ADVERTISEMENT

ಹಾಸನ | ಫುಟ್‌ಪಾತ್ ಅತಿಕ್ರಮಣ ತೆರವು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:53 IST
Last Updated 21 ನವೆಂಬರ್ 2025, 6:53 IST
ಹಾಸನದ ಕಸ್ತೂರಬಾ ರಸ್ತೆಯಲ್ಲಿ ಗುರುವಾರ ಪಾಲಿಕೆ ಸಿಬ್ಬಂದಿ, ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು
ಹಾಸನದ ಕಸ್ತೂರಬಾ ರಸ್ತೆಯಲ್ಲಿ ಗುರುವಾರ ಪಾಲಿಕೆ ಸಿಬ್ಬಂದಿ, ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು   

ಹಾಸನ: ನಗರದ ಜನನಿಬೀಡ ಕಸ್ತೂರಬಾ ರಸ್ತೆಯಲ್ಲಿ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿದ್ದ ಹಣ್ಣು ಸೇರಿದಂತೆ ವಿವಿಧ ಅಂಗಡಿಗಳ ವಿರುದ್ಧ ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.

ರಸ್ತೆ ಬದಿ ಫುಟ್‌ಪಾತ್‌ ಅಕ್ರಮಿಸಿಕೊಂಡು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೌರಕಾರ್ಮಿಕರು, ಸೂಪರ್‌ ವೈಸರ್‌ಗಳು, ಆರೋಗ್ಯ ನಿರೀಕ್ಷಕರು ಮತ್ತು ಪಾಲಿಕೆ ಸಿಬ್ಬಂದಿಯೊಂದಿಗೆ ಬಂದ ಪಾಲಿಕೆಯ ತಂಡದೊಂದಿಗೆ ಫುಟ್‌ಪಾತ್‌ ಮೇಲೆ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ಅಂಗಡಿಗಳನ್ನು ತೆರವುಗೊಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ವ್ಯಾಪಾರಿಗಳು ಪಾಲಿಕೆ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿದದರು. ಕೆಲವು ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕೆ ಅಂಗಡಿ ಹಾಕಿದ್ದು, ತೆರವು ಮಾಡದಂತೆ ಮನವಿ ಮಾಡಿದರು. ಇನ್ನೊಂದೆಡೆ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಪಾಲಿಕೆಯ‌ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದರು.

‘ಮುಂದಿನ ದಿನಗಳಲ್ಲಿ ರಸ್ತೆ ಬದಿ ಹಾಗೂ ಫುಟ್‌ಪಾತ್‌ನಲ್ಲಿ ಮಳಿಗೆ ಹಾಕಿ ವ್ಯಾಪಾರ ಮಾಡುವುದನ್ನು ಮುಂದುವರಿಸಿದರೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಫುಟ್‌ಪಾತ್‌ ಜಾಗವು ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಇದ್ದು. ಅದನ್ನು ಹಣ್ಣಿನ ಅಂಗಡಿಗಳಾಗಿ ಬಳಸುವಂತಿಲ್ಲ. ವ್ಯಾಪಾರಿಗಳಿಗೆ ಸರಿಯಾದ ಸ್ಥಳಾವಕಾಶ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಲಿದೆ’ ಎಂದು ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ವ್ಯಾಪಾರಿಗಳಿಗೆ ತಿಳಿಸಿದರು.

ತೆರವು ಕಾರ್ಯಾಚರಣೆ ನಂತರವೂ ಮತ್ತೆ ಅನಧಿಕೃತ ವ್ಯಾಪಾರ ಆರಂಭಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಾಲಿಕೆಯಿಂದ ಸ್ಪಷ್ಟ ಎಚ್ಚರಿಕೆ ನೀಡಲಾಯಿತು.

ಜಿಲ್ಲಾಧಿಕಾರಿ, ಸರ್ಕಾರದ ಆದೇಶದಂತೆ ಕಾರ್ಯಾಚರಣೆ ಸಾರ್ವಜನಿಕ ಜಾಗದಲ್ಲಿ ವ್ಯಾಪಾರ ಮಾಡುವುದು ನಿಷೇಧಿಸಿ ಕ್ರಮ

ಕಸ್ತೂರಬಾ ರಸ್ತೆಯ ಫುಟ್‌ಪಾತ್‌ ಸಾರ್ವಜನಿಕ ಜಾಗವನ್ನು ಅನಧಿಕೃತವಾಗಿ ಹಣ್ಣಿನ ವ್ಯಾಪಾರಿಗಳು ಅಕ್ರಮಿಸಿಕೊಂಡಿದ್ದು ಸಂಚಾರಕ್ಕೆ ತೊಂದರೆಯ ಜೊತೆಗೆ ಅಶುಚಿತ್ವಕ್ಕೆ ಕಾರಣವಾಗಿತ್ತು
ಕೃಷ್ಣಮೂರ್ತಿ ಮಹಾನಗರ ಪಾಲಿಕೆಯ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.