
ಹಾಸನದ ಜಿಲ್ಲಾ ನ್ಯಾಯಾಲಯ ಸಂಕೀರ್ಣ
ಹಾಸನ: ಇಲ್ಲಿನ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಮಂಗಳವಾರ ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯ ಸಂಕೀರ್ಣಕ್ಕೆ ಪೊಲೀಸ್ ವಿಶೇಷ ಭದ್ರತಾ ಪಡೆ, ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರೀಯ ದಳಗಳು ಭೇಟಿ ನೀಡಿ ಪರಿಶೀಲಿಸಿದವು.
ಪರಿಶೀಲನೆ ವೇಳೆ ನ್ಯಾಯಾಲಯದ ಒಳಗಿದ್ದ ಸಿಬ್ಬಂದಿ, ವಕೀಲರು ಹಾಗೂ ಇತರೆ ಸಿಬ್ಬಂದಿಯನ್ನು ಹೊರಗೆ ಕರೆತರಲಾಗಿತ್ತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಲಯ ಸಂಕೀರ್ಣದ ಪ್ರತಿಯೊಂದು ಭಾಗವನ್ನೂ ಸೂಕ್ಷ್ಮವಾಗಿ ತಪಾಸಣೆ ನಡೆಸಿದ ಪೊಲೀಸರು ಅನುಮಾನಾಸ್ಪದ ವಸ್ತುಗಳ ಶೋಧ ನಡೆಸಿದರು. ಆದರೆ, ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ.
ಡಿಸೆಂಬರ್‌ನಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ, ಆಲೂರು ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ ಸಂಬಂಧಿತ ಇ-ಮೇಲ್‌ಗಳು ಬಂದಿದ್ದವು.
ಈ ಸರಣಿ ಬೆದರಿಕೆಗಳಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಾಗಿದ್ದು, ಭದ್ರತಾ ವ್ಯವಸ್ಥೆ ಕುರಿತು ಚರ್ಚೆ ಆರಂಭವಾಗಿದೆ. ಘಟನೆ ಸಂಬಂಧ ಪೊಲೀಸರು ಇ-ಮೇಲ್ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಪ್ರಮುಖ ಸರ್ಕಾರಿ ಕಚೇರಿಗಳ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.