ಹಾಸನ: ಹವಾಮಾನ ವೈಪರೀತ್ಯ, ರೋಗಬಾಧೆ ಸೇರಿದಂತೆ ನಾನಾ ಕಾರಣಗಳಿಗೆ ಎಳನೀರು ಇಳುವರಿ ಕುಸಿದಿದ್ದು, ದರ ವಿಪರೀತ ಹೆಚ್ಚಾಗಿದೆ. ಇದರಿಂದಾಗಿ ಎಳನೀರು ಮಾರಾಟವೂ ಕ್ಷೀಣಿಸಿದೆ.
ಜಿಲ್ಲೆಯ ಪಟ್ಟಣ ಹಾಗೂ ನಗರಗಳಲ್ಲಿ ಎಳನೀರು ಮಾರಾಟ ಕಡಿಮೆಯಾಗಿದೆ. ನಿತ್ಯ 100 ರಿಂದ 150 ಎಳನೀರನ್ನು ಮಾರಾಟ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳು, ಇದೀಗ 40 ರಿಂದ 50 ಎಳನೀರು ಮಾರಾಟವಾದರೆ ಹೆಚ್ಚು ಎಂಬಂತಾಗಿದೆ.
‘ಎಳನೀರಿನ ಫಸಲು ಕಡಿಮೆ ಆಗಿರುವುದರಿಂದ ಬೆಲೆ ಹೆಚ್ಚಾಗಿದೆ. ಜೊತೆಗೆ ಎಳನೀರು ಕುಡಿಯುವವರ ಸಂಖ್ಯೆಯು ಕಡಿಮೆಯಾಗಿದೆ. ಈ ಹಿಂದೆ ಪ್ರತಿ ಎಳನೀರಿಗೆ ₹ 30 ರಿಂದ ₹ 40 ದರ ಇತ್ತು, ಇದೀಗ ₹ 70 ರಿಂದ ₹ 80ಕ್ಕೆ ತಲುಪಿದೆ. ಅಲ್ಲದೇ ಸಗಟು ಎಳನೀರು ದರವು ಏರಿಕೆಯಾಗಿದ್ದು, ತೆಂಗು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಿದರೆ ಪ್ರತಿ ಎಳನೀರಿಗೆ ₹ 45 ರಿಂದ ₹ 50 ನಿಗದಿ ಮಾಡುತ್ತಾರೆ. ಆದ್ದರಿಂದ ದರ ಏರಿಕೆ ಹೆಚ್ಚಾಗಿದೆ’ ಎಂದು ಎಳನೀರು ವ್ಯಾಪಾರಿ ರಂಗಸ್ವಾಮಿ ಹೇಳುತ್ತಾರೆ.
‘ಎಂಟು ವರ್ಷದಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಎಳನೀರಿಗೆ ಇಷ್ಟೊಂದು ದರ ಏರಿಕೆಯಾಗಿರುವುದು ಇದೇ ಮೊದಲು. ದರ ಏರಿಕೆಯಿಂದ ವ್ಯಾಪಾರವೂ ಕಡಿಮೆಯಾಗಿದೆ, ನಾಲ್ಕರಿಂದ ಐದು ಎಳನೀರು ತೆಗೆದುಕೊಂಡು ಹೋಗುತ್ತಿದ್ದ ಗ್ರಾಹಕರು, ಇಂದು ಒಂದೆರಡು ತೆಗೆದುಕೊಳ್ಳಲು ಬರುತ್ತಿಲ್ಲ’ ಎಂದು ಇನ್ನೊಬ್ಬ ವ್ಯಾಪಾರಿ ದೇವಿಹಳ್ಳಿಯ ರಾಮಕೃಷ್ಣ ಹೇಳುತ್ತಾರೆ.
‘ವರ್ಷದಿಂದ ವರ್ಷಕ್ಕೆ ಬೇಸಿಗೆ ಬಿಸಿಲು ಹೆಚ್ಚುವುದರ ಜೊತೆಗೆ ಮಾರುಕಟ್ಟೆಗೆ ಎಳನೀರು ಆವಕ ಕುಸಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಪ್ಪು ತಲೆ ಹುಳು, ನುಸಿಪೀಡೆ ಬಾಧೆ ತೆಂಗಿನ ಮರಗಳನ್ನು ಕಾಡುತ್ತಿದೆ. ತೆಂಗಿನ ಮರದಲ್ಲಿ ಇಳುವರಿ ಕಡಿಮೆಯಾಗಿದೆ. ಈ ಹಿಂದೆ ಒಂದು ಮರದಿಂದ 100 ರಿಂದ 150 ಕಾಯಿಗಳು ಸಿಗುತ್ತಿದ್ದವು. ಇದೀಗ 50 ರಿಂದ 60 ಕಾಯಿ ಕೀಳುವುದು ಕಷ್ಟವಾಗಿದೆ. 50 ಸಾವಿರ ಇಳುವರಿ ಇದ್ದ ನಮ್ಮ ತೋಟದಲ್ಲಿ, ಇದೀಗ 25ಸಾವಿರ ಇಳುವರಿ ಬರುತ್ತಿದೆ. ಶೇ 50ರಷ್ಟು ಇಳುವರಿ ಕುಸಿದಿದೆ’ ಎಂದು ದಿಂಡಗೂರು ಗ್ರಾಮದ ತೆಂಗು ಬೆಳೆಗಾರ ಸಂತೋಷ್ ಹೇಳುತ್ತಾರೆ.
‘ಒಳ್ಳೆಯ ಎಳನೀರನ್ನು ನೇರವಾಗಿ ತೋಟದಿಂದ ಸಾಗಣೆ ಮಾಡಲಾಗುತ್ತಿದೆ. ಮುಂಬೈ, ದೆಹಲಿಯಂತ ಮೆಟ್ರೋ ನಗರದಲ್ಲಿ ಇದೇ ಎಳನೀರನ್ನು ಚಿಲ್ಲರೆ ಮಾರಾಟದಲ್ಲಿ ₹ 120 ರಿಂದ ₹ 150ಕ್ಕೆ ಮಾರಾಟವಾಗುತ್ತದೆ. ಬೇಡಿಕೆ ಹೆಚ್ಚಿರುವುದರಿಂದ ದಲ್ಲಾಳಿಗಳು, ತೋಟಗಳಿಂದ ನೇರವಾಗಿ ಹೊರರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಎಳನೀರಿನ ಕೊರತೆಯಾಗಿದೆ. ಅಲ್ಲದೇ ಸ್ಥಳೀಯರಿಗೆ ಗುಣಮಟ್ಟದ ಎಳನೀರು ಸಿಗುತ್ತಿಲ್ಲ’ ಎನ್ನುತ್ತಾರೆ ಎಳನೀರು ಮಾರಾಟಗಾರರಾದ ಸತೀಶ್.
ಜಿಲ್ಲೆಯಲ್ಲಿ ತೆಂಗಿನ ರೋಗಬಾಧೆ ಹೆಚ್ಚಾಗಿದೆ. ಇರುವ ಎಳನೀರು ಹೊರರಾಜ್ಯಗಳಿಗೆ ಹೋಗುತ್ತಿದೆ. ಇದರಿಂದ ಸ್ಥಳೀಯರಿಗೆ ಎಳನೀರು ಕೊರತೆಯಾಗಿದ್ದು ಬೆಲೆಯೂ ಹೆಚ್ಚಾಗಿದೆ.ವಿರೂಪಾಕ್ಷ ಗಂಡಸಿಯ ರೈತ
ಇತ್ತೀಚಿನ ದಿನಗಳಲ್ಲಿ ಎಳನೀರಿನ ದರ ವಿಪರೀತ ಏರಿಕೆಯಾಗಿದೆ. ಅಲ್ಲದೇ ಒಳ್ಳೆಯ ಕಾಯಿಗಳೂ ಸಿಗುತ್ತಿಲ್ಲ. ಎಳನೀರನ್ನು ಕೊಳ್ಳುವುದೇ ಬೇಡ ಎನ್ನುವಂತಾಗಿದೆ.ಸುನಂದಾ ವಿಜಯನಗರ ಬಡಾವಣೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.