ADVERTISEMENT

ಬಸ್‌ ನಿಲ್ದಾಣದಲ್ಲಿ ಗಾಂಧಿ ಛಾಯಾಚಿತ್ರ ಪ್ರದರ್ಶನ

ಗಮನ ಸೆಳೆದ ಸ್ವಾತಂತ್ರ್ಯ ಭಾರತ ಹೋರಾಟ, ದೇಶ, ವಿದೇಶದಲ್ಲಿ ತೆಗೆದ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 13:27 IST
Last Updated 5 ಅಕ್ಟೋಬರ್ 2019, 13:27 IST
ಹಾಸನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರವನ್ನು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜ್‌, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ವೀಕ್ಷಿಸಿದರು.
ಹಾಸನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರವನ್ನು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜ್‌, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ವೀಕ್ಷಿಸಿದರು.   

ಹಾಸನ: ನಗರ ಸಾರಿಗೆ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳ ವಿಶೇಷ ವಿನ್ಯಾಸದ ಫಲಕಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅ.8 ರವರೆಗೆ ಪ್ರದರ್ಶನ ನಡೆಯಲಿದೆ.

ಗಾಂಧೀಜಿ ಅವರ ಬಾಲ್ಯ, ದೇಶ, ವಿದೇಶಗಳಲ್ಲಿ ತೆಗೆದ ಚಿತ್ರಗಳು, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಗಾಂಧಿ ನೇತೃತ್ವದಲ್ಲಿ ನಡೆದ ಸತ್ಯಾಗ್ರಹಗಳು, ಹೋರಾಟಗಳು, ಅವರ ಮೇಲೆ ಪ್ರಭಾರ ಬೀರಿದ ವ್ಯಕ್ತಿಗಳು, ಸ್ವಾತಂತ್ರ್ಯ ಭಾರತದ ಮೊದಲ ದಿನದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ADVERTISEMENT

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿ ಕರ್ನಾಟಕದಲ್ಲಿ ಸಂಚರಿಸಿದ ಸ್ಥಳಗಳು, ದಿನಾಂಕವಾರು ವಿವರಗಳನ್ನು ಪ್ರದರ್ಶನದಲ್ಲಿ ಕಾಣಬಹುದು. ಅಲ್ಲದೇ ಎರಡು ವಿಭಿನ್ನ ಭಂಗಿಯ ಗಾಂಧಿ ಪ್ರತಿಕೃತಿಗಳು ಸಹ ನೋಡುಗರ ಕಣ್ಮನ ಸೆಳೆಯುತ್ತಿವೆ.

ರಾಷ್ಟ್ರಪಿತ ಜಗತ್ತಿಗೆ ನೀಡಿದ ಸತ್ಯ, ಅಹಿಂಸೆ, ಗ್ರಾಮ ರಾಜ್ಯ-ರಾಮ ರಾಜ್ಯ ಪರಿಕಲ್ಪನೆಯ ಭಾವನೆಗಳು ಅತ್ಯಂತ ಪ್ರಸ್ತುತವಾಗಿದೆ. ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರು ಅವರ ಜೀವನ, ಸಾಧನೆಗಳನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜ್ ಹೇಳಿದರು.

ಸ್ವಾತಂತ್ರ ಹೋರಾಟಗಾರ ಶಿವಣ್ಣ ಮಾತನಾಡಿ, ಗಾಂಧಿ ವಿಚಾರಧಾರೆಗಳು ಯುವ ಪೀಳಿಗೆಗಳ ಸುಸ್ಥಿರ ಬದುಕಿಗೆ ಪ್ರೇರಣಾದಾಯಕವಾಗಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ, ಸಹಾಯಕ ಸಂಚಾರಿ ವ್ಯವಸ್ಥಾಪಕ ಶಾಜೀಯ ಬಾನು, ಸಂಚಾರ ನಿರೀಕ್ಷಕ ಮಂಜುನಾಥ್, ಎ.ಪಿ.ಬಂಗಾರಿ, ಜಯಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.