ಹಾಸನ: ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ತಿಂಗಳಲ್ಲಿಯೇ ಸಚಿವ ಕೃಷ್ಣ ಬೈರೇಗೌಡ, ಜನಸ್ಪಂದನ ಸಭೆ ನಡೆಸಿದ್ದು, ಜಿಲ್ಲೆಯಲ್ಲಿ ಇರುವ ಸಮಸ್ಯೆಗಳ ಅನಾವರಣ ಆದಂತಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ನಡೆದ ಸಭೆಯಲ್ಲಿ ಮನವಿ ಹಿಡಿದು ಬಂದ ಅರ್ಜಿದಾರರ ಜೊತೆ ಮಾತನಾಡಿದ ಕೃಷ್ಣ ಬೈರೇಗೌಡ, ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ಜಿಲ್ಲೆಯಲ್ಲಿ ಜನರ ಅಹವಾಲು ಆಲಿಸುವ ಕಾರ್ಯಕ್ರಮಗಳು ನಡೆದಿರುವುದು ವಿರಳ. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿ ಒಂದು ಜನಸ್ಪಂದನ ಸಭೆ ನಡೆದಿದ್ದು ಬಿಟ್ಟರೆ, ಈಗಿನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಎರಡು ಜನಸ್ಪಂದನ ಸಭೆ ನಡೆಸಿದ್ದಾರೆ.
ಇದೀಗ ಸ್ವತಃ ಸಚಿವ ಕೃಷ್ಣ ಬೈರೇಗೌಡರ ಉತ್ಸಾಹದಿಂದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದು, ಅಷ್ಟೇ ಉತ್ಸಾಹದಲ್ಲಿ ಜನರೂ ಸಮಸ್ಯೆಗಳನ್ನು ಹಿಡಿದುಕೊಂಡು ಭಾಗವಹಿಸಿದ್ದು ಕಂಡು ಬಂತು. ಜಿಲ್ಲೆಯಲ್ಲಿ ಸಮಸ್ಯೆಗಳು ಸಾಕಷ್ಟಿದ್ದು, ಪರಿಹಾರಕ್ಕೆ ಜನರು ಹಾತೊರೆಯುತ್ತಿರುವುದೂ ಜನಸ್ಪಂದನ ಸಭೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
ಸ್ವೀಕೃತವಾದ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದವು. ಜಮೀನಿಗೆ ತೆರಳುವ ದಾರಿಗೆ ಅವಕಾಶ, ದರಖಾಸ್ತಿನಲ್ಲಿ ಮಂಜೂರಾಗಿರುವ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು, 60ರಿಂದ 90ರ ದಶಕದ ಮಧ್ಯದಲ್ಲಿ ಮಂಜೂರಾಗಿರುವ ಭೂಮಿಗಳನ್ನು ದುರಸ್ತಿ ಮಾಡುವ ಕೆಲಸ, ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಿಕೊಡುವುದು, ರಸ್ತೆ ದುರಸ್ತಿ, ಚರಂಡಿ, ಅಂಗನವಾಡಿ, ಸಮುದಾಯ ಭವನಕ್ಕೆ ಜಾಗ, ಅಂಬೇಡ್ಕರ್ ಭವನಕ್ಕೆ ಜಾಗ, ಹದ್ದುಬಸ್ತು, ಒತ್ತುವರಿ ತೆರವು, ವೃದ್ಧಾಶ್ರಮಕ್ಕೆ ಜಾಗ, ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ, ಸಾಗುವಳಿ ಚೀಟಿ, ಕೊಳವೆಬಾವಿಗೆ ವಿದ್ಯುತ್ ಸಂಪರ್ಕ, ಖಾತೆ, ಪಹಣಿ, ಶಾಲಾ ಕಾಂಪೌಂಡ್, ಓಡಾಡಲು ರಸ್ತೆ, ಮೂಲಸೌಕರ್ಯ, ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸೇರಿದಂತೆ ಸಾಲು ಸಾಲು ಸಮಸ್ಯೆಗಳು ಅನಾವರಣಗೊಂಡವು.
ರೋಸಿ ಹೋಗಿರುವ ಜನ:
ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ವಿಳಂಬ ಆಗುತ್ತಿರುವುದರಿಂದ ಜನರು ರೋಸಿ ಹೋಗಿದ್ದಾರೆ. ತಾಲ್ಲೂಕು ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಹಾಗೆಯೇ ಉಳಿದಿವೆ ಎನ್ನುವ ದೂರನ್ನು ಸ್ವತಃ ಸಚಿವರ ಎದುರಿಗೆ ಜನರೇ ನೀಡಿದ್ದಾರೆ.
‘ಯಾವುದೇ ಒಂದು ಅರ್ಜಿ ಸಲ್ಲಿಸಿದರೆ, ಅದಕ್ಕೆ ಕಾಲಮಿತಿಯೇ ಇರುವುದಿಲ್ಲ. ಕೆಲಸ ಆಗುತ್ತದೆಯೋ, ಇಲ್ಲವೋ ಎಂಬುದು ತಿಳಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಷ್ಟು ದಿನ ಕಚೇರಿಗೆ ಅಲೆಯಬೇಕು’ ಎಂದು ನಾಗರಿಕರೊಬ್ಬರು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ‘ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು. ನಿಮ್ಮ ಹಂತದಲ್ಲಿ ಕೆಲಸ ಆಗುತ್ತಿದ್ದರೆ, ಬೇಗನೇ ಮಾಡಿಕೊಡಿ. ಆಗದೇ ಇದ್ದರೆ, ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1.10ಲಕ್ಷ ಜನರಿಗೆ ಕಂದಾಯ ದಾಖಲಾತಿ ಒದಗಿಸಲಾಯಿತು. ಅದೇ ರೀತಿ ಹಾಸನದಲ್ಲೂ ಕಂದಾಯ ಆಂದೋಲನ ಮಾಡಲಾಗುವುದು.ಕೆ.ಎಂ. ಶಿವಲಿಂಗೇಗೌಡ ಶಾಸಕ
ಪೋಡಿ ಮಾಡಲು ನಿಯಮ ಸರಳೀಕರಣ ಮಾಡಿ ಕಂದಾಯ ಅದಾಲತ್ ಮೂಲಕ ತಹಶೀಲ್ದಾರಗಳು ಮಾಡಲು ಅವಕಾಶ ಕಲ್ಪಿಸಿದರೆ ಹೆಚ್ಚು ಅನುಕೂಲ ಆಗಲಿದೆ.ಸಿ.ಎನ್. ಬಾಲಕೃಷ್ಣ ಶಾಸಕ
ಸಾವಿರಕ್ಕೂ ಹೆಚ್ಚು ಅರ್ಜಿ
‘ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಜನರು ಭಾಗವಹಿಸಿದ್ದಾರೆ. 723 ಅರ್ಜಿಗಳು ಐಪಿಜಿಆರ್‍ಎಸ್‌ನಲ್ಲಿ ನೋಂದಣಿಯಾಗಿದ್ದು ಇದನ್ನು ಸೇರಿಸಿ ಒಂದು ಸಾವಿರಕ್ಕಿಂತ ಹೆಚ್ಚಿನ ಅರ್ಜಿ ಸ್ವೀಕರಿಸಲಾಗಿದೆ. ಈ ಅರ್ಜಿಗಳನ್ನು ತಿಂಗಳ ಒಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ‘ಜನಸ್ಪಂದನಾ ಕಾರ್ಯಕ್ರಮವನ್ನು 3 ತಿಂಗಳಿಗೊಮ್ಮೆ ಬೇರೆ ತಾಲ್ಲೂಕು ಮಟ್ಟದಲ್ಲಿಯೂ ಆಯೋಜನೆ ಮಾಡುವ ಮೂಲಕ ಮುಂದುವರಿಸಲಾಗುವುದು. ಮುಂದಿನ 10 ದಿನಗಳಲ್ಲಿ ಜಿಲ್ಲೆಯಲ್ಲಿ ಕೆಡಿಪಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.