ADVERTISEMENT

15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ

ಅಕ್ಟೋಬರ್‌ 13 ರಿಂದ ಹಾಸನಾಂಬ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 8:57 IST
Last Updated 10 ಸೆಪ್ಟೆಂಬರ್ 2022, 8:57 IST
   

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಅಕ್ಟೋಬರ್ 13 ರಿಂದ 27 ರವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.

ಹಾಸನಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ದೇವಾಲಯ ಆವರಣ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷಕೊಮ್ಮೆ ಕೆಲವು ದಿನಗಳು ಮಾತ್ರ ದರ್ಶನ ಕಲ್ಪಿಸುವ ಹಾಸನಾಂಬ‌ ದೇವಿಯ ದೇವಾಲಯದ ಗರ್ಭಗುಡಿ ಆಶ್ವೀಜ ಮಾಸದ ಮೊದಲ ಗುರುವಾರ ತೆರೆಯಲಾಗುವುದು ಎಂದರು.

ಭಕ್ತರಿಗೆ ದರ್ಶನ ಕರುಣಿಸಲಿರುವ ಹಾಸನಾಂಬೆ ದೇಗುಲ ಈ ಬಾರಿ 15 ದಿನಗಳು ಬಾಗಿಲು ತೆರೆಯಲಿದ್ದು, ಭಕ್ತರಿಗೆ 12 ದಿನಗಳು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 15 ದಿನಗಳಲ್ಲಿ ಮೊದಲ ಮತ್ತು ಕೊನೆಯ ದಿನ ಹಾಗೂ ಗ್ರಹಣ ಇರುವುದರಿಂದ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ದರ್ಶನ ಅವಕಾಶ ಇರುವುದಿಲ್ಲ ಎಂದರು.

ADVERTISEMENT

ಕೋವಿಡ್‌–19 ನಿಂದಾಗಿ ಎರಡು ವರ್ಷ ಸರಳವಾಗಿ ಹಾಸನಾಂಬ ದೇವಿ ಜಾತ್ರಾ ಮಹೋತ್ಸವ ಜರುಗಿದ್ದು, ಈ ಬಾರಿ ಅದ್ಧೂರಿಯಾಗಿ ಆಯೋಜಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೊರ ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಅಚ್ಚುಕಟ್ಟಾದ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ .

ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದ್ದು, ಅಂತಿಮವಾದ ತೀರ್ಮಾನ ಕೈಗೊಳ್ಳಲಾಗುವುದು. ಲಕ್ಷಾಂತರ ಮಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಸಮಯ ನಿಗದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಗತ್ಯ ಕ್ರಮ ಕೈಗೊಂಡು ದರ್ಶನದ ಸಮಯ ನಿಗದಿ ಮಾಡಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಿದ್ದು, ಜಿಲ್ಲಾಡಳಿತದಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಎರಡು ವರ್ಷ ಹೆಚ್ಚಿನ ಭಕ್ತರಿಗೆ ದರ್ಶನದ ಅವಕಾಶ ನೀಡಿರಲಿಲ್ಲ. ಈ ಬಾರಿ ಭಕ್ತಾದಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆ ಕಾಣುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.