ADVERTISEMENT

ಹಾಸನ ರೈತರ ಸಾಲ ₹6 ಸಾವಿರ ಕೋಟಿ

ಸಾಲ ಮನ್ನಾಕ್ಕೆ ಕಾದಿರುವ 3,74,182 ಅನ್ನದಾತರು

ಕೆ.ಎಸ್.ಸುನಿಲ್
Published 3 ಜುಲೈ 2018, 13:10 IST
Last Updated 3 ಜುಲೈ 2018, 13:10 IST
ಬಿತ್ತನೆ ಕಾರ್ಯದಲ್ಲಿ ನಿರತರಾದ ರೈತರು
ಬಿತ್ತನೆ ಕಾರ್ಯದಲ್ಲಿ ನಿರತರಾದ ರೈತರು   

ಹಾಸನ: ಬೆಳೆ ನಷ್ಟ ಹಾಗೂ ಸಾಲ ಬಾಧೆ ಸುಳಿಯಲ್ಲಿ ಸಿಲುಕಿರುವ ಜಿಲ್ಲೆಯ ರೈತರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಾಲ ಮನ್ನಾ ಮಾಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ರೈತರ ಕೃಷಿ ಸಾಲ ₹ 5,785, ಸಾವಿರ ಕೋಟಿ ದಾಟಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಹಾಸನ ಕೃಷಿ ಪ್ರಧಾನ ಜಿಲ್ಲೆ. ಹಾಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 1,29,550 ರೈತರು ₹ 558,66 ಕೋಟಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 6,60 ಲಕ್ಷ ರೈತರು ಒಟ್ಟು ₹8,535 ಕೋಟಿ (ಕೃಷಿ ಸಾಲ ಸೇರಿ) ಸಾಲ ಮಾಡಿದ್ದಾರೆ. ಇದರಲ್ಲಿ ಕೃಷಿ ಸಾಲವೇ ₹ 5,227 ಕೋಟಿ (ಬೆಳೆ ಸಾಲ ₹ 2,205 ಕೋಟಿ ಸೇರಿ) ಇದೆ.

ಇನ್ನು, ಜಿಲ್ಲೆಯಲ್ಲಿ ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್ಐ) ರೈತರ ಚಿನ್ನ ಅಡವಿಟ್ಟುಕೊಂಡು ಸಾಲ ನೀಡಿದ್ದಾರೆ. ಹೊರ ರಾಜ್ಯಗಳ ಸಣ್ಣಪುಟ್ಟ ಫೈನಾನ್ಸ್ ಗಳು ನಗರದಲ್ಲಿ ಕಚೇರಿ ಹೊಂದಿವೆ. ಇದರ ಜೊತೆಗೆ ಲೇವಾದೇವಿದಾರರು ರೈತರನ್ನು ಸಾಲದ ಶೂಲಕ್ಕೆ ತಳ್ಳಿದ್ದಾರೆ. ಮುತ್ತೂಟ್ ಫೈನಾನ್ಸ್, ಮಣಪ್ಪುರಂ ಫೈನಾನ್ಸ್ ನಗರದಲ್ಲಿ ಕಚೇರಿ ಹೊಂದಿವೆ. ಹಾಗಾಗಿ ಸಾಲದ ಮೊತ್ತ ₹ 6 ಸಾವಿರ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

ADVERTISEMENT

ಸಾಲ ಮರುಪಾವತಿ ಮಾಡಲಾಗದ ರೈತರು ‘ಸಾಲ ಬಿಡಿಸಿ ಚಿನ್ನ ಕೊಳ್ಳುವ ಕಂಪನಿ’ಗಳಿಗೆ ಅಡವಿಟ್ಟ ಚಿನ್ನ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗಿದೆ. ನಾಲ್ಕು ವರ್ಷಗಳಿಂದ ಸಕಾಲಕ್ಕೆ ಮಳೆ ಬಾರದ ಕಾರಣ ಹೇಮಾವತಿ ಜಲಾಶಯ ಭರ್ತಿಯಾಗಲಿಲ್ಲ. ಇರುವ ನೀರನ್ನೂ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ತಮಿಳುನಾಡಿಗೆ ಹರಿಸಿದ್ದರಿಂದ ನಾಲೆಗಳಿಗೆ ಸಕಾಲದಲ್ಲಿ ನೀಡು ಬಿಡಲಿಲ್ಲ. ಇದರಿಂದ ಬೆಳೆಗಳು ವಿಫಲಗೊಂಡು ರೈತರು ನಷ್ಟ ಅನುಭವಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಹಕಾರಿ ಸಂಘಗಳ ₹ 50 ಸಾವಿರವರೆಗಿನ ಸಾಲ ಮನ್ನಾ ಮಾಡಿತು. ಇದರಿಂದ ಜಿಲ್ಲೆಯ 1,15,301 ರೈತರ ₹ 396 ಕೋಟಿ ಸಾಲ ಮನ್ನಾ ಆಗಿದೆ. ನಂತರವೂ ಸಹಕಾರಿ ಸಂಘಗಳಲ್ಲಿ ₹ 120 ಕೋಟಿ ಸಾಲ ಬಾಕಿ ಉಳಿದಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲೆಡೆ ಸಾಲ ಮನ್ನಾದ ವಿಷಯ ಚರ್ಚೆಯಾಗುತ್ತಿದೆ. ‘ಅಲ್ಪಾವಧಿ, ದೀರ್ಘಾವಧಿ, ಬೆಳೆ ಸಾಲ ಸೇರಿ ಒಟ್ಟು ₹ 8,535 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ₹ 5,227 ಕೋಟಿ ಕೃಷಿ ಸಾಲ ಇದೆ. ಪಾಲಿಹೌಸ್‌, ಪೈಪ್‌ಲೈನ್‌ ಅಳವಡಿಕೆ, ಡ್ರಿಪ್‌, ಟ್ರ್ಯಾಕ್ಟರ್‌, ಸ್ಪ್ರಿಂಕ್ಲರ್‌, ಜಾನುವಾರು ಖರೀದಿಸಲು ಸಾಲ ಪಡೆದಿದ್ದಾರೆ. ಚುನಾವಣೆ ಘೋಷಣೆಗೆ ಎರಡು ತಿಂಗಳು ಮುಂಚಿತವಾಗಿಯೇ ಸಾಲ ಮನ್ನಾ ಆಗಲಿದೆ ಅಂದುಕೊಂಡು ಸಾಲ ಕಟ್ಟುವುದನ್ನು ನಿಲ್ಲಿಸಿದರು. ಶೇಕಡಾ 20ರಷ್ಟು ಮಾತ್ರ ಸಾಲ ವಸೂಲಾಗಿದೆ. ಬ್ಯಾಂಕ್‌ನಿಂದಲೂ ನೋಟಿಸ್‌ ನೀಡುತ್ತಿಲ್ಲ. ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಸಾಲ, ಠೇವಣಿ ಅನುಪಾತ ಶೇಕಡಾ 137 ನಿಗದಿ ಪಡಿಸಲಾಗಿದೆ’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಸಿ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣಾ ಸಮಯದಲ್ಲಿ ನೀಡಿದ ರೈತರ ಸಂಪೂರ್ಣ ಸಾಲ ಮನ್ನಾ ಭರವಸೆಯನ್ನು ನಂಬಿ ಜನರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಕೊಟ್ಟ ಭರವಸೆಯಂತೆ ಸಾಲ ಮನ್ನಾ ಮಾಡಲಿ’ ಎಂದು ಮಾಡಳು ರೈತ ಶಿವಲಿಂಗಪ್ಪ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.