ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನಾಂಬೆ ದರ್ಶನಕ್ಕೆ ಬಂದಿದ್ದ ವೇಳೆ ಅವರಿಗೆ ಶಿಷ್ಟಾಚಾರದಂತೆ ಸನ್ಮಾನಿಸುವ ಮೂಲಕ ಗೌರವ ಕೊಟ್ಟಿಲ್ಲ ಎಂದು ಆರೋಪಿಸಿದ ಜೆಡಿಎಸ್ ಶಾಸಕರು, ಮುಖಂಡರು, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಪರಿಸ್ಥಿತಿ ನಿರಂತ್ರಿಸಲು ಎಸ್ಪಿ, ಎಎಸ್ಪಿ, ಉಪವಿಭಾಗಾಧಿಕಾರಿ ಹರಸಾಹಸಪಟ್ಟರು. ಹಲವು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳು ಬರುವುದು ಕತ್ತಲಾದರೂ ಸ್ಥಳದಲ್ಲೇ ಕುಳಿತು ಹೋರಾಟ ನಡೆಸಲಾಗುವುದು ಎಂದು ಪಟ್ಟು ಹಿಡಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸ್ವರೂಪ್ ಪ್ರಕಾಶ್ ಮಾತನಾಡಿ, ಹಾಸನಾಂಬ ದೇವಾಲಯ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಹಲವು ಜನಪ್ರತಿನಿಧಿಗಳು ಕಾರಣರಾಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡಿದ್ದರು.ಜಿಲ್ಲೆಯ ರೈತರ ಮಗನಾಗಿ ಹಾಗೂ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಅವರನ್ನು ಜಿಲ್ಲಾಡಳಿತ ಸನ್ಮಾನಿಸದೇ ಅಗೌರವ ತೋರಿಸುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದರ್ಶನೋತ್ಸವ ಸಂದರ್ಭದಲ್ಲಿ ಧರ್ಮದರ್ಶನ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ ನಮ್ಮೂರ ಜಾತ್ರೆಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಸುಮ್ಮನಿದ್ದೇವೆ ಆದರೂ ಸಹ ಜಿಲ್ಲಾಡಳಿತ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೂ ನನ್ನನ್ನು ಆಹ್ವಾನಿಸಿಲ್ಲ. ವಿಜ್ಞಾನ ಕ್ರೀಡಾಂಗಣದ ಹುಲ್ಲು ಹಾಸನ್ನು ಹಾಳುಗೆಡವಿದ್ದಾರೆ. ನನ್ನ ಗಮನಕ್ಕೆ ಬಾರದಂತೆ ಆಹಾರ ಮೇಳವನ್ನು ಉದ್ಘಾಟಿಸಿದ್ದಾರೆ ಎಂದು ದೂರಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಯ ಹರಿಕಾರೀಹ. ಅವರಿಗೆ ಗೌರವ ತೊರ್ಆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ದೇವರ ದರ್ಶನಕ್ಕೆ ಅಡಚಣೆ ಮಾಡಬಾರದು ಎಂದು ಸುಮ್ಮನಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಸೂಕ್ತ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ದೇವಸ್ಥಾನ ಆಡಳಿತ ಮಂಡಳಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಗೋಲ್ಡನ್ ಪಾಸ್‌ಗಳನ್ನು ಬೇಕಾಬಿಟ್ಟಿ ಕೊಡಲಾಗುತ್ತಿದೆ. ಮಾಜಿ ಶಾಸಕರು, ಮಾಜಿ ಸಚಿವರಿಗೂ ಗೋಲ್ಡನ್ ಪಾಸ್ ಸಿಗುತ್ತಿಲ್ಲ. ಮೂರು ವಾರದಿಂದ ಹಾಸನಾಂಬ ಜಾತ್ರಾ ನೆಪದಲ್ಲಿ ಸರ್ಕಾರಿ ಕಚೇರಿಗಳು ಖಾಲಿ ಆಗಿವೆ. ಜನರ ಕೆಲಸಗಳೇ ಆಗುತ್ತಿಲ್ಲ ಎಂದು ಆರೋಪಿಸಿದರು.
ಶಾಸಕ ಎ.ಮಂಜು ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಿರುವುದು ಖಂಡನೀಯ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೂರಬೇಕು. ಬದಲಿಗೆ ದೇವಾಲಯದಲ್ಲಿ ಇರುತ್ತಾರೆ. ಅವರೇನು ಪೂಜಾರಿಯೇ ಎಂದು ಪ್ರಶ್ನಿಸಿದರು?
ನನ್ನ ಕ್ಷೇತ್ರದಲ್ಲಿ ಮೂರು ಕೆರೆಗಳು ಒಡೆದು ಹೋಗಿವೆ. ಈ ಸಂಬಂಧ ಕರೆ ಮಾಡಿದರೆ ಕಾಲ್ ಕಟ್ ಮಾಡುತ್ತಾರೆ. ಬೇಜವಾಬ್ದಾರಿ ವರ್ತನೆ ಮಾಡುತ್ತಿರುವ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮೇಯರ್ ಗಿರೀಶ್ ಚನ್ನವೀರಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಮಂಜೇಗೌಡ, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘುಗೌಡ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಯರಾಮ್, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿಯಿಂದ ಶಾಸಕರ ಮಾನವೊಲಿಕೆ
ಮಧ್ಯಾಹ್ನ 2.30 ರವರೆಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ನಡುರಸ್ತೆಯಲ್ಲಿ ಟೆಂಟ್ ಹಾಕಿ ಶಾಸಕರು ಹಾಗೂ ಜನಪ್ರತಿನಿಧಿಗಳು ಧರಣಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಶಾಸಕರಾದ ಎ.ಮಂಜು ಸ್ವರೂಪ್ ಪ್ರಕಾಶ್ ಹಾಗೂ ಇತರೆ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಇದುವರೆಗೂ ನಡೆದ ಘಟನೆಗೆ ಸಮಜಾಯಿಷಿ ನೀಡಿದರು. ಕುಮಾರಸ್ವಾಮಿ ಅವರು ಬಂದ ಸಂದರ್ಭದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಅವರು ಅಷ್ಟು ದೊಡ್ಡವರಾದರೂ ಭಕ್ತರಿಗೆ ಅನುಕೂಲವಾಗಲು ಅವರು ಸ್ಪಂದನೆ ಮಾಡಿದ್ದಾರೆ. ಹಾಸನಾಂಬ ದರ್ಶನದ ಇತಿಹಾಸದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶುಕ್ರವಾರ ಹೆಚ್ಚಿನ ಮಂದಿ ಬಂದಿದ್ದರು. ದೇವಾಲಯದಲ್ಲಿ ಅವರಿಗೆ ಹಾರ ಹಾಕಿ ಗೌರವ ನೀಡಲಾಯಿತು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಎಲ್ಲ ಶಾಸಕರು ತಮ್ಮ ಕುಟುಂಬದ ಸದಸ್ಯರ ಜೊತೆ ಬಂದಿದ್ದರು. ಅವರೂ ನಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮರುದಿನ ಅವರು ಮೆಸೇಜ್ ಮಾಡಿ ನಮ್ಮ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ನಾನು ನಿಮಗೆ ಸಮಯ ಕೊಡಲು ಆಗಿಲ್ಲ ಎಂದೂ ನಾನು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ನೀವು ಜನರ ಬಗ್ಗೆ ಗಮನ ಕೊಡಿ ಅದೇ ಮುಖ್ಯ ಎಂದು ತಿಳಿಸಿದ್ದಾರೆ ಎಂದರು. ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ ಶಾಸಕ ಎ.ಮಂಜು ಜಿಲ್ಲಾಧಿಕಾರಿ ಜೊತೆ ಮಾತನಾಡಿಸಿದರು.
ನಂತರ ಶಾಸಕ ಸ್ವರೂಪ್ ಪ್ರಕಾಶ್ ಜೊತೆಗೂ ಮಾತನಾಡಿದ ಕುಮಾರಸ್ವಾಮಿ ಪ್ರತಿಭಟನೆ ನಿಲ್ಲಿಸುವಂತೆ ಸೂಚನೆ ನೀಡಿದರು. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ ಹಾಸನಾಂಬೆಯ ಪ್ರಸಾದ ವಿತರಿಸಿ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.