ADVERTISEMENT

ಮಳೆ ಆರ್ಭಟ: ಉರುಳಿದ ಮರ, ಸಿಡಿಲು ಬಡಿದು ಇಬ್ಬರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 16:03 IST
Last Updated 13 ಏಪ್ರಿಲ್ 2022, 16:03 IST
ಕೊಣನೂರಿನ ಗ್ರಾಮ ಪಂಚಾಯಿತಿ ಎದುರು ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿಯಿತು.
ಕೊಣನೂರಿನ ಗ್ರಾಮ ಪಂಚಾಯಿತಿ ಎದುರು ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿಯಿತು.   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಧಾರಾಕಾರಮಳೆ ಸುರಿಯಿತು.ಮಳೆ ಆರ್ಭಟಕ್ಕೆ ಮರಗಳು ಉರುಳಿ ಬಿದ್ದಿದ್ದು, ಹಲವೆಡೆ ಮನೆಗಳ ಹೆಂಚು, ಶೀಟ್‌ಗಳು ಗಾಳಿಗೆ ಹಾರಿ ಹೋಗಿದೆ.

ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗೇಟ್‌ ಬಳಿ ಸಿಡಿಲು ಬಡಿದು ಬಸವನಪುರದ ಉದಯ್‌ ಶಂಕರ್ (20) ಮತ್ತು ಸೋಸಲಗೆರೆ ಗ್ರಾಮದ ದರ್ಶನ್‌ (18) ಮೃತಪಟ್ಟಿದ್ದಾರೆ.ಭಾರಿ ಮಳೆ–ಗಾಳಿ ಆರಂಭವಾಗಿದ್ದರಿಂದ ಇಬ್ಬರು ಬಸ್‌ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು. ಆಗ ಸಿಡಿಲು ಬಡಿದಿದೆ.

ಜಿಲ್ಲಾ ಕೇಂದ್ರ ಹಾಸನ ಸೇರಿದಂತೆ ತಾಲ್ಲೂಕಿನಾದ್ಯಂತ, ಬೇಲೂರು, ಸಕಲೇಶಪುರ, ಅರಕಲಗೂಡು, ಕೊಣನೂರು, ಹಿರೀಸಾವೆ ಭಾಗಗಳಲ್ಲಿ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ.ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಚರಂಡಿಗಳುಕಟ್ಟಿಕೊಂಡಿದ್ದರಿಂದ ರಸ್ತೆಗಳಲ್ಲೇ ನೀರು ಹರಿದು ಜನರ ಓಡಾಟಕ್ಕೂತೊಂದರೆಯಾಗಿದೆ. ಕೃಷಿ ಜಮೀನು, ಗದ್ದೆಗಳಲ್ಲೂ ನೀರು ನಿಂತಿದೆ.

ADVERTISEMENT

ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ಐದು ಗಂಟೆಯ ನಂತರ ಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಬೀದಿ ಬದಿ ವರ್ತಕರು, ಕಟ್ಟಿನ ಕೆರೆ ಮಾರುಕಟ್ಟೆ ಸೇರಿದಂತೆ ಹಲವೆಡೆ ವ್ಯಾಪಾರಕ್ಕೆ ಹೊಡೆತ ಬಿತ್ತು.

ಹಿರೀಸಾವೆಯಲ್ಲಿ ಸಂಜೆ ಗಾಳಿ ಸಹಿತ ಜೋರು ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು, ವಾಹನಗಳ ಸಂಚಾರಕ್ಕೆ ಕೆಲ ಸಮಯ ಅಡ್ಡಿಯಾಯಿತು. ಕೆಲವೆಡೆ ಮನೆ ಹೆಂಚು ಮತ್ತು ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ.

ಕೊಣನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗಿದೆ. ಗ್ರಾಮ ಪಂಚಾಯಿತಿ ಎದುರಿನ ಚರಂಡಿ ತುಂಬಿ ರಸ್ತೆಯ ಮೇಲೆ ನೀರು ಹರಿಯಿತು.ಅರಕಲಗೂಡು ಸುತ್ತಮುತ್ತ ಸಾಧಾರಣ ಮಳೆಯಾದರೆ, ಹೊಳೆನರಸೀಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ.

ಚನ್ನರಾಯಪಟ್ಟಣದಲ್ಲಿ ‌ಸಾಧಾರಣ, ಹಳೇಬೀಡು ಹೋಬಳಿ, ಬೇಲೂರು ಮತ್ತು ಆಲೂರು ಭಾಗದಲ್ಲಿ ಹದವಾದ ಮಳೆ ಸುರಿದಿದೆ.ಸಕಲೇಶಪುರ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಂಜೆ 30 ನಿಮಿಷಕ್ಕೂಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ಹೆತ್ತೂರು ಭಾಗದಲ್ಲಿಯೂ ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.