ಸಕಲೇಶಪುರ ತಾಲ್ಲೂಕು ಬಾರ್ಲಿ-ಮಲ್ಲೇಗದ್ದೆ-ಕಾಡಮನೆ ನಡುವಿ ರಸ್ತೆ, ಎತ್ತಿನಹೊಳೆ ಪೈಪ್ ಲೈನ್ ಸೇರಿದಂತೆ ಭಾರೀ ಭೂ ಕುಸಿತ
ಹಾಸನ: ಜಿಲ್ಲೆಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ಮಂಗಳವಾರ ಬೆಳಿಗ್ಗೆ ಸಕಲೇಶಪುರ ತಾಲ್ಲೂಕಿನ ಕುಂಬರಡಿ ಹಾಗೂ ಹಾರ್ಲೆ ಎಸ್ಟೇಟ್ ನಡುವೆ ಭೂಕುಸಿತ ಸಂಭವಿಸಿದೆ.
ಭೂಕುಸಿತದಿಂದಾಗಿ ರಸ್ತೆಯೊಂದು 200 ಮೀಟರ್‌ಗೂ ಹೆಚ್ಚು ದೂರ ಕೊಚ್ಚಿ ಹೋಗಿದೆ. ಮಧ್ಯದಲ್ಲಿಯೇ ರಸ್ತೆ ಕೊಚ್ಚಿ ಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಯೋಜನೆ ಪೈಪ್‌ಲೈನ್ ಅಳವಡಿಸಲಾಗಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹೇಮಾವತಿ ಹೊರಹರಿವು ಹೆಚ್ಚಳ: ಎರಡು ದಿನಗಳಿಂದ ಕಡಿಮೆಯಾಗಿದ್ದ ಹೇಮಾವತಿ ಜಲಾಶಯದ ಒಳಹರಿವು ಮಂಗಳವಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 73800 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಹೇಮಾವತಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗಂಗಾಧರ್ ತಿಳಿಸಿದ್ದಾರೆ.
ಕೊಚ್ಚಿ ಹೋದ ರಸ್ತೆ, ಭತ್ತದ ಗದ್ದೆ: ಬೇಲೂರು ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸುಳ್ಳಕ್ಕಿ ಗ್ರಾಮದ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸುಳ್ಳಕ್ಕಿ–ಮೈಲಹಳ್ಳಿ, ಆಲೂರು–ಬೇಲೂರು–ಕೋನೆರ್ಲು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಜೊತೆಗೆ ನಾಟಿ ಮಾಡಿದ್ದ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಅರಕಲಗೂಡು ತಾಲ್ಲೂಕಿನ ಯಗಟಿ ಗ್ರಾಮದ ಸರ್ಕಾರಿ ಶಾಲೆ ಆವರಣ ಮತ್ತು ಶಾಲೆ ಕೊಠಡಿ ಜಲಾವೃತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.