ADVERTISEMENT

1,842 ಪ್ರಕರಣಗಳಲ್ಲಿ ಅಕ್ರಮ ಭೂಮಂಜೂರಾತಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೀನಮೇಷ

ಹೇಮಾವತಿ ಪುನರ್ವಸತಿ ಯೋಜನೆ ಅವ್ಯವಹಾರ

ಚಿದಂಬರಪ್ರಸಾದ್
Published 5 ಫೆಬ್ರುವರಿ 2026, 19:23 IST
Last Updated 5 ಫೆಬ್ರುವರಿ 2026, 19:23 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಹಾಸನ: ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನಿನಲ್ಲಿಯೂ ಅಕ್ರಮ ಮಂಜೂರಾತಿ ಮಾಡಲಾಗಿದ್ದು, ಇಂತಹ 1,842 ಪ್ರಕರಣಗಳನ್ನು ಪತ್ತೆ ಮಾಡಿ, ಮಂಜೂರಾತಿ ರದ್ದುಪಡಿಸಲಾಗಿದೆ. ಆದರೆ, ‘ಈ ಅಕ್ರಮಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಇದುವರೆಗೂ ಕ್ರಮವಾಗಿಲ್ಲ.

ADVERTISEMENT

ಅಕ್ರಮ ಭೂಮಂಜೂರಾತಿಯಲ್ಲಿ ನಾಲ್ವರು ವಿಶೇಷ ಭೂಸ್ವಾಧೀನ ಅಧಿಕಾರಿಗಳು, 30 ತಹಶೀಲ್ದಾರರು, ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ 7 ಸಿಬ್ಬಂದಿ ಹಾಗೂ ತಾಲ್ಲೂಕು ಕಚೇರಿಗಳ ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ದ್ವಿತೀಯ ದರ್ಜೆ ಸಹಾಯಕರು, ಭೂಮಾಪಕರು ಹಾಗೂ 168 ‘ಸಿ’ ಗ್ರೂಪ್‌ ಸಿಬ್ಬಂದಿ ಭಾಗಿಯಾಗಿರುವುದು ದೃಢಪಟ್ಟಿದೆ. ಈ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

‘ಈ ಬಗ್ಗೆ ಸಿಐಡಿ ವಿಶೇಷ ವಿಚಾರಣಾ ವಿಭಾಗದ ಡಿವೈಎಸ್ಪಿ ಅವರಿಗೆ ತನಿಖೆಯ ಹೊಣೆ ನೀಡಲಾಗಿದ್ದು, ಅಧಿಕಾರಿಗಳ ವಿರುದ್ಧದ ತನಿಖೆ ಪ್ರಗತಿಯಲ್ಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಅವರಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗುವ 47 ಗ್ರಾಮಗಳ ಸಂತ್ರಸ್ತರ ಪುನರ್ವಸತಿಗಾಗಿ 1969ರಲ್ಲಿ ಬೇರೆಡೆ ಜಮೀನು ಮಂಜೂರು ಮಾಡಲಾಗಿತ್ತು. ನಂತರ ಅರ್ಹ ಸಂತ್ರಸ್ತರನ್ನು ಗುರುತಿಸಿ, ಜಮೀನು ಮಂಜೂರು ಮಾಡಬೇಕಿತ್ತು. ಆದರೆ, ಅಧಿಕಾರಿಗಳು ತಮಗಿಷ್ಟ ಬಂದವರಿಗೆ ಭೂಮಿಯನ್ನು ಮಂಜೂರು ಮಾಡಿದ್ದರು.

ಈ ಬಗ್ಗೆ ರಾಜ್ಯ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, 2005 ರಿಂದ 2019 ರವರೆಗೆ 1,842 ಪ್ರಕರಣಗಳಲ್ಲಿ ಅನರ್ಹರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವುದು ದೃಢಪಟ್ಟಿದೆ.

ಅಕ್ರಮ ಹೇಗೆ?

ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅನರ್ಹರಿಗೆ ತಲಾ 4 ಎಕರೆಯಂತೆ ಭೂಮಿಯನ್ನು ಮಂಜೂರು ಮಾಡಿ, ಆದೇಶಿಸಿದ್ದಾರೆ. ಆದೇಶ ನೀಡುವ ಮೊದಲು ನೈಜತೆಯನ್ನು ಪರಿಶೀಲಿಸಿಲ್ಲ.

ಕೆಲವು ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ವರದಿ ಇಲ್ಲದೆಯೇ ತಾಲ್ಲೂಕು ಕಚೇರಿಯ ವಿಷಯ ನಿರ್ವಾಹಕರು, ಮಂಜೂರಾತಿಗಾಗಿ ಕಡತಗಳನ್ನು ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಸಲ್ಲಿಸಿದ್ದರು. ಅಚ್ಚರಿಯ ವಿಷಯವೆಂದರೆ, ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರು, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಪರವಾಗಿ ಸಹಿ ಮಾಡಿ, 78 ಪ್ರಕರಣಗಳಲ್ಲಿ ಭೂ ಮಂಜೂರಾತಿಗೆ ಅಭಿಪ್ರಾಯ ನೀಡುವಂತೆ ಸಂಬಂಧಿಸಿದ ತಾಲ್ಲೂಕು ಕಚೇರಿಗೆ ಸಲ್ಲಿಸಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.

ಅರ್ಹರಿಗೆ ಭೂಮಿ: ಮತ್ತೊಂದು ಸಮಿತಿ
ಈಗಾಗಲೇ ಅನರ್ಹರಿಗೆ ನೀಡಿದ್ದ ಭೂ ಮಂಜೂರಾತಿ ರದ್ದುಪಡಿಸಲಾಗಿದ್ದು, ಈ ಭೂಮಿಯನ್ನು ನೈಜ ಸಂತ್ರಸ್ತರಿಗೆ ಹಂಚಿಕೆ ಮಾಡಬೇಕಾಗಿದೆ. ಆದರೆ, ಸರ್ಕಾರ ಅದಕ್ಕಾಗಿ ಮತ್ತೊಂದು ಸಮಿತಿಯನ್ನು ರಚಿಸಿ 2025ರ ಏ.15ರಂದು ಆದೇಶ ಹೊರಡಿಸಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚಿಸಲಾಗಿದ್ದು, ಸಮಿತಿಯು ತನಿಖೆ ನಡೆಸಿ, ನೈಜತೆ ದೃಢೀಕರಿಸಿದ ನಂತರವೇ ಅರ್ಹರಿಗೆ ಭೂಮಿ ಸಿಗಲಿದೆ. ಅಕ್ರಮ ಭೂಮಂಜೂರಾತಿ ಪತ್ತೆಗಾಗಿ ಸಮಿತಿ ರಚಿಸಲಾಗಿತ್ತು. ಇದೀಗ ನೈಜ ಸಂತ್ರಸ್ತರ ಪತ್ತೆಗೆ ಮತ್ತೊಂದು ಸಮಿತಿ ಮಾಡಲಾಗಿದೆ. ಹೀಗಾದರೆ ನಮಗೆ ಭೂಮಿ ಸಿಗುವುದಾದರೂ ಯಾವಾಗ ಎಂಬುದು ಸಂತ್ರಸ್ತರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.