ADVERTISEMENT

ನವೆಂಬರ್‌ನಲ್ಲಿ ನನ್ನ ಆತ್ಮಚರಿತ್ರೆ ಬಿಡುಗಡೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 13:12 IST
Last Updated 11 ಸೆಪ್ಟೆಂಬರ್ 2021, 13:12 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಹಾಸನ:‘ ನನ್ನ 60 ವರ್ಷಗಳ ರಾಜಕೀಯ ಸಾಧನೆ, ಸೋಲು-ಗೆಲುವು, ಏಳು-ಬೀಳು ಸೇರಿದಂತೆ ಎಲ್ಲಾ ವಿಷಯಗಳಿರುವ ಆತ್ಮಚರಿತ್ರೆ ಬರೆಯುವ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ಬರುವ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ತಿಳಿಸಿದರು.

ತಾಲ್ಲೂಕಿನ ಉಡುವಾರೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ದೇವಾಲಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡುಮಾತನಾಡಿದ ಅವರು, ‘ಆರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರ ಅನುಭವಿಸಿದ್ದು ಐದು ವರ್ಷ ಮಾತ್ರ.ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದೆ. ಎರಡು ವರ್ಷ ನೀರಾವರಿ ಸಚಿವನಾಗಿದ್ದೆ. ಹತ್ತೂವರೆ ತಿಂಗಳು ಪ್ರಧಾನಿಯಾಗಿದ್ದೆ. ಈ ಅವಧಿಯಲ್ಲಿ ಏನೆಲ್ಲಾ ಹೋರಾಟ ಮಾಡಿದ್ದೇನೆ. ಎಲ್ಲಾ ಸಮುದಾಯಕ್ಕೆ ಏನು ಮಾಡಿದ್ದೇನೆ ಎಂಬುದು ಅನೇಕರಿಗೆ ತಿಳಿದಿಲ್ಲ. ಎಲ್ಲಾವಿಷಯಗಳು ಆತ್ಮಚರಿತ್ರೆಯಲ್ಲಿದ್ದು, ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಆಸಕ್ತಿ ಇದ್ದವರು ಓದಬಹುದು’ ಎಂದರು.

‘ರೈತನ ಮಗನಾಗಿ ಹುಟ್ಟಿ ರೈತನ ಮಗನಾಗಿಯೇ ಸಾಯುತ್ತೇನೆ. ನನಗೆ ಪದ್ಮಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಯಾವುದೇ ಪ್ರಶಸ್ತಿ ಬೇಕಿಲ್ಲ. ರಾಜಕೀಯದಲ್ಲಿ ಜನತಾ ಜನಾರ್ಧನನ ಆಶೀರ್ವಾದ ಇದ್ದರಷ್ಟೇ ಎತ್ತರಕ್ಕೆ ಬೆಳೆಯಲು ಸಾಧ್ಯ. ಇಷ್ಟು ವರ್ಷದ ಜೀವನದಲ್ಲಿ ಸಿಹಿ-ಕಹಿ ಎರಡನ್ನೂ ನೋಡಿದ್ದೇನೆ. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ರೈತರು, ಗ್ರಾಮೀಣ ಜನರ ಪರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

ಸನ್ನಿವೇಶ ನೋಡಿ ತೀರ್ಮಾನ:ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಸನ್ನಿವೇಶ ನೋಡಿಕೊಂಡು ಎಚ್‌.ಡಿ. ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ. ಬೆಂಬಲ ನೀಡುವ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದು ನಿಜ. ಸಿ.ಎಂ ಬೊಮ್ಮಾಯಿ ಅವರು ಕುಮಾರಸ್ವಾಮಿ ಜೊತೆ ಮಾತಾಡಿದ್ದಾರೆ. ಸ್ಥಳೀಯವಾಗಿ ಗೆದ್ದಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಮಾಡಬೇಕು. ಅದನ್ನು ಬಿಟ್ಟು ನಾವೇ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.