ADVERTISEMENT

ಯಾವಾಗಲೂ ಕುಟುಂಬ ರಾಜಕಾರಣ ನಡೆಯಲ್ಲ: ಸಿ.ಟಿ. ರವಿ

ಸಿ.ಎಂ ಗ್ರಾಮವಾಸ್ತವ್ಯಕ್ಕೆ ವಿರೋಧ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:45 IST
Last Updated 28 ಜೂನ್ 2019, 19:45 IST
ಸಿ.ಟಿ.ರವಿ
ಸಿ.ಟಿ.ರವಿ   

ಹಾಸನ: ‘ಮೊಮ್ಮಗನಿಗೆ ಸೀಟು ಬಿಟ್ಟು ಕೊಟ್ಟಿದ್ದೆ ಜೆಡಿಎಸ್‍ನ ದೊಡ್ಡ ತ್ಯಾಗವಾಗಿದ್ದು, ಕಾಂಗ್ರೆಸ್ ಈಗ ಕರ್ನಾಟಕದಲ್ಲಿ ಒಂದು ಸ್ಥಾನಕ್ಕೆ ಮಾತ್ರ ಸೀಮಿತವಾಗಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ‘ಯಾವಾಗಲು ಕುಟುಂಬ ರಾಜಕಾರಣ ನಡೆಯುವುದಿಲ್ಲ. ಇದು ಪ್ರಜಾಪ್ರಭುತ್ವದ ತಾಕತ್ತು’ ಎಂದು ಟಾಂಗ್ ನೀಡಿದರು.

‘ವಿಚಾರ ಆಧಾರದಲ್ಲಿ ಬಿಜೆಪಿ ಬೆಳೆದು ಬಂದಿದ್ದು, ಹಲವು ಬಾರಿ ಏಳು, ಬೀಳು ಕಂಡಿದೆ. 1985ರ ಸಮಯದಲ್ಲಿ ದೇಶದಲ್ಲಿ ಮತ್ತು ರಾಜ್ಯದಲ್ಲಿ 2 ಸೀಟು ಮಾತ್ರ ಗಳಿಸಿತ್ತು. ಪಕ್ಷದ ವಿಚಾರಧಾರೆ ಬದಲಾಯಿಸದೇ ಸಂಘಟನೆ ಮೂಲಕ ಅಧಿಕಾರಕ್ಕೆ ಬರಲಾಗಿದೆ’ ಎಂದು ನುಡಿದರು.

ADVERTISEMENT

‘2019ರ ಲೋಕಸಭಾ ಚುನಾಣೆಯಲ್ಲಿ ನೂರಕ್ಕೆ ಶೇಕಡಾ 50ರಷ್ಟು ಮತ ಪಡೆಯಲಾಗಿದೆ. ಮೊದಲು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಉತ್ತಮ ಎನ್ನಲಾಗಿತ್ತು. ಪ್ರಸ್ತುತ ನರೇಂದ್ರ ಮೋದಿ ಸರ್ಕಾರ ಉತ್ತಮ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇಂದಿನ ಚುನಾವಣೆ ಫಲಿತಾಂಶ ನೋಡಿದರೇ ಕಾಂಗ್ರೆಸ್ 18 ರಾಜ್ಯಗಳಲ್ಲಿ ಶೂನ್ಯ ಸಂಪಾದನೆ. ಇನ್ನು ಜೆಡಿಎಸ್‍ ಸಾಧನೆಯೂ ಇದೇ ಸ್ಥಿತಿಯಲ್ಲಿದೆ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿಯಲ್ಲಿ ಜಾತಿ ಇಲ್ಲ. ದೇಶ ಮೊದಲು. ಸಾಮಾನ್ಯ ವ್ಯಕ್ತಿ ನಾಯಕತ್ವ ವಹಿಸಲು ಪೂರ್ಣ ಅವಕಾಶಗಳಿವೆ. ರಾಜ್ಯದಲ್ಲಿ ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯದ ಬಗ್ಗೆ ವಿರೋಧವಿಲ್ಲ. ಆದರೆ ಗ್ರಾಮದ ಬಗ್ಗೆ ಅರಿವು ಇಲ್ಲದಿರುವುದು ರಾಜ್ಯದ ಜನರ ದುರ್ದೈವ. ಮತ್ತೊಂದು ತಲೆಮಾರು ಬಂದರೂ ಇನ್ನು ಗ್ರಾಮದ ಬಗ್ಗೆ ಅರ್ಥವಾಗಿರುವುದಿಲ್ಲ’ ಎಂದು
ಬೇಸರ ವ್ಯಕ್ತಪಡಿಸಿದರು.

‘ಅನ್ನಭಾಗ್ಯ ಕೊಟ್ಟವನು ನಾನು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಶೇಕಡಾ 90 ಭಾಗ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕೇಂದ್ರ ₹ 28 ಸಾವಿರ ಕೋಟಿ ಅನುದಾನ ನೀಡಿದೆ. ರೈಲ್ವೆಗೆ ₹ 14 ಸಾವಿರ ಕೋಟಿ, ಶೌಚಾಲಯ ನಿರ್ಮಾಣಕ್ಕೆ ₹ 34 ಸಾವಿರ ಕೋಟಿ, ಅಮೃತ ಯೋಜನೆ, ಸ್ಮಾರ್ಟ್ ಸಿಟಿ, ಸೇರಿ ರಾಜ್ಯಕ್ಕೆ ಕೋಟಿಗಟ್ಟಲೆ ಹಣವನ್ನು ಕೇಂದ್ರ ನೀಡಿದೆ’ ಎಂದು ವಿವರಿಸಿದರು.

ಜುಲೈ 6 ರಿಂದ ಆ. 15ರ ವರೆಗೂ ಬಿಜೆಪಿ ಸದಸ್ಯತ್ವದ ಅಭಿಯಾನಪೂರ್ಣವಾಗಬೇಕಾಗಿದೆ. ಸಕ್ರಿಯ ಸದಸ್ಯರು ಸ್ವಯಂ ಪ್ರೇರಿತವಾಗಿ ಈ ಕೆಲಸ ಮಾಡಬೇಕಾಗಿದೆ ಎಂದರು.

ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧ್ಯಕ್ಷ ನವೀಲೆ ಅಣ್ಣಪ್ಪ,ಕಾರ್ಯದರ್ಶಿ ಪ್ರಸನ್ನಕುಮಾರ್, ಪುಟ್ಟಸ್ವಾಮಿ, ಪರ್ವತಯ್ಯ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಅಮಿತ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.