ಹಾಸನ: ಹಾಸನಾಂಬ ದರ್ಶನೋತ್ಸವದ 3 ದಿನವಾದ ಶನಿವಾರ ಭಕ್ತರ ದಂಡು ಹರಿದು ಬಂದಿತ್ತು. ಅಚ್ಚುಕಟ್ಟಾದ ವ್ಯವಸ್ಥೆ, ಸುಲಲಿತ ದರ್ಶನಕ್ಕೆ ಸಂತಸಗೊಂಡಿರುವ ಭಕ್ತರು, , ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ದರ್ಶನಕ್ಕೆ ಬಂದಿದ್ದು, ಧರ್ಮದರ್ಶನ, ಗೋಲ್ಡ ಪಾಸ್, ₹ 1 ಸಾವಿರ ಹಾಗೂ ₹300 ಟಿಕೆಟ್ ಪಡೆದ ಭಕ್ತರು ಅತ್ಯಂತ ಕಡಿಮೆ ಸಮಯದಲ್ಲಿ ದರ್ಶನ ಪಡೆದು ಹೊರ ಬರುತ್ತಿರುವುದು ಸಾಮಾನ್ಯವಾಗಿತ್ತು.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದಿಂದಾಗಿ ವಿಶೇಷ ಪಾಸ್‌ಗಳ ವ್ಯವಸ್ಥೆ ರದ್ದು ಮಾಡಲಾಗಿದೆ. ಇದರಿಂದಲೇ ಸಾರ್ವಜನಿಕರ ದರ್ಶನಕ್ಕೆ ಯಾವುದೇ ಅಡೆತಡೆ ಆಗುತ್ತಿಲ್ಲ. ಶಿಷ್ಟಾಚಾರ ಪಾಲನೆ ನೆಪದಲ್ಲಿ ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿಲ್ಲ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.
ಕೃಷ್ಣ ಬೈರೇಗೌಡರಿಂದ ಖುದ್ದು ಸ್ಥಳ ಪರಿಶೀಲನೆ: ಹಾಸನಾಂಬ ದೇವಿ ದರ್ಶನೋತ್ಸವ ಪ್ರಾರಂಭ ಆದಾಗಿನಿಂದಲೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ದೇವಸ್ಥಾನದ ಆವರಣ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಇದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದು, ದರ್ಶನ ವ್ಯವಸ್ಥೆಯಲ್ಲಿ ಲೋಪವಾಗುತ್ತಿಲ್ಲ. ಶನಿವಾರ ಸಹ ಕೃಷ್ಣ ಬೈರೇಗೌಡರು ದೇವಸ್ಥಾನದ ಆವರಣದಲ್ಲಿ ಧರ್ಮದರ್ಶನ ಸೇರಿದಂತೆ ಇತರೆ ಸಾಲುಗಳಲ್ಲಿ ಬರುವ ಭಕ್ತರ ಅಭಿಪ್ರಾಯಗಳನ್ನು ಆಲಿಸಿದರು. ಮತ್ತಷ್ಟು ಉತ್ತಮ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳುವ ಕುರಿತು ಸಲಹೆಗಳನ್ನೂ ಪಡೆದರು.
ಮಾರಾಟ ಮಳಿಗೆಯತ್ತ ಜನ ಜಾತ್ರೆ: ಹಾಸನಾಂಬ ದರ್ಶನ ಪಡೆದ ನಂತರ ಸಾರ್ವಜನಿಕರು ದೇವಾಲಯದ ಸುತ್ತ ಹಾಕಲಾಗಿರುವ ವಿವಿಧ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಜನ ಜಾತ್ರೆಯೇ ಕಾಣುತ್ತಿದೆ.
ಹೆಣ್ಣು ಮಕ್ಕಳಿಗೆ ಬೇಕಾದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳು, ಅಡುಗೆ ಮನೆಗೆ ಬೇಕಾದ ವಸ್ತುಗಳು, ಚಿಕ್ಕಮಕ್ಕಳನ್ನು ಆಕರ್ಷಿಸುವ ಆಟದ ಸಾಮಾನು, ಬಲೂನು, ಖಾರ ಮಂಡಕ್ಕಿ ಸೇರಿದಂತೆ ನಾನಾ ಬಗೆಯ ಆಹಾರ ಪದಾರ್ಥಗಳು ಜನರನ್ನು ಆಕರ್ಷಿಸುತ್ತಿವೆ. ಸಣ್ಣಪುಟ್ಟ ಬಟ್ಟೆ ಅಂಗಡಿಗಳು, ವಿವಿಧ ಬಗೆಯ ಹಣ್ಣಿನ ಜ್ಯೂಸ್ ಸ್ಟಾಲ್, ಸ್ಮ್ಯಾಕ್ ಅಂಗಡಿಗಳು ಸಹ ಇರುವುದು ಮತ್ತಷ್ಟು ಆಕರ್ಷಣೆಯಾಗಿದೆ.
ಒಂದೇ ದಿನ ₹ 63 ಲಕ್ಷ ಸಂಗ್ರಹ
ಹಾಸನಾಂಬ ಸಾರ್ವಜನಿಕರ ದರ್ಶನ ಪ್ರಾರಂಭವಾಗಿ ಒಂದೇ ದಿನದಲ್ಲಿ ₹ 63 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಿದೆ. ದೇವಿಯ ಶೀಘ್ರ ದರ್ಶನಕ್ಕೆ ₹ 300 ಹಾಗೂ ₹ 1ಸಾವಿರ ಟಿಕೆಟ್ ಮಾರಾಟದಿಂದ ₹ 6156000 ಸಂಗ್ರಹವಾಗಿದೆ. ಲಾಡು ಪ್ರಸಾದ ಮಾರಾಟದಿಂದ ₹ 2.46 ಲಕ್ಷ ಆದಾಯ ಬಂದಿದೆ ಎಂದು ಟಿಕೆಟ್ ಹಾಗೂ ಪ್ರಸಾದ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.
ಅ.19 ರಂದು ಶ್ವಾನ ಪ್ರದರ್ಶನ
ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅ.19 ರಂದು ಹಾಸನ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನ: ಅ.17 ರಿಂದ ಅ.20 ರವರೆಗೆ ನಗರದ ಸಿಲ್ವರ್ ಜ್ಯೂಬಿಲಿ ಆರ್ಚರ್ಡ್ ಪಾರ್ಕ್‍ನಲ್ಲಿ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ ಹಾಗೂ ಹೇಮಾವತಿ ತೋಟಗಾರಿಕೆ ಸಂಘಗಳ ಆಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಆಸಕ್ತ ನಗರದ ನಾಗರಿಕರು ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಹಾಗೂ ವಿದ್ಯಾರ್ಥಿಗಳು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯಿತಿ ಇಲ್ಲಿಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಮೊ: 9164100138 9986024885 8277097450 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.