ADVERTISEMENT

ಹಾಸನ | ಭೂ ಅಕ್ರಮ ಮಂಜೂರಾತಿ: ಹೇಮಾವತಿ ಸಂತ್ರಸ್ತರ ಮುಗಿಯದ ಬವಣೆ

ಮತ್ತೊಂದು ಸಮಿತಿ ರಚನೆ ಸುಳಿವು ನೀಡಿದ ಸಚಿವ ಕೃಷ್ಣ ಬೈರೇಗೌಡ

ಚಿದಂಬರಪ್ರಸಾದ್
Published 20 ಆಗಸ್ಟ್ 2025, 1:50 IST
Last Updated 20 ಆಗಸ್ಟ್ 2025, 1:50 IST
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬ್ಯಾಬ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ಹೇಮಾವತಿ ಯೋಜನೆ ಸಂತ್ರಸ್ತರು
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬ್ಯಾಬ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ಹೇಮಾವತಿ ಯೋಜನೆ ಸಂತ್ರಸ್ತರು   

ಹಾಸನ: ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೆಮ್ಮದಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ ಇದೀಗ ಕಂದಾಯ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಇನ್ನಾದರೂ ಸಮಸ್ಯೆ ಪರಿಹಾರ ಆದೀತು ಎನ್ನುವ ಆಶಾಭಾವನೆ ಮೂಡಿದೆ.

ಒಂದೆಡೆ ಅನರ್ಹರಿಗೆ ಭೂಮಿ ಮಂಜೂರಾತಿ ಮಾಡಿರುವ ಪ್ರಕರಣಗಳಿದ್ದರೆ, ನೈಜವಾಗಿ ಭೂಮಿ ಕಳೆದುಕೊಂಡವರಿಗೆ ಇನ್ನೂ ಪಹಣಿ ಸಿಗುತ್ತಿಲ್ಲ. ಈ ಮಧ್ಯೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ‘ಇದೆಲ್ಲವನ್ನು ಪರಿಶೀಲಿಸಲು ಮತ್ತೊಂದು ಸಮಿತಿ ಮಾಡಬೇಕಾಗಬಹುದು’ ಎಂದು ಹೇಳಿರುವುದು, ಸಂತ್ರಸ್ತರ ಬವಣೆ ಶೀಘ್ರ ಪರಿಹಾರ ಆಗಲಿಕ್ಕಿಲ್ಲ ಎನ್ನುವ ಆತಂಕವನ್ನೂ ಉಂಟು ಮಾಡಿದೆ.

1971ರಲ್ಲಿ ಹೇಮಾವತಿ ಅಣೆಕಟ್ಟು ನಿರ್ಮಿಸಲಾಗಿದ್ದು, ಮುಳುಗಡೆ ಸಂತ್ರಸ್ತರಿಗೆ ವಿತರಿಸಲು ಸರ್ಕಾರವು ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಬ್ಯಾಬ ಅರಣ್ಯ ಪ್ರದೇಶದ 1,500 ಎಕರೆ ಪ್ರದೇಶವನ್ನು 52 ವರ್ಷಗಳ ಹಿಂದೆಯೇ ಮೀಸಲಿಟ್ಟಿದೆ.

ADVERTISEMENT

ಬ್ಯಾಬ ಫಾರೆಸ್ಟ್, ಬ್ಯಾಬ ಫಾರೆಸ್ಟ್ 1ಪಿ, 2ಪಿ, 3ಪಿ ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದು, ಸಂತ್ರಸ್ತರಿಗೆ ತಲಾ ನಾಲ್ಕು ಎಕರೆಯಂತೆ ಹಂಚಿಕೆ ಮಾಡಲು 320 ಬ್ಲಾಕ್‌ಗಳನ್ನು ವಿಂಗಡಿಸಲಾಗಿದೆ. ಸಂತ್ರಸ್ತರಲ್ಲಿ ಸಾಗುವಳಿ ಚೀಟಿಗಳು ಮಾತ್ರವಿದ್ದು, ಜಮೀನಿನ ದಾಖಲೆಗಳನ್ನು ಇನ್ನೂ ಸರಿಪಡಿಸಿಲ್ಲ. ಪೋಡಿ ಆಗದೇ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ನಮಗೆ ನೀಡಿರುವ ಭೂಮಿಗೆ ಸಂಬಂಧಿಸಿದ ಅಗತ್ಯ ದಾಖಲೆ ಇಲ್ಲದೇ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯುಲು ಆಗುತ್ತಿಲ್ಲ. ಬೆಳೆ ಹಾನಿ ಪರಿಹಾರ ಪಡೆಯಲು ಆಗದೇ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸದೇ ಬೇಕಾಬಿಟ್ಟಿ ಉತ್ತರ ನೀಡುತ್ತಾರೆ’ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.

‘ಬ್ಯಾಬ ನಂ. 1 ಅನ್ನು ಒಟ್ಟುಗೂಡಿಸಿದ್ದೇವೆ. ದಾಖಲೆಗಳು ತಾಳೆ ಆಗುತ್ತಿಲ್ಲ. ಒಂದು ಸಾವಿರ ಎಕರೆ ಜಮೀನು ಇದೆ. 1,500 ಎಕರೆ ಆರ್‌ಟಿಸಿ ಬರುತ್ತಿದೆ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಗ್ರಾಮದಲ್ಲಿ ಒಟ್ಟಾಗಿ ಸೇರಿ ದಾಖಲೆಗಳನ್ನು ಸರಿಪಡಿಸಬೇಕು’ ಎನ್ನುವುದು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಹೇಳುವ ಮಾತು.

‘ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಜಿಲ್ಲೆಯ ಸುಮಾರು 10 ಸಾವಿರ ರೈತ ಕುಟುಂಬಗಳಿಗೆ ಪರಿಹಾರವಾಗಿ ಜಿಲ್ಲೆಯ ವಿವಿಧೆಡೆ ಹಲವು ದಶಕಗಳ ಹಿಂದೆಯೇ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ. ಇದಕ್ಕೆ ಹಣ ಕಟ್ಟಿಸಿಕೊಂಡಿದ್ದು, ಇಲ್ಲಿಯವರೆಗೆ ಬಹುಪಾಲು ಸಂತ್ರಸ್ತ ಕುಟುಂಬಗಳಿಗೆ ಜಮೀನುಗಳನ್ನು ಗುರುತಿಸಿ, ಖಾತೆ, ಪಹಣಿ ಮುಂತಾದ ಹಕ್ಕುಪತ್ರಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ’ ಎಂದು ದೂರುತ್ತಿದ್ದಾರೆ.

‘ಜಮೀನಿಗೆ ಪಹಣಿ ಮಾಡದೇ, ಸರ್ಕಾರ ಹಾಗೂ ಬ್ಯಾಂಕ್‌ನಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂದು ಐದು ನೂರು ಕುಟುಂಬಗಳಿದ್ದವು. ವಿಭಜನೆ ನಂತರ 600 ಕುಟುಂಬಗಳಾಗಿವೆ. ಕೆಲ ಪ್ರಕರಣಗಳು ಹೈಕೋರ್ಟ್‌ವರೆಗೆ ಹೋಗಿವೆ. ಕೂಡಲೇ ಪೋಡಿ ಆಗಬೇಕು’ ಎಂದು ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತ ಕೃಷ್ಣೇಗೌಡ ಒತ್ತಾಯಿಸುತ್ತಾರೆ.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌, ಸಾಲ ಮನ್ನಾ, ಅಲ್ಪಾವಧಿ, ದೀರ್ಘಾವಧಿ ಬೆಳೆ ಸಾಲ, ಬೆಂಬಲ ಬೆಲೆಯಲ್ಲಿ ಉತ್ಪನ್ನಗಳ ಮಾರಾಟದಂತಹ ಸೌಲಭ್ಯಗಳಿಂದಲೂ ಸಂತ್ರಸ್ತರು ವಂಚಿತರಾಗಿದ್ದಾರೆ. ಯೋಜನೆಗಳಿಗೆ ಬೇಕಾದ ಪಹಣಿಯೇ ಅವರ ಹೆಸರಿನಲ್ಲಿ ಇನ್ನೂ ಸಿದ್ಧವಾಗಿಲ್ಲ.

ಆಲೂರು ಕಸಬಾ ಮಣಿಪುರ ಗ್ರಾಮದಲ್ಲಿ ಮುಳುಗಡೆ ವಾರಸುದಾರರೊಬ್ಬರ ಜಮೀನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಮತ್ತಷ್ಟು ಅಧ್ಯಯನ: ಕೃಷ್ಣ ಬೈರೇಗೌಡ

‘ಇದು ನಿನ್ನೆ-ಮೊನ್ನೆ ಸಮಸ್ಯೆ ಅಲ್ಲ. ನೈಜತೆ ಹೊಂದಿರುವ ಹಾಗೂ ಇಲ್ಲದ ಪ್ರಕರಣ ಬೇರ್ಪಡಿಸಿ ನಂತರ ಹೇಳಲಾಗುವುದು. ಇದಕ್ಕೆ ಮತ್ತೊಂದು ಕಮಿಟಿ ಮಾಡಬೇಕಿದೆ. ಅರ್ಹರಿಗೆ ನ್ಯಾಯ ಸಿಗಬೇಕು. ಆ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಿ ಮುಂದಿನ ಕ್ರಮ ಕೈಗೊಳ್ಳುವೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ‘ಹೇಮಾವತಿ ಮುಳುಗಡೆ ಸಂತ್ರಸ್ತರ ಭೂ ಹಗರಣದ ಹಿಂದೆ ಐಎಎಸ್ ಅಧಿಕಾರಿಗಳ ಸಮಿತಿಯೇ ತನಿಖೆ ಮಾಡಿತ್ತು. 8600ರ ಪೈಕಿ 1200 ಪ್ರಕರಣಗಳಲ್ಲಿ ನೈಜತೆ ಇಲ್ಲ. 7 ಗುಂಟೆ ಜಮೀನು ಮುಳುಗಡೆ ಆಗಿದ್ದರೆ 4 ಎಕರೆ ಪಡೆದಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಐಎಎಸ್‌ ಅಧಿಕಾರಿಗಳ ಸಮಿತಿ ಕೆಲ ಸಲಹೆ ನೀಡಿದೆ. ಅದೆಲ್ಲವನ್ನೂ ಪರಿಶೀಲಿಸಲಾಗುವುದು’ ಎಂದು ಹೇಳಿದ್ದಾರೆ. ‘ನೈಜ ಪ್ರಕರಣಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವರದಿ ಸಿದ್ಧಪಡಿಸಲು ತಿಳಿಸಲಾಗಿದೆ. ಈ ವರದಿ ಬಂದ ಕೂಡಲೇ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.