
ಹಾಸನ: ಜಿಲ್ಲಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಜನರೇ ಅವರನ್ನು ಸರಿ ಮಾಡುತ್ತಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ಜಾತ್ರೆಯಲ್ಲಿ ಎಡಿಆರ್‌ಎಲ್‌ಆರ್ ಸಂಶುದ್ದೀನ್ ಅವರು ನನ್ನೊಂದಿಗೆ ನಡೆದು ಬಂದ ಕಾರಣಕ್ಕೆ ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಶಾಸಕರ ಜೊತೆ ಮಾತನಾಡಬಾರದೇ? ಪ್ರಾಮಾಣಿಕ ಅಧಿಕಾರಿ ಮಾಡಿದ ತಪ್ಪೇನು ಎಂದು ಪ್ರಶ್ನಿಸಿದರು.
ಮುಸ್ಲಿಂ ಮತದಾರರು ಇಲ್ಲದಿದ್ದರೆ, ಕಾಂಗ್ರೆಸ್‌ಗೆ 136 ಸ್ಥಾನಗಳು ಸಿಗುತ್ತಿರಲಿಲ್ಲ. ಆದರೆ ಈಗ ಭದ್ರತೆ ಇಲ್ಲದಾಗಿದೆ. ಬಿಜೆಪಿ ಕಾಲದಲ್ಲೂ ನೆಮ್ಮದಿ ಇರಲಿಲ್ಲ. ಕಾಂಗ್ರೆಸ್ ಅವಧಿಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಕುರಿತು ಮಾತನಾಡಿ ರೇವಣ್ಣ, ಜಿಲ್ಲಾಧಿಕಾರಿಯ ಹಟದಿಂದ ಹಾಸನದಲ್ಲಿ ಆಡಳಿತ ಅಸ್ತವ್ಯಸ್ತವಾಗಿದೆ. 15 ದಿನಗಳಿಂದ ಬಯೊಮೆಟ್ರಿಕ್ ದಾಖಲೆ ನೀಡಲು ಅಧಿಕಾರಿಗಳು ಲಭ್ಯರಿಲ್ಲ ಎಂದರು.
ಜಿಲ್ಲಾಧಿಕಾರಿ ಭಯದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಯಾರೂ ಮುಂದೆ ಬರದಂತಾಗಿದೆ. ಸದ್ಯದ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಒಬ್ಬರೇ 14 ಹುದ್ದೆ ನಿಭಾಯಿಸುತ್ತಿದ್ದಾರೆ. ಅಬಕಾರಿ ಉಪ ಆಯುಕ್ತರು ಸಹ ಭಯದಿಂದ ವರ್ಗಾವಣೆ ಮಾಡಿಸಿಕೊಂಡು ತೆರಳಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿ ಜನಸೇವೆ ಬಿಟ್ಟು ಪ್ರದರ್ಶನದ ಕೆಲಸದಲ್ಲಿ ತೊಡಗಿದ್ದಾರೆ. ಬೈಕ್, ಸೈಕಲ್‌ನಲ್ಲಿ ತಿರುಗಾಡುವುದಕ್ಕಿಂತ, ಸರ್ಕಾರ ಕೊಟ್ಟ ಕಾರಿನಲ್ಲಿ ಹೋಗಿ ಜನರ ಸಮಸ್ಯೆ ಬಗೆಹರಿಸಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.