸ್–ಟ್ರೇಡರ್ಸ್ ಯೋಜನೆಯಡಿ 60 ವರ್ಷ ನಂತರ ತಿಂಗಳಿಗೆ ₹3ಸಾವಿರ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. 18–40 ವರ್ಷ ವಯಸ್ಸಿನ, ವಾರ್ಷಿಕ ವಹಿವಾಟು ₹1.5 ಕೋಟಿಗಿಂತ ಕಡಿಮೆ ಇರುವ ವ್ಯಾಪಾರಿಗಳು ಈ ಯೋಜನೆಗೆ ಅರ್ಹರು.
ಕಾರ್ಮಿಕರು ವಂತಿಕೆ ಪಾವತಿಸಲು ಹಿಂಜರಿಕೆ ಇದೆ. ಇಂದು ಮಾಡಿದ ಹೂಡಿಕೆಯಿಂದ ಇಳಿ ವಯಸ್ಸಿನಲ್ಲಿ ಪ್ರಯೋಜನವಾಗಲಿದೆ. ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ. ಅಭಿಯಾನ ಆದ್ಯತೆ ಅನುಸಾರ ನಡೆಯಲಿದೆ.ಯಮುನಾ, ಜಿಲ್ಲಾ ಕಾರ್ಮಿಕ ಅಧಿಕಾರಿ
ಕಾರ್ಮಿಕ ಇಲಾಖೆಯಿಂದ ಆಯಾ ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳ ನೋಂದಣಿ ಪ್ರಕ್ರಿಯೆ ನಡೆಸುತ್ತಿರುವುದರಿಂದ ಹೆಚ್ಚು ಅನುಕೂಲವಾಗಿದೆ. ಇದರಿಂದ ಆರ್ಥಿಕ ಭದ್ರತೆ ಸಿಗಲಿದ್ದು ಕುಟುಂಬಕ್ಕೆ ನೆರವಾಗಲಿದೆ.ಆಶಾ, ಸಕಲೇಶಪುರದ ಫಲಾನುಭವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.