ADVERTISEMENT

ಹೃದಯದ ಆರೋಗ್ಯ ಕಾಪಾಡಿಕೊಳ್ಳಿ: ಸಂಸದ ಶ್ರೇಯಸ್ ಪಟೇಲ್‌

ವಿಶ್ವ ಹೃದಯ ದಿನಾಚರಣೆ: ಹೆಲ್ದಿ ಹಾರ್ಟ್ ವಾಕಥಾನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:43 IST
Last Updated 27 ಸೆಪ್ಟೆಂಬರ್ 2025, 4:43 IST
ಹಾಸನದ ಹೇಮಾವತಿ ಪ್ರತಿಮೆಯ ಬಳಿ ಶುಕ್ರವಾರ ವಾಕಥಾನ್‌ಗೆ ಚಾಲನೆ ನೀಡಲಾಯಿತು.
ಹಾಸನದ ಹೇಮಾವತಿ ಪ್ರತಿಮೆಯ ಬಳಿ ಶುಕ್ರವಾರ ವಾಕಥಾನ್‌ಗೆ ಚಾಲನೆ ನೀಡಲಾಯಿತು.   

ಹಾಸನ: ‘ಹೃದಯ ಬಡಿತ ಇದ್ದರಷ್ಟೇ ನಾವು ಬದುಕಲು ಸಾಧ್ಯ. ಎಷ್ಟೇ ಕೆಲಸದ ಒತ್ತಡ ಇದ್ದರೂ ಪ್ರತಿಯೊಬ್ಬರೂ ಹೃದಯ ಸಂಬಂಧಿತ ಕಾಯಿಲೆ ಬಗ್ಗೆ ಮತ್ತು ತಮ್ಮ ದಿನಚರಿ ಹಾಗೂ ಹವ್ಯಾಸಗಳ ಬಗ್ಗೆ ಗಮನ ಹರಿಸಬೇಕು’ ಎಂದು ಸಂಸದ ಶ್ರೇಯಸ್ ಪಟೇಲ್‌ ಹೇಳಿದರು.

ಜನಪ್ರಿಯ ಆಸ್ಪತ್ರೆ, ಹಾಸನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಐಎಂಎ ಹಾಸನ ಆಶ್ರಯದಲ್ಲಿ ಶುಕ್ರವಾರ ವಿಶ್ವ ಹೃದಯ ದಿನದ ಅಂಗವಾಗಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ವಾಕಥಾನ್‌ಗೆ ನಗರದ ಹೇಮಾವತಿ ಪ್ರತಿಮೆ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

‘ದಿನ ಬೆಳಗಾದರೇ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಸರಿಯಾದ ಸಮಯಕ್ಕೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು, ಪ್ರತಿದಿನ ಕನಿಷ್ಠ 5 ಕಿ.ಮೀ. ನಡೆಯುವುದು, ಎಲ್ಲಕ್ಕಿಂತ ಮುಖ್ಯವಾಗಿ ಮದ್ಯಪಾನ, ಧೂಮಪಾನವನ್ನು ಬಿಡುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ‘ಹೃದಯದ ಆರೋಗ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಚಿಕ್ಕ ವಯಸ್ಸಿನ ಯುವಕರಲ್ಲಿ ಹೃದಯ ಸಂಬಂಧಿಸಿದ ಕಾಯಿಲೆ ಬರುತ್ತಿದ್ದು, ನಿತ್ಯ ವ್ಯಾಯಾಮ ಮಾಡುವುದರ ಜೊತೆಗೆ ಆಹಾರ ಪದ್ಧತಿಯಲ್ಲೂ ಕೆಲ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ’ ಎಂದರು.

ಜನಪ್ರಿಯ ಫೌಂಡೇಶನ್‍ನ ಮುಖ್ಯಸ್ಥ ಡಾ.ವಿ.ಕೆ. ಅಬ್ದುಲ್ ಬಷೀರ್ ಮಾತನಾಡಿ, ‘ಮನುಷ್ಯನ ಪ್ರಮುಖ ಅಂಗ ಎಂದರೆ ಹೃದಯ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮನುಷ್ಯನ ಜೀವ ಇದೆ ಎಂದು ಹೇಳುವುದಕ್ಕೆ ಈ ಹೃದಯ ಪ್ರಮುಖ’ ಎಂದರು.

ಮೇಯರ್ ಗಿರೀಶ್ ಚನ್ನವೀರಪ್ಪ ಮಾತನಾಡಿ, ‘ಇಂದಿನ ತಾಂತ್ರಿಕ ಯುಗದಲ್ಲಿ ಆಹಾರದ ಬಗ್ಗೆ ಬಹುತೇಕರು ಕಾಳಜಿವಹಿಸುತ್ತಿಲ್ಲ. ಎಷ್ಟೇ ಹಣ, ಆಸ್ತಿ, ಅಂತಸ್ತು ಇದ್ದರೂ ಆರೋಗ್ಯ ಚೆನ್ನಾಗಿ ಇಲ್ಲದಿದ್ದರೇ ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ಆರೋಗ್ಯದ ಕಡೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಸಭಾಪತಿ ಎಚ್.ಪಿ. ಮೋಹನ್ ಮಾತನಾಡಿ, ‘ಹೃದಯಾಘಾತ ಆತಂಕ ಮೂಡಿಸಿದೆ. ಈ ಬಗ್ಗೆ ಅರಿವು ಮೂಡಿಸಲು ವಾಕಥಾನ್ ಮಾಡಲಾಗುತ್ತಿದೆ. ಆಹಾರ ಶೈಲಿಯಲ್ಲಿ ಬದಲಾವಣೆ, ನಿತ್ಯ ಸರಳ ವ್ಯಾಯಾಮ ಮಾಡಿದರೇ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್ ಗೌಡ, ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್‌ ಅಹಮದ್, ಖಜಾಂಚಿ ಎಚ್.ಡಿ.ಜಯೇಂದ್ರ ಕುಮಾರ್, ನಿರ್ದೇಶಕರಾದ ಎಸ್.ಎಸ್. ಪಾಷ, ಕೆ.ಟಿ. ಜಯಶ್ರೀ, ಮಹಾವೀರ್ ಬನ್ಸಾಲಿ, ಬಿ.ಆರ್. ಉದಯಕುಮಾರ್, ಡಾ. ರಂಗಲಕ್ಷ್ಮೀ, ಗಿರೀಶ್, ಜಯಪ್ರಕಾಶ್, ಭೀಮರಾಜ್, ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ, ಡಾ.ಯತೀಶ್ ಕುಮಾರ್, ಡಾ.ದಿನೇಶ್ ಭೈರೇಗೌಡ, ಡಾ.ಶ್ರೀರಂಗ ಡಾಂಗೆ, ಕಟ್ಟಾಯ ಶಿವಕುಮಾರ್, ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಇತರರು ಪಾಲ್ಗೊಂಡಿದ್ದರು.

ಆರೋಗ್ಯವಂತ ವ್ಯಕ್ತಿಗಳಿಂದ ದೇಶ ಸದೃಢ

ಆಸ್ಪತ್ರೆ ಅಭಿವೃದ್ಧಿಯಾದರೇ ಸಾಕಾಗುವುದಿಲ್ಲ. ಜನಸಾಮಾನ್ಯರ ಆರೋಗ್ಯ ಕೂಡ ಉತ್ತಮವಾಗಿರಲಿ ಎಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು. ಹೃದಯ ಚೆನ್ನಾಗಿದ್ದರೇ ಆರೋಗ್ಯ ಉತ್ತಮವಾಗಿರುತ್ತದೆ. ಒಬ್ಬ ವ್ಯಕ್ತಿಯ ಆರೋಗ್ಯ ಚೆನ್ನಾಗಿದ್ದರೆ ದೇಶದ ಆರೋಗ್ಯವೂ ಸದೃಢವಾಗಿರುತ್ತದೆ. ಇಂತಹ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಹೃದಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

‘ಸಮಸ್ಯೆಯನ್ನು ಆನಂದದಿಂದ ಸ್ವೀಕರಿಸಿ’

‘ಎರಡು ತಿಂಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಹೃದಯಘಾತದಿಂದ ಅನೇಕರು ಸಾವನಪ್ಪಿರುವುದು ಸುದ್ದಿ ಆಯಿತು. ಈಗ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯದು’ ಎಂದು ಪುಷ್ಪಗಿರಿ ಮಠದ ಮಠಾಧೀಶ ಸೋಮಶೇಖರ ಸ್ವಾಮೀಜಿ ಹೇಳಿದರು. ‘ನಮ್ಮ ಹೃದಯ ಚೆನ್ನಾಗಿರಬೇಕಾದರೇ ಮನಸ್ಸು ಕೂಡ ಉತ್ತಮವಾಗಿರಬೇಕು. ಮನಸ್ಸಿನೊಳಗೆ ಪ್ರೀತಿ ವಿಶ್ವಾಸ ಬೆಳೆಸಿಕೊಂಡು ಉತ್ತಮ ಆರೋಗ್ಯ ಪಡೆಯಬಹುದು. ಸಮಸ್ಯೆಯನ್ನು ಆನಂದವಾಗಿ ಸ್ವೀಕರಿಸಿದರೇ ನಮ್ಮ ಹೃದಯ ಚೆನ್ನಾಗಿರುತ್ತದೆ’ ಎಂದು ಸಲಹೆ ನೀಡಿದರು.

ಕಾಯಿಲೆಯ ಆರಂಭದಲ್ಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ದಿನಚರಿಯಲ್ಲಿ ಪ್ರತಿದಿನ ಕೆಲ ಸಮಯ ದೇಹಕ್ಕೆ ವ್ಯಾಯಾಮ ನೀಡಿ ಆರೋಗ್ಯವನ್ನು ರಕ್ಷಿಸಿಕೊಳ್ಳಿ.
ಮಂಜುನಾಥ್, ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.