ADVERTISEMENT

ಹಾಸನ |ಜಿಲ್ಲಾಡಳಿತದಿಂದ ಪಾರದರ್ಶಕ ಕೆಲಸ ಆಗುತ್ತಿಲ್ಲ: ದೇವರಾಜೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:07 IST
Last Updated 4 ಅಕ್ಟೋಬರ್ 2025, 7:07 IST
<div class="paragraphs"><p>&nbsp;ದೇವರಾಜೇಗೌಡ</p></div>

 ದೇವರಾಜೇಗೌಡ

   

ಹಾಸನ: ‘ಜಿಲ್ಲೆಯ ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆಯೋಜನೆಯಲ್ಲಿ ಜಿಲ್ಲಾಡಳಿತದಿಂದ ಪಾರದರ್ಶಕ ಕೆಲಸ ಆಗುತ್ತಿಲ್ಲ’ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಯಮದಂತೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ದೇವಸ್ಥಾನ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಮೇಲುಸ್ತುವಾರಿಯಾಗಿ ಜಿಲ್ಲಾಧಿಕಾರಿ ಇರುತ್ತಾರೆ. ಆದರೆ ಇವರ ಆಡಳಿತ ಸಂಪೂರ್ಣ ಹದಗೆಟ್ಟಿ ಹೋಗಿದೆ’ ಎಂದು ದೂರಿದರು.

ADVERTISEMENT

‘ಈ ಬಾರಿ ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಲಾಗಿದೆ. ಗೋಲ್ಡನ್ ಪಾಸ್‌ ವಿತರಿಸುವ ಕುರಿತು ನಿರ್ಧರಿಸಲಾಗಿದೆ. ಆದರೆ ಈ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಈ ಪಾಸ್‌ಗಳನ್ನು ಯಾರಿಗೆ ನೀಡಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು’ ಎಂದು ಒತ್ತಾಯಿಸಿದರು.

‘ನಮಗೆ ತಿಳಿದಿರುವ ಮಾಹಿತಿಯಂತೆ ಪ್ರತಿದಿನ ಒಂದು ಸಾವಿರ ಪಾಸಿನಂತೆ 18 ಸಾವಿರ ಪಾಸ್ ಮುದ್ರಿಸಲು ತೀರ್ಮಾನಿಸಲಾಗಿತ್ತು. ಆದರೆ ಈಗಾಗಲೇ 40 ಸಾವಿರ ಪಾಸ್‌ಗಳನ್ನು ಮುದ್ರಿಸಲಾಗಿದೆ’ ಎಂದರು.

‘ಕಳೆದ ಬಾರಿ ಶೇ 5ರಷ್ಟು ಪಾಸ್‌ಗಳು ಅಧಿಕೃತವಾಗಿ ಮುದ್ರಿತವಾದರೆ, ಉಳಿದ ಶೇ 95ರಷ್ಟು ಪಾಸ್‌ಗಳು ಅನಧಿಕೃತವಾಗಿ ಮುದ್ರಿತವಾಗಿದ್ದವು. ಇದರಿಂದ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ದೇವಸ್ಥಾನ ಆಡಳಿತ ಅಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಜಾತ್ರಾ ಮಹೋತ್ಸವದ ನಿಮಿತ್ತ ನಗರದಲ್ಲಿ ಅಳವಡಿಸುವ ಸಿಸಿಟಿವಿ ಕ್ಯಾಮೆರಾ, ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರೆ ಟೆಂಡರ್‌ಗಳನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಜರ್ಮನ್ ಟೆಂಟ್ ಹಾಗೂ ಬ್ಯಾರಿಕೇಡ್ ನಿರ್ಮಿಸಲು ₹ 60 ಲಕ್ಷದಿಂದ ₹ 65 ಲಕ್ಷ ಸಾಕಾಗುತ್ತದೆ. ಆದರೆ ₹ 86.99 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ನಗರದಲ್ಲಿ ಅಳವಡಿಸಲು ಸಿಸಿಟಿವಿ ಕ್ಯಾಮೆರಾ ಖರೀದಿ ಮಾಡಿದರೂ ₹ 20 ಲಕ್ಷ ವೆಚ್ಚವಾಗುತ್ತದೆ. ಆದರೆ ಬಾಡಿಗೆ ಪಡೆದಿರುವುದು ಏಕೆ? ಇದರಿಂದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣ ಪೋಲಾಗುತ್ತಿದೆ’ ಎಂದು ಆರೋಪಿಸಿದರು.

‘ಜಾತ್ರೆ ಸಂದರ್ಭದಲ್ಲಿ ನಿಯೋಜನೆಗೊಂಡ ಅಧಿಕಾರಿಗಳ ಬಳಕೆಗೆ ವಾಕಿಟಾಕಿಯನ್ನು ₹ 12 ಲಕ್ಷ ವೆಚ್ಚದಲ್ಲಿ ಬಾಡಿಗೆ ಪಡೆಯಲಾಗುತ್ತಿದೆ. ಇದರಲ್ಲಿಯೂ ಅವ್ಯವಹಾರ ನಡೆದಿದೆ’ ಎಂದರು.

‘ಪ್ರತಿ ವರ್ಷ ಟೆಂಡರ್ ಪಾರದರ್ಶಕವಾಗಿ ನಡೆಯುತ್ತಿಲ್ಲ. ನಾಗರಾಜ್ ಎಂಬ ಗುತ್ತಿಗೆದಾರರಿಗೆ ಪ್ರತಿ ವರ್ಷ ಟೆಂಡರ್ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವ್ಯವಹಾರ ನಡೆಯುತ್ತಲೇ ಇದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದರ ಹಿಂದಿನ ಕಾರಣವೇನು’ ಎಂದು ಪ್ರಶ್ನಿಸಿದರು.

‘ಜಾತ್ರಾ ಮಹೋತ್ಸವದಿಂದ ದೇವಾಲಯದ ಆಡಳಿತಕ್ಕೆ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಈ ಹಣ ಸದ್ಬಳಕೆ ಆಗಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಹಣದಿಂದ ದೇವಾಲಯ ಸುತ್ತಲಿನ ಕಟ್ಟಡಗಳ ಖರೀದಿ ಮಾಡಿ, ದೇವಾಲಯ ಆವರಣ ವಿಸ್ತರಿಸಬಹುದಾಗಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ಗುತ್ತಿಗೆದಾರ ಶಿವರಾಂ, ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.