ಹಾಸನ: ಜಿಲ್ಲೆಯಾದ್ಯಂತ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮುಂದಾಗಿದ್ದು, ನಗರದಾದ್ಯಂತ ಮನೆ ಮನೆಗೆ ತೆರಳಿ ಪೊಲೀಸ್ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದ್ದಾರೆ.
ಜಿಲ್ಲೆ, ಅದರಲ್ಲೂ ನಗರದಲ್ಲಿ ಮನೆಗಳ್ಳತನ, ರಸ್ತೆ ಅಪಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವವನ್ನು ಮನಗಂಡಿರುವ ಪೊಲೀಸ್ ಇಲಾಖೆ, ಜನರ ಬಳಿಗೆ ತೆರಳಿ ಮನವರಿಕೆ ಮಾಡುತ್ತಿದೆ.
ನಗರ ಪೊಲೀಸ್ ಠಾಣಾ ವತಿಯಿಂದ ‘ಮನೆ-ಮನೆಗೆ ಪೊಲೀಸ್‘ ಕಾರ್ಯಕ್ರಮದ ಅಂಗವಾಗಿ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರ ಕುಂದುಕೊರತೆ ವಿಚಾರಿಸಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧ, 112 ಸಹಾಯವಾಣಿ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮನೆಗಳಿಗೆ ಬೀಗ ಹಾಕಿ ಹೋಗುವ ಸಂದರ್ಭದಲ್ಲಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು, ಪ್ರಮುಖ ವಾಣಿಜ್ಯ ಸ್ಥಳಗಳು, ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯ ಕುರಿತೂ ಮಾಹಿತಿ ನೀಡಲಾಗುತ್ತಿದೆ.
ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯ ಮನೆಗಳಿಗೆ ತೆರಳಿ, ಅವರಿಗೆ ಇರುವ ಸಮಸ್ಯೆಗಳು, ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ ಜನರ ಸಮಸ್ಯೆಗಳನ್ನು ದಾಖಲಿಸಿಕೊಂಡು, ಸಂಬಂಧಿಸಿದವರ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ.
ಇನ್ನು ಅಪಘಾತ ಪ್ರಕರಣಗಳ ನಿಯಂತ್ರಣಕ್ಕೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಚಾರ ಪೊಲೀಸ್ ಠಾಣೆ ವತಿಯಿಂದ ನಗರದ ಪದವಿಪೂರ್ವ ಕಾಲೇಜು, ಶಾಲೆಗಳ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆ, ಪೋಕ್ಸೊ ಕಾಯ್ದೆ, ಮಹಿಳಾ ಸುರಕ್ಷತೆ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಕಠಿಣ ಕ್ರಮ ಕೈಗೊಳ್ಳಿ: ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವವರನ್ನು ಗುರುತಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಗಳಲ್ಲಿ ವಿಲೀಂಗ್ ಮಾಡುವುದು, ಬೇಕಾಬಿಟ್ಟಿ ವಾಹನಗಳ ನಿಲುಗಡೆ, ಪಾದಚಾರಿ ಮಾರ್ಗಗಳ ಅತಿಕ್ರಮಣದ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ ಎಂದು ಜನರು ಹೇಳುತ್ತಿದ್ದಾರೆ.
ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತೆ ಪೊಲೀಸ್ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅರಿವು ಮೂಡಿಸಲಾಗುತ್ತಿದೆಮೊಹಮ್ಮದ್ ಸುಜೀತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸರಿಗೆ ಯೋಗ ತರಬೇತಿ:
ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ದೈಹಿಕ ಕ್ಷಮತೆ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಎರಡು ದಿನಗಳ ಯೋಗ ಶಿಬಿರ ಆಯೋಜಿಸಲಾಗಿತ್ತು. ಯೋಗಪಟು ಭಾಗೀರಥಿ ಕನ್ನಡತಿ ಅವರು ದೈನಂದಿನ ಜೀವನದಲ್ಲಿ ಯೋಗಾಭ್ಯಾಸದ ಉಪಯೋಗದ ಕುರಿತು ಮಾಹಿತಿ ನೀಡಿದರು. ಅಲ್ಲದೇ ಅಧಿಕಾರಿ ಸಿಬ್ಬಂದಿಗೆ ಯೋಗಾಭ್ಯಾಸ ಮಾಡಿಸಿದರು. ಕರ್ತವ್ಯದಲ್ಲಿ ಇರುವ ಪೊಲೀಸರ ದೈಹಿಕ ಕ್ಷಮತೆಯನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.