ADVERTISEMENT

ಹಾಸನ: ಗಣಪತಿ ಮೆರವಣಿಗೆಯಲ್ಲೇ ಮರೆಯಾದ ಜೀವಗಳು

ಐವರು ವಿದ್ಯಾರ್ಥಿಗಳು ಸೇರಿ 9 ಜನರ ಸಾವು: 25ಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 8:03 IST
Last Updated 13 ಸೆಪ್ಟೆಂಬರ್ 2025, 8:03 IST
<div class="paragraphs"><p>ಸಚಿವರಿಂದ ಅಂತಿಮ ನಮನ</p></div>

ಸಚಿವರಿಂದ ಅಂತಿಮ ನಮನ

   

ಹಾಸನ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇನ್ನೊಂದು ಗಂಟೆಯಲ್ಲಿ ಗಣೇಶ ವಿಸರ್ಜನೆ ಮಾಡಿ, ಎಲ್ಲರೂ ಮನೆಗೆ ತೆರಳಬೇಕಿತ್ತು. ಆದರೆ, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆಯೇ ನುಗ್ಗಿದ ಟ್ರಕ್‌ನಿಂದಾಗಿ ಕಣ್ಣು ಬಿಡುವಷ್ಟರಲ್ಲಿ ಯುವಕರೂ ಸೇರಿ, 9 ಮಂದಿ ಮೃತಪಟ್ಟರು.

ಬಳ್ಳಾರಿಯ ಪ್ರವೀಣ್‌ ಕುಮಾರ್‌ (21), ಹೊಳೇನರಸೀಪುರ ತಾಲ್ಲೂಕಿನ ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ (17), ಹಳೇ ಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ್‌ (25), ಕೆ.ಬಿ.ಪಾಳ್ಯದ ರಾಜೇಶ್‌ (17), ಮುತ್ತಿಗೆ ಹೀರಳ್ಳಿ ಗ್ರಾಮದ ಗೋಕುಲ (17), ಹಾಸನ ತಾಲ್ಲೂಕಿನ ಬಂಟರಹಳ್ಳಿಯ ಪ್ರಭಾಕರ್‌ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್‌ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಮಣೆನಹಳ್ಳಿ ಮಲ್ಲೆ ಗ್ರಾಮದ ಸುರೇಶ ಮೃತಪಟ್ಟವರು.

ADVERTISEMENT

ಮೃತರ ಪೈಕಿ ಐದು ಮಂದಿ ವಿದ್ಯಾರ್ಥಿಗಳು. ಇವರು ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದರು. ಎಂದು ಐಜಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇನ್ನು ಕೆಲವು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡಿರುವ 19 ಮಂದಿ ಪೈಕಿ ಇಬ್ಬರ ಸ್ಥಿತಿ ಸ್ಥಿರವಾಗಿದೆ. ಇಬ್ಬರು ಗಾಯಾಳುಗಳಿಗೆ ಪಕ್ಕೆಲುಬು ಮೂಳೆ ಮುರಿತವಾಗಿದ್ದರಿಂದ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಜನ್ಮ ದಿನವೇ ಯುವಕ ಸಾವು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಮಿಥುನ್‌ ರಾತ್ರಿಯಷ್ಟೇ ಸ್ನೇಹಿತರೊಂದಿಗೆ ಜನ್ಮದಿನ ಆಚರಿಸಿಕೊಂಡು ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ. ಈ ವೇಳೆ ನಡೆದ ದುರಂತದಲ್ಲಿ ಮೃತಪಟ್ಟಿದ್ದಾನೆ.

ಮೃತಪಟ್ಟವರಲ್ಲಿ ಯುವಕರೇ ಹೆಚ್ಚಾಗಿದ್ದು, ಮನೆಗೆ ಆಧಾರ ಆಗಬೇಕಿದ್ದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ರಾತ್ರಿಯೇ ಮೃತದೇಹಗಳ ಹಸ್ತಾಂತರ: ಘಟನೆಯ ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ, ಎಸ್ಪಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ರಾತ್ರಿಯೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಕುಟುಂಬದವವರಿಗೆ ಹಸ್ತಾಂತರಿಸಲಾಗಿದೆ.

ಅಪಘಾತವಾದದ್ದು ಹೇಗೆ: ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಡಿಜೆ ಸಂಗೀತದೊಂದಿಗೆ ನೃತ್ಯ ಮಾಡಿಕೊಂಡು ಮೆರವಣಿಗೆ ತೆರಳುತ್ತಿದ್ದರು. ಮೊಸಳೆಹೊಸಳ್ಳಿಯ ಸಂತೆ ಮಾಳದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಗಣೇಶೋತ್ಸವದ ಮೆರವಣಿಗೆ ಇನ್ನು 5 ನಿಮಿಷಗಳ ಕಾಲ ಮುಂದೆ ಹೋಗಿದ್ದರೆ ಸಂತೆಮಾಳ ಸೇರಿಕೊಳ್ಳುತ್ತಿತ್ತು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.

ಸುಮಾರು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ 8.30ರ ಸುಮಾರಿಗೆ ಈ ಮೆರವಣಿಗೆ ಸಾಗುತ್ತಿದ್ದಾಗ, ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಸರಕು ಸಾಗಾಣಿಕೆಯ ಕಂಟೈನರ್‌, ಬೈಕ್‌ಗೆ ಗುದ್ದಿ, ಬಲಭಾಗಕ್ಕೆ ತಿರುಗಿದ್ದು, ರಸ್ತೆ ವಿಭಜಕ ದಾಟಿ ಮೆರವಣಿಗೆಯ ಮೇಲೆ ಹರಿದಿದೆ. ಇದರಿಂದ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಗಣ್ಯರ ಕಂಬನಿ: ಗಣೇಶೋತ್ಸವದ ಮೇಲೆ ಲಾರಿ ಹರಿದು 9 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಸೋಮಣ್ಣ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶಾಸಕ ಎಚ್‌.ಡಿ. ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ, ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂಸದ ಶ್ರೇಯಸ್‌‍ ಪಟೇಲ್‌ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಂಡರು. ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮೊಹಮ್ಮದ್‌ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ರಾತ್ರಿಯಿಡೀ ಸ್ಥಳದಲ್ಲಿ ಹಾಜರಿದ್ದರು.

ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವ ಕೃಷ್ಣ ಬೈರೇಗೌಡ

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದು, ತಾಲ್ಲೂಕಿನ ಶಾಂತಿಗ್ರಾಮದ ಸರ್ಕಾರಿ ಶಾಲೆಯಲ್ಲೇ ಸಂಸದ ಶ್ರೇಯಸ್ ಪಟೇಲ್‌, ಡಿಸಿ, ಎಸ್‌‍ಪಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಜೊತೆ ತುರ್ತು ಸಭೆ ನಡೆಸಿದರು.

ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಘಟನೆ ವಿವರ ಪಡೆದರು. ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತಪಟ್ಟ ಕುಟುಂಬಗಳ ಮನೆಗಳಿಗೂ ಭೇಟಿ ನೀಡಿದರು.

ಬಡವರ ಮಕ್ಕಳು ಸತ್ತರೆ ಬೆಲೆ ಇಲ್ಲವೇ?

ವಿಮಾನ ದುರಂತದಲ್ಲಿ ಸತ್ತರೆ ₹ 1 ಕೋಟಿ ಪರಿಹಾರ ಕೊಡುತ್ತೀರಿ. ಕ್ರೀಡಾಂಗಣದಲ್ಲಿ ಸತ್ತರೆ ₹ 50 ಲಕ್ಷ ಕೊಡುತ್ತೀರಿ. ಬಡವರ ಮಕ್ಕಳು ಸತ್ತರೆ ಬೆಲೆ ಇಲ್ಲವೇ? ಸರ್ಕಾರ ₹ 5 ಲಕ್ಷ ಪರಿಹಾರ ಘೋಷಿಸಿದೆ. ಬಡವರ ಮಕ್ಕಳು ಸತ್ತಿದ್ದಾರೆ. ಕನಿಷ್ಠ ₹ 25 ಲಕ್ಷ ಪರಿಹಾರ ಕೊಡುವಂತೆ ಸಚಿವ ಕೃಷ್ಣ ಬೈರೇಗೌಡರನ್ನು ಸ್ಥಳೀಯರು ಆಗ್ರಹಿಸಿದರು.

ಕೇರಳದಲ್ಲಿ ಸತ್ತರೆ ಕರ್ನಾಟಕದಿಂದ ಪರಿಹಾರ ಕೊಡುತ್ತೀರಿ. ನಮ್ಮ ರೈತರ ಮಕ್ಕಳು ಸತ್ತರೆ ಬಿಡಿಗಾಸು ಕೊಡುತ್ತೀರಿ. ₹ 5 ಲಕ್ಷ ಪರಿಹಾರ ಕೊಡುವುದಾದೆ, ನೀವೇ ಇಟ್ಟುಕೊಳ್ಳಿ ಎಂದು ಅಸಮಾಧಾನ ಹೊರಹಾಕಿದರು.

ಘಟನೆ ಮೃತಪಟ್ಟ ಬಂಟರಹಳ್ಳಿ ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿದ ಕೃಷ್ಣ ಬೈರೇಗೌಡ, ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಅಲ್ಲಿಂದ ಇನ್ನುಳಿದವರ ಮನೆಗೂ ತೆರಳಿ ಸಾಂತ್ವನ ಹೇಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.