
ಹಾಸನ: ಇಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸಾಂಸ್ಕೃತಿಕ ಕಲಾಸಂಘದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಹಾಸನಾಂಬ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರು, ದೊಡ್ಡಘಟ್ಟ ಬೆಳ್ಳೂರು ಕ್ರಾಸ್ ಮಂಜುನಾಥ್ ನಿರ್ದೇಶನದಲ್ಲಿ ಭಾನುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ‘ಸತ್ಯಕ್ಕೆ ಜಯ ಎಂಬ ಉದಾತ್ತ ಸಂದೇಶ ಸಾರುವ ನಾಟಕ ಸತ್ಯ ಹರಿಶ್ಚಂದ್ರ. ಮಹಾತ್ಮ ಗಾಂಧೀಜಿಯವರು ಹರಿಶ್ಚಂದ್ರ ನಾಟಕವನ್ನು ಎಷ್ಟು ಸಾರಿ ನೋಡಿದರೂ ನನಗೆ ತೃಪ್ತಿಯೇ ಆಗಲಿಲ್ಲ. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ, ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಅದರ್ಶ ಎಂದು ತಮ್ಮ ಆತ್ಮಕಥೆಯಲ್ಲಿ ಹೇಳಿದ್ದಾರೆ. ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ ಸತ್ಯ ಹರಿಶ್ಚಂದ್ರ ನಾಟಕವನ್ನು ಕಲಾವಿದರು ಆಸಕ್ತಿಯಿಂದ ಕಲಿತು ಪ್ರದರ್ಶಿಸುತ್ತಿರುವುದು ಮೆಚ್ಚುಗೆಯ ವಿಶೇಷ’ ಎಂದು ಹೇಳಿದರು.
‘ಇಲ್ಲಿ ಹೆಚ್ಚಾಗಿ ಕುರುಕ್ಷೇತ್ರ, ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿದ್ದು, ಹೊಸ ನಾಟಕಗಳು ರಂಗದ ಮೇಲೆ ಬರಬೇಕು. ಕಂಪನಿ ನಾಟಕ ಸತ್ಯ ಹರಿಶ್ಚಂದ್ರ ಬಹಳ ಹಿಂದೆಯೇ ಸಿನಿಮಾ ಆಗಿ ಜನಪ್ರಿಯವಾಗಿದೆ. ಇಂತಹ ಹಲವಾರು ಕಂಪನಿ ನಾಟಕಗಳಿದ್ದು ಅವುಗಳನ್ನು ರಂಗದ ಮೇಲೆ ತರುವಲ್ಲಿ ಕಲಾತಂಡಗಳು ಗಮನ ಹರಿಸಲಿ’ ಎಂದು ಆಶಿಸಿದರು.
ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ ಮಾತನಾಡಿ, ‘ಕಲಾಭವನದಲ್ಲಿ ಸತ್ಯ ಹರಿಶ್ಚಂದ್ರ ಪ್ರಥಮ ಬಾರಿ ಪ್ರದರ್ಶಿತವಾಗುತ್ತಿದೆ. ಮುಂದೆಯೂ ಬೇರೆ ಪೌರಾಣಿಕ ನಾಟಕಗಳು ರಂಗದ ಮೇಲೆ ಬರಲು ಕಲಾತಂಡಗಳಿಗೆ ಪ್ರೇರಣೆಯಾಗಲಿ’ ಎಂದರು.
ಸಂಘದ ಅಧ್ಯಕ್ಷರು ಎಚ್.ವಿ.ಆನಂದ್, ಗೌರವಾಧ್ಯಕ್ಷ ಕೆ.ಪಿ.ರಾಮಾಚಾರ್, ಉಪಾಧ್ಯಕ್ಷ ಪ್ರದೀಪ್, ರಂಗಭೂಮಿ ಕಲಾವಿದರಾದ ಕಲ್ಲಯ್ಯ (ಕುಶಾಲ್), ಕೆ.ಹಿರಿಹಳ್ಳಿ ರವಿ, ಚಂದ್ರಶೇಖರ್ ಸಿಗರನಹಳ್ಳಿ, ವೈಭವ್ ವೆಂಕಟೇಶ್, ನಾಗಮೋಹನ್, ಸಾಣೇನಹಳ್ಳಿ ಸೋಮಶೇಖರ್, ಆನಂದಕುಮಾರ್ ಎಚ್.ಕೆ ಇದ್ದರು.
ಪ್ರಕಾಶ್ ಬಿ.ಆರ್. ತಟ್ಟೇಕೆರೆ ನಿರೂಪಿಸಿದರು. ನಂಜಪ್ಪ ಪೊಲೀಸ್ ಪ್ರಾರ್ಥಿಸಿದರು. ನಾಟಕದಲ್ಲಿ ಹರಿಶ್ಚಂದ್ರನ ಪಾತ್ರಕ್ಕೆ ಜಯಕುಮಾರ್ ನ್ಯಾಯ ಒದಗಿಸಿದರು. ಈರಯ್ಯ ಎನ್.ಸಿ. ನಾರದನಾಗಿ ಹಾಡುಗಾರಿಕೆಯಲ್ಲಿ ರಂಜಿಸಿದರು. ದೇವೇಂದ್ರನ ಪಾತ್ರದಲ್ಲಿ ರುದ್ರೇಶ್ ಟಿ.ಎಸ್, ವಶಿಷ್ಠರ ಪಾತ್ರದಲ್ಲಿ ಶಿವಕುಮಾರ್, ಮಂತ್ರಿ ಸತ್ಯಕೀರ್ತಿ ಪಾತ್ರದಲ್ಲಿ ತಿಮ್ಮಪ್ಪ ಮಾತುಗಳು ಸ್ಪಷ್ಟವಾಗಿ, ಅಭಿನಯವೂ ಸೂಕ್ತವಾಗಿತ್ತು. ವಾದ್ಯಗೋಷ್ಠಿಯಲ್ಲಿ ಸೋಮರಾಜ್ ಸುಮಧುರ ಹಾಡುಗಾರಿಕೆಯಿಂದ ಯಶಸ್ವಿ ಪ್ರದರ್ಶನಕ್ಕೆ ಸಹಕಾರಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.