ADVERTISEMENT

ಹಾಸನ: ಸರ್ಕಾರಿ ಶಾಲೆ ವಿಲೀನ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:42 IST
Last Updated 2 ಮಾರ್ಚ್ 2026, 6:42 IST
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಪೋಷಕರು, ವಿದ್ಯಾರ್ಥಿಗಳ ಪ್ರತಿಭಟನಾ ಸಮಾವೇಶ ನಡೆಯಿತು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಪೋಷಕರು, ವಿದ್ಯಾರ್ಥಿಗಳ ಪ್ರತಿಭಟನಾ ಸಮಾವೇಶ ನಡೆಯಿತು.   

ಹಾಸನ: ಕೆಪಿಎಸ್‌ ಮ್ಯಾಗ್ನೆಟ್ ಶಾಲೆಯ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಉಳಿಸಲು ಆಗ್ರಹಿಸಿ ವಿದ್ಯಾರ್ಥಿ - ಪೋಷಕರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಭಾನುವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಭಾಷಣಕಾರರಾಗಿದ್ದ ಎಐಡಿಎಸ್‌ಒ ರಾಜ್ಯ ಘಟಕದ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ರಾಜ್ಯದಾದ್ಯಂತ 40ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಬಡ, ರೈತ, ಕೂಲಿ-ಕಾರ್ಮಿಕರ ಮಕ್ಕಳಿಂದ ಶಿಕ್ಷಣವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವ ಹುನ್ನಾರ ಈ ಯೋಜನೆಯದ್ದಾಗಿದೆ. ರಾಜ್ಯದಲ್ಲಿ 6ಸಾವಿರ ಗ್ರಾಮ ಪಂಚಾಯಿತಿಯ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನಾಗಿ ಪರಿವರ್ತಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ರಾಜ್ಯ ಸರ್ಕಾರದ ವರದಿಯ ಪ್ರಕಾರ, 15 ವರ್ಷಗಳಲ್ಲಿ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇನ್ನೊಂದೆಡೆ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸದೇ, ಪೋಷಕರ ಮೇಲೆ ಆರೋಪ ಮಾಡಲಾಗುತ್ತಿದೆ. ರಾಜ್ಯದಲ್ಲಿ 60ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 21ಸಾವಿರಕ್ಕೂ ಹೆಚ್ಚು ಶಾಲೆ ಕಟ್ಟಡಗಳು ದುರಸ್ತಿಗಾಗಿ ಕಾಯುತ್ತಿವೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲದೇ ಸಾವಿರಾರು ಸರ್ಕಾರಿ ಶಾಲೆಗಳು ನಶಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕಾದ ಸರ್ಕಾರಗಳು, ಬಣ್ಣ ಬಣ್ಣದ ಹೆಸರಿನಿಂದ ಗ್ರಾಮೀಣ ಶಾಲೆಗಳಿಗೆ ಬೀಗ ಹಾಕಿ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ದೂರಿದರು.

ADVERTISEMENT

ಲೇಖಕಿ ರೂಪ ಹಾಸನ ಮಾತನಾಡಿ, ಒಂದು ಸರ್ಕಾರಿ ಶಾಲೆ ಎಂದರೆ ಅದು ಒಂದು ಸಾಂಸ್ಕೃತಿಕ ತಾಣ. ಆ ಶಾಲೆಯನ್ನು ನೀವು ಕೊಲ್ಲುವುದಾದರೆ, ಆ ಸಾಂಸ್ಕೃತಿಕ ತಾಣವನ್ನು ಕೊಲ್ಲುತ್ತಿದ್ದೀರಾ. ಹೆಣ್ಣು ಮಕ್ಕಳು, ಬಡ ರೈತರ, ಕಾರ್ಮಿಕರ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ಯೋಜನೆಯೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆ. ಈ ಸಮಾವೇಶಕ್ಕೆ ಹಳ್ಳಿಗಳಿಂದ ತಾಯಂದಿರು ಬಂದಿದ್ದಾರೆ. ಅವರ ಜೊತೆ ನಾನು ಸರ್ಕಾರಿ ಶಾಲೆಗಳು ಉಳಿಯುವವರೆಗೆ ನಿಲ್ಲುತ್ತೇನೆ ಎಂದರು.

ನರಸಿಂಹೇಗೌಡ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾದರೇ ಸಮಾಜಕ್ಕೆ ಮಾರಕವಾಗುತ್ತದೆ. ಇದನ್ನು ಅರಿತು ಸರ್ಕಾರ ಪ್ರತಿಯೊಂದು ಮಗುವಿಗೂ ಶಿಕ್ಷಣ ಕೊಡಲು ಮುಂದಾಗಬೇಕು. ಇಲ್ಲಿಯವರೆಗೂ ಆಡಳಿತ ನಡೆಸಿದ ಮೂರು ಪಕ್ಷದವರೂ ಶಿಕ್ಷಣ ವಿರೋಧಿ, ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಇದನ್ನು ಹಾಸನದ ಜನತೆ ದೊಡ್ಡ ಮಟ್ಟದಲ್ಲಿ ವಿರೋಧಿಸಬೇಕು ಎಂದರು.

ರಾಜ್ಯ ರೈತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಣಗಾಲ್ ಮೂರ್ತಿ, ಜೆಸಿಟಿಯು ರಾಜ್ಯ ಸಂಚಾಲಕ ಕೆ.ವಿ. ಭಟ್, ಎಐಯುಟಿಯುಸಿ ಮುಖಂಡರಾದ ಹನುಮೇಶ್, ಎಐಎಂಎಸ್‌ಎಸ್‌ನ ನಿರ್ಮಲಾ ಎಚ್.ಎಲ್., ದೇವರಾಜಪುರ ಗ್ರಾಮದ ಸರ್ಕಾರಿ ಶಾಲೆ ಉಳಿಸಿ ಸಮಿತಿಯ ಅಧ್ಯಕ್ಷ ಮಲ್ಲೇಶ್ ಮಾತನಾಡಿದರು.

ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ, ಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಸುಷ್ಮಾ, ಪದಾಧಿಕಾರಿಗಳಾದ ಪುರುಷೋತ್ತಮ್, ಶ್ರೇಷ್ಠ, ಧನಂಜಯ್ ಧನರಾಜ್, ತಿಲಕ್, ಧನುಶ್ರೀ ಮತ್ತು ಹಳ್ಳಿಗಳಿಂದ ಬಂದಿದ್ದ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾವೇಶದಲ್ಲಿ ಲೇಖಕಿ ರೂಪ ಹಾಸನ ಮಾತನಾಡಿದರು.
ಬಡ ದಲಿತರ ಕಾರ್ಮಿಕರ ರೈತರ ಮಕ್ಕಳು ಓದಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳು ಉಳಿಯುವವರೆಗೆ ಹೋರಾಟ ಮುಂದುವರಿಸೋಣ
ಎಂ.ಬಿ. ಪುಟ್ಟಸ್ವಾಮಿ ದಲಿತ ಸಂಘರ್ಷ ಸಮಿತಿ ಮುಖಂಡ

ಜಿಲ್ಲಾ ಸಮಿತಿ ರಚನೆ

ಸರ್ಕಾರಿ ಶಾಲೆಗಳನ್ನು ಉಳಿಸಲು ಜಿಲ್ಲಾ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪೋಷಕಿ ಮಮತಾ ಉಪಾಧ್ಯಕ್ಷರಾಗಿ ಎಂ.ಬಿ. ಪುಟ್ಟಸ್ವಾಮಿ ಕಣಗಾಲ್ ಮೂರ್ತಿ ಶಾಂತಾ ಎ. ನೀತು ರಾಜೇಶ್ ಭಟ್ ನರಸಿಂಹನ್ ಮಲ್ಲೇಶ್ ಮಂಜುನಾಥ್ ಸಿಂಗಟಗೆರೆ ಗುರುಮೂರ್ತಿ ರಂಗೇನಹಳ್ಳಿ ರೇವಣ್ಣ ರಂಗೇನಹಳ್ಳಿ ಮಹೇಂದ್ರ ಪ್ರಸಾದ್ ಮಂಜುನಾಥ್ ಕಾರ್ಯದರ್ಶಿಯಾಗಿ ಚೈತ್ರಾ 28 ಮಂದಿ ಸದಸ್ಯರು ಆರು ಮಂದಿ ಸಲಹೆಗಾರರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.