
ಹಳೇಬೀಡು: ಪ್ರವಾಸೋದ್ಯಮ ಅಭಿವೃದ್ಧಿಯ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಂಗಳವಾರ ಹಳೇಬೀಡಿನ ಜೈನ ಬಸದಿ, ಕೇದಾರೇಶ್ವರ ಹಾಗೂ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.
ಮೂರು ದೇವಾಲಯಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದರು. ಬಸ್ತಿಹಳ್ಳಿಯ ಜೈನ ಬಸದಿ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿಯನ್ನು ನೋಡಿ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಜೈನ ಬಸದಿ, ಕೇದಾರೇಶ್ವರ ಹಾಗೂ ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತ ಕಸದ ತೊಟ್ಟಿ ಇಡಬೇಕು. ಭರ್ತಿಯಾದ ತಕ್ಷಣ ತೊಟ್ಟಿ ಸ್ವಚ್ಜ ಮಾಡುವ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜೈನ ಬಸದಿ ಬಳಿ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಲತಾಕುಮಾರಿ ತಿಳಿಸಿದರು.
ಜೈನ ಬಸದಿಯ ಕಂಬಗಳು ಕಲಾತ್ಮಕವಾಗಿದ್ದು, ಗರ್ಭಗುಡಿಯ ತೀರ್ಥಂಕರ ಮೂರ್ತಿಗಳು ಅಭೂತಪೂರ್ವವಾಗಿವೆ. ಜೈನ ಬಸದಿ ಹಾಗೂ ಕೇದಾರೇಶ್ವರ ದೇವಾಲಯಕ್ಕೆ ಪ್ರಚಾರದ ಅಗತ್ಯವಿದೆ. ಎರಡೂ ದೇವಾಲಯಗಳಿಗೆ ಹೆಚ್ಚಿನ ಪ್ರವಾಸಿಗರು ಬರುವಂತಾಗಬೇಕು. ಜೈನಬಸದಿ ವೃತ್ತದಲ್ಲಿ ದಾರಿ ತೋರಿಸುವ ಪ್ರಚಾರದ ಫಲಕ ಹಾಕಬೇಕು ಎಂದು ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.
ಜೈನ ಬಸದಿಗೆ ಆಗಮಿಸುವ ಉತ್ತರ ಭಾರತದ ಯಾತ್ರಾರ್ಥಿಗಳು ಶೌಚಾಲಯ ಇಲ್ಲದೆ ಪರದಾಡುತ್ತಾರೆ. ಸಾಕಷ್ಟು ಪ್ರವಾಸಿಗರು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಊರಿನಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಅರುಣ್ ಕುಮಾರ್, ತಹಶೀಲ್ದಾರ್ ಶ್ರೀಧರ ಕಂಕಣವಾಡಿ, ಪ್ರವಾಸೋದ್ಯಮ ಇಲಾಖೆ ಎಂಜಿನಿಯರ್ ಮನು, ಅರ್ಚಕರಾದ ಎಚ್.ಎನ್.ಸುಖಿಕುಮಾರ್, ಜಯಕುಮಾರ್ ಬಾಬು, ಇದ್ದರು. ಪ್ರವಾಸಿ ಮಾರ್ಗದರ್ಶಿ ಅಸ್ಲಾಂ ಶರೀಫ್ ದೇವಾಲಯದ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.