
ಹಾಸನ: ಜಗತ್ತು ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗೆ ಒಗ್ಗಿಕೊಳ್ಳುವ, ನಿರಂತರವಾಗಿ ಕಲಿಯುವ ಗುಣ ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸಲಹೆ ನೀಡಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 15ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಹೊರಹೊಮ್ಮುತ್ತಿದ್ದಾರೆ. 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಪದವಿ ಪೂರೈಸುತ್ತಿದ್ದಾರೆ. ಪದವಿ ಪ್ರಮಾಣಪತ್ರ ತೆಗೆದುಕೊಳ್ಳುವುದು ಇಂದಿನ ವಿದ್ಯಾರ್ಥಿಗಳ ಮುಂದಿರುವ ಸವಾಲಲ್ಲ. ಓದಿದ ಪದವಿಗೆ ಸರಿ ಹೊಂದುವ ಉದ್ಯೋಗ ದಕ್ಕಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ. ಪದವಿ ಪೂರೈಸುವ ವಿದ್ಯಾರ್ಥಿಗಳಲ್ಲಿ ಓದಿಗೆ ತಕ್ಕ ಉದ್ಯೋಗ ಪಡೆಯುವವರ ಪ್ರಮಾಣ ಶೇ 45ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.
ಹೆಚ್ಚು ವಿದ್ಯಾರ್ಥಿನಿಯರು ಪದವಿ ಶಿಕ್ಷಣ ಪಡೆಯುತ್ತಿದ್ದರೂ, ಉದ್ಯೋಗದಲ್ಲಿ ಮುಂದುವರಿಯುತ್ತಿರುವ ವಿದ್ಯಾರ್ಥಿನಿಯರ ಪ್ರಮಾಣ ಕಡಿಮೆ ಇದೆ. ವಿದ್ಯಾರ್ಥಿನಿಯರ ಪದವಿ ಪ್ರಮಾಣಪತ್ರ ಮನೆಯಲ್ಲಿ ಪ್ರದರ್ಶನಕ್ಕೆ ಇಡಬೇಕಾದ ಟ್ರೋಫಿ ಅಲ್ಲ. ವಿದ್ಯಾರ್ಥಿನಿಯರು ಓದಿಗೆ ತಕ್ಕ ಕೆಲಸಗಳನ್ನು ನಿರ್ವಹಿಸುವ ಮೂಲಕ ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ನೀಡುವಂತಾಗಬೇಕು. ಉದ್ಯೋಗದಲ್ಲಿ ಮುಂದುವರಿಯಲು ಬಯಸುವ ವಿದ್ಯಾರ್ಥಿನಿಯರ ಎದುರು ಸಾಕಷ್ಟು ಸವಾಲುಗಳು ಇರುವುದು ವಾಸ್ತವ. ಆ ಸವಾಲುಗಳನ್ನು ಮೆಟ್ಟಿ ನಿಂತು ಉದ್ಯೋಗ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.
ಕಾಲೇಜಿನ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಡೀನ್ ಡಾ.ನಂದಿತಾ ಬಿ.ಆರ್. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ.ಎಚ್.ಜೆ.ಅಮರೇಂದ್ರ ಸ್ವಾಗತಿಸಿದರು. ನಿರ್ದೇಶಕ ಡಾ.ಎಸ್.ಪ್ರದೀಪ್ ವಂದಿಸಿದರು. ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಸಿ.ಆರ್. ಜಗದೀಶ್, ಖಜಾಂಚಿ ಎಚ್.ಡಿ.ಪಾರ್ಶ್ವನಾಥ್, ಸಮಿತಿಯ ನಿರ್ದೇಶಕರು, ಕಾಲೇಜಿನ ಡೀನ್‍ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಹೆಚ್ಚಿನ ಸಾಧನೆ ಮಾಡುವ ಮೂಲಕ ಕಲಿಸಿದ ಪ್ರಾಧ್ಯಾಪಕರು ಹಾಗೂ ಸಂಸ್ಥೆಗೆ ಉತ್ತಮ ಹೆಸರು ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು
- ಆರ್.ಟಿ.ದ್ಯಾವೇಗೌಡ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಂಪ್ಯೂಟರ್ ಸೈನ್ಸ್ ವಿಭಾಗದ ದೀಕ್ಷಿತ್ ಎಚ್.ಯು. ಮತ್ತು ಇನ್‌ಫಾರ್ಮೇಷನ್ ಸೈನ್ಸ್ ವಿಭಾಗದ ಪೂಜಾ ಎ.ಬಿ. ಅವರಿಗೆ 2025ನೇ ಸಾಲಿನ ಎಂಟಿಇಎಸ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ನಂದನ್ ಸಿ.ವಿ. ಅವರಿಗೆ 2025ನೇ ಸಾಲಿನ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ನೀಡಲಾಯಿತು. ಪ್ರತಿ ಎಂಜಿನಿಯರಿಂಗ್ ವಿಭಾಗದಲ್ಲೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಪೃಥ್ವಿ ಸಿ.ಪಿ. ಅರ್ಜುನ್ ಎಚ್. ಸೋನು ಬಿ.ಆರ್. ಚೇತನಾ ಕೆ.ಆರ್. ಶರಣ್ಯ ಕೆ.ಎಂ. ಪೂಜಾ ಎ.ಬಿ. ಮತ್ತು ವಿನಯ್ ಎಚ್.ಆರ್. ಚಿನ್ನದ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.