
ಹಾಸನ: ‘ದೇಶದಲ್ಲಿ ಭೂಮಿಯನ್ನೇ ನಂಬಿ ದುಡಿಮೆ ಮಾಡುತ್ತಿರುವ ರೈತರು ಮತ್ತು ಕೂಲಿಕಾರರ ಆದಾಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದೇಶದ ಕೆಲವೇ ಕೆಲವು ಶ್ರೀಮಂತರ ಆದಾಯ ಮತ್ತು ಆಸ್ತಿ ಎಲ್ಲೆ ಮೀರಿ ಬೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಬಿಕ್ಕಟ್ಟಿನಲ್ಲಿರುವ ಕೃಷಿಯನ್ನಾಗಲಿ ಅಥವಾ ಸಂಕಷ್ಟದಲ್ಲಿರುವ ರೈತ ಸಮುದಾಯವನ್ನಾಗಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು. ಬಸವರಾಜ ಹೇಳಿದರು.
ರೈತರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ನಗರದ ಸ್ವಾಭಿಮಾನಿ ಭವನದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) 3ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ, ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಿದ್ದುಪಡಿ ಮಾಡುವ ಮೂಲಕ ರೈತರ ಮತ್ತು ಕೂಲಿಕಾರರ ಆದಾಯವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲಾಗಿದೆ’ ಎಂದು ಹೇಳಿದರು.
‘ಒಂದು ಕಡೆ ಸರ್ಕಾರಿ ಮತ್ತು ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡದೇ, ಮತ್ತೊಂದೆಡೆ ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತಾಪಿ ವರ್ಗ ಸಂಪೂರ್ಣ ನಾಶವಾಗುತ್ತದೆ’ ಎಂದು ಎಚ್ಚರಿಸಿದರು.
‘ರೈತರು ಜಾಗೃತರಾಗದಂತೆ ಅವರ ಮೇಲೆ ಜಾತಿ, ಧರ್ಮ ಮತ್ತು ದೇವರು, ಪಾಪ, ಪುಣ್ಯದಂತಹ ಮೌಢ್ಯದ ವಿಚಾರಗಳನ್ನು ತುಂಬಿ ದಾರಿ ತಪ್ಪಿಸಲಾಗುತ್ತಿದೆ. ಅವರ ನಡುವಿನ ಏಕತೆಯನ್ನು ವ್ಯವಸ್ಥಿತವಾಗಿ ಒಡೆಯು ಮೂಲಕ ಆಳುವ ವರ್ಗ ಲಾಭ ಮಾಡಿಕೊಳ್ಳುತ್ತಿದೆ. ರೈತರು ಮತ್ತು ಕೃಷಿ ಉಳಿಸಲು ಎರಲ್ಲ ದುಡಿಯುವ ಜನ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ‘ಜಿಲ್ಲೆಯಲ್ಲಿ ರೈತರ ಹಲವು ಪ್ರಶ್ನೆಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟ ಮಾಡುತ್ತಿದೆ. ಅದೇ ಸಂದರ್ಭದಲ್ಲಿ ನಮ್ಮ ಕೂಗು ಇನ್ನೂ ಪ್ರಬಲವಾಗಿ ಆಳುವವರಿಗೆ ಕೇಳಿಸುವಂತಾಗಬೇಕು. ಆಗ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ’ ಎಂದರು.
ರೈತ ಮುಖಂಡರಾದ ಎಚ್.ಎಸ್.ಮಂಜುನಾಥ್, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ಎಂ.ಜಿ.ಪೃಥ್ವಿ, ರೈತ ಮುಖಂಡರಾದ ಗಿಡ್ಡೇಗೌಡ, ತೇಜಸ್ ಗೌಡ ಇದ್ದರು. ವಾಸುದೇವ ಕಲ್ಕೆರೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್ ನಿರೂಪಿಸಿದರು.
ಕೇಂದ್ರ ರಾಜ್ಯದಿಂದ ರೈತರ ನಿರ್ನಾಮ’
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತ ಸಮುದಾಯವನ್ನು ಸಂಪೂರ್ಣ ನಿರ್ನಾಮ ಮಾಡುವ ರೀತಿಯಲ್ಲಿ ನೀತಿಗಳು ಜಾರಿಯಾಗುತ್ತಿವೆ ಎಂದು ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್‌ಕುಮಾರ್ ಹೇಳಿದರು. ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವೇ ಬೆಳೆಯುತ್ತಿರುವ ಬಹುತೇಕ ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಮತ್ತು ಅಮೆರಿಕದಿಂದ ತರಿಸಿಕೊಳ್ಳುವ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿದ್ದು ರೈತರ ಬದುಕಿನ ಮೇಲೆ ಗದಾಪ್ರಹಾರ ಮಾಡುತ್ತಿದೆ. ಈ ನೀತಿಗಳನ್ನು ಹಿಮ್ಮೆಟ್ಟಿಸದ ಹೊರತು ರೈತ ಸಮುದಾಯಕ್ಕೆ ಉಳಿಗಾಲವಿಲ್ಲ ಎಂದರು. ಹಾಸನ ಜಿಲ್ಲೆಯಲ್ಲಿ ಬಗರ್ ಹುಕುಂ ಅರಣ್ಯ ಭೂಮಿ ಸಾಗುವಳಿ ಬಲವಂತದ ಭೂಸ್ವಾಧೀನ ನೀರಾವರಿ ಮೊದಲಾದ ಸಮಸ್ಯೆಗಳ ವಿರುದ್ಧ ಕೆಪಿಆರ್‌ಎಸ್ ನಿರ್ಣಾಯಕ ಹೋರಾಟ ರೂಪಿಸಿದೆ ಭೂಮಿಯ ಪ್ರಶ್ನೆ ಇತ್ಯರ್ಥ ಪಡಿಸುವವರೆಗೂ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಬೇಕಾದ ಅನಿರ್ವಾತೆ ಇದೆ ಎಂದರು.
ನೂತನ ಜಿಲ್ಲಾ ಸಮಿತಿ ಆಯ್ಕೆ
23 ಜನರನ್ನು ಒಳಗೊಂಡ ಕರ್ನಾಟಕ ಪ್ರಾಂತ ರೈತ ಸಂಘದ ನೂತನ ಜಿಲ್ಲಾ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಎಚ್.ಎಸ್. ಮಂಜುನಾಥ್ (ಅಧ್ಯಕ್ಷ) ತೇಜಸ್ ಗೌಡ ಸುಜಾತಾ ಕುಮಾರಸ್ವಾಮಿ ವಾಸುದೇವ ಕಲ್ಕೆರೆ (ಉಪಾಧ್ಯಕ್ಷರು) ಎಚ್.ಆರ್. ನವೀನ್‌ಕುಮಾರ್ (ಪ್ರಧಾನ ಕಾರ್ಯದರ್ಶಿ) ಗಿಡ್ಡೇಗೌಡ ಗಂಗಾಧರ್ ಜಯಲಕ್ಷ್ಮಿ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.