
ಹಾಸನ: ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವಿರಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ನೆರವು ದೊರೆಯಬೇಕು ಎಂಬುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷೆ ಹೇಮಾವತಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾದ ಉಚಿತ ಕಾನೂನು ಸಲಹಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಕಾನೂನು ನೆರವು ಎಲ್ಲಿ ಪಡೆಯಬೇಕು ಎಂಬ ಅರಿವು ಇರುವುದಿಲ್ಲ. ವಕೀಲರಿಂದ ಮಾಹಿತಿ ಪಡೆಯಲು ಹಣ ಭರಿಸುವ ಶಕ್ತಿ ಇಲ್ಲದೇ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ವಿಫಲರಾಗುತ್ತಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಸಲಹಾ ಕೇಂದ್ರ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕೇಂದ್ರದ ನೆರವು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್‌ಗಳಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತವೆ. ಕಾನೂನಿನ ಸಲಹೆ ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆಸ್ಪತ್ರೆ ಸೇರಿದಂತೆ ಎಲ್ಲಿ ಜನರಿಗೆ ಕಾನೂನಿನ ಅವಶ್ಯಕತೆ ಇರುತ್ತದೆಯೋ ಅಂತಹ ಸ್ಥಳಗಳಲ್ಲಿ ರಕ್ಷಣೆ ಪಡೆಯಬೇಕು ಎಂಬ ಯೋಜನೆಯಿಂದ ಈ ಕೇಂದ್ರ ಸ್ಥಾಪಿಸಲಾಗಿದ್ದು, ನೆರವಿಗೆ ನಿವೃತ್ತ ವಕೀಲರನ್ನು ನೇಮಿಸಲಾಗಿದೆ. ಯಾರೂ ಹಣ ನೀಡುವಂತಿಲ್ಲ. ಸರ್ಕಾರವೇ ಹಣ ಭರಿಸುತ್ತದೆ. ಉಚಿತ ಕಾನೂನು ಸಲಹೆ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಕಾನೂನು ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.
ಉಚಿತ ಕಾನೂನು ಸಲಹೆ ಕೇಂದ್ರದಲ್ಲಿ ತಿಮ್ಮಶೆಟ್ಟಿ ಎಂಬ ವಕೀಲರನ್ನು ನೇಮಿಸಲಾಗಿದ್ದು, ವಕೀಲರಿಂದ ಹಣದ ಬೇಡಿಕೆ ಬಂದರೆ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ವೆಂಕಟೇಶ್, ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಿದ ಕೇಂದ್ರ ಉಚಿತ ಸಲಹಾ ಕೇಂದ್ರ
15100ಕ್ಕೆ ಕರೆ ಮಾಡಿ ಸಲಹೆ ಪಡೆಯಿರಿ ಕಾನೂನು ನೆರವಿನ ಅವಶ್ಯಕತೆ ಇರುವ ಮಹಿಳೆಯರು ಮತ್ತು ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಪರಿಶಿಷ್ಟ ಜಾತಿ ಪಂಗಡದ ವರ್ಗದವರು ಮಾನಸಿಕವಾಗಿ ನೊಂದವರು ಉಚಿತ ಕಾನೂನು ಸೇವೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ಉಚಿತ ಕಾನೂನು ಸೇವೆ ಪಡೆಯಲು 15100 ಸಂಖ್ಯೆಗೆ ಕರೆ ಮಾಡಿ. ಅವಶ್ಯಕತೆ ಇರುವ ಕಾನೂನು ನೆರವು ಹಾಗೂ ಕಾನೂನು ಕೇಂದ್ರದ ವಿವರವನ್ನು ಪಡೆಯಬಹುದಾಗಿದೆ. ನೇರವಾಗಿ ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಸಮಾಲೋಚಿಸಿ ಸಲಹೆಗಳನ್ನು ಪಡೆಯಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.