
ಹಾಸನ: ತಾಲ್ಲೂಕಿನ ಗೊರೂರು ಹೇಮಾವತಿ ಜಲಾಶಯದ ಮುಂಭಾಗದ 530 ಎಕರೆ ಪ್ರದೇಶದಲ್ಲಿ ಕೆಆರ್‌ಎಸ್ ಮಾದರಿ ಹೇಮಾವತಿ ಬೃಂದಾವನ ನಿರ್ಮಾಣಕ್ಕೆ ಇದೀಗ ಮತ್ತೆ ಜೀವ ಬಂದಂತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಯೋಜನೆ ಕಾರ್ಯಗತವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಹೇಮಾವತಿ ಜಲಾಶಯದ ಎದುರು ಸುಸಜ್ಜಿತವಾದ ಬೃಂದಾವನ ನಿರ್ಮಾಣಕ್ಕೆ ಸಾಕಷ್ಟು ಅವಕಾಶಗಳಿವೆ. ಸರ್ಕಾರ ₹ 200ಕೋಟಿಯಿಂದ ₹ 300 ಕೋಟಿ ಅನುದಾನ ಬಿಡುಗಡೆ ಮಾಡಿದಲ್ಲಿ, ಕೆಆರ್‌ಎಸ್ ಮಾದರಿಯ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸುವುದು ಸಾಧ್ಯವಾಗಲಿದೆ.
ಜಲಾಶಯ ನಿರ್ಮಾಣವಾಗಿ 60 ವರ್ಷ ಕಳೆಯುತ್ತಿವೆ. ಜಲಾಶಯದ ಹಿನ್ನೀರು ಮತ್ತು ಮುಂಭಾಗಕ್ಕೆ ಗ್ರಾಮಸ್ಥರು ಸುಮಾರು 750 ಎಕರೆ ಜಮೀನು ಬಿಟ್ಟು ಕೊಟ್ಟಿದ್ದಾರೆ. ಪಕ್ಕದಲ್ಲಿಯೇ ಹೇಮಾವತಿ ನದಿ ಹರಿಯುತ್ತಿದೆ. ಇಷ್ಟೆಲ್ಲ ಸೌಕರ್ಯಗಳಿದ್ದರೂ, ಉದ್ಯಾನದ ಅಭಿವೃದ್ಧಿಗೆ ಮೀನಮೇಷ ಎಣಿಸಲಾಗುತ್ತಿದೆ.
ಇಲ್ಲಿ ಬೃಂದಾವನ ನಿರ್ಮಾಣಕ್ಕೆ ಕೆಲ ವರ್ಷಗಳ ಹಿಂದೆಯೇ ನೀಲನಕ್ಷೆ ತಯಾರಿಸಲಾಗಿತ್ತು. ಅನುದಾನ ಸೇರಿದಂತೆ ವಿವಿಧ ಕಾರಣಗಳಿಂದ ಇದು ಅಲ್ಲಿಯೇ ನಿಂತಿದೆ. ಇದಕ್ಕೆ ಮರು ಚಾಲನೆ ನೀಡಬೇಕಾದ ಅಗತ್ಯವಿದೆ ಎನ್ನುತ್ತಾರೆ ಗೊರೂರು ಹೇಮಾವತಿ ಬೃಂದಾವನ ನಿರ್ಮಾಣ ಹೋರಾಟ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಜಿ.ಆರ್. ಹೇಮರಾಜ್.
ಅಗತ್ಯ ಏಕೆ?: ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸಕಲೇಶಪುರ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿವೆ. ರಾಜ್ಯ ಹಾಗೂ ಹೊರರಾಜ್ಯದ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ, ನೆಮ್ಮದಿಯಾಗಿ ಒಂದಿಷ್ಟು ಸಮಯ ಕಳೆಯುವುದಕ್ಕೆ ಪ್ರಶಾಂತ ವಾತಾವರಣ ಅಗತ್ಯವಿದೆ. ಅದಕ್ಕಾಗಿ ಉದ್ಯಾನ ನಿರ್ಮಾಣ ಮಾಡಬೇಕು ಎನ್ನುವುದು ಜನರ ಒತ್ತಾಯ.
ಹಾಸನದಿಂದ 15 ಕಿ.ಮೀ. ದೂರದಲ್ಲಿರುವ ಗೊರೂರು, ಅರಕಲಗೂಡು ಮೂಲಕ ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಯಲ್ಲಿದೆ. ಹಾಗಾಗಿ ಹಾಸನದಿಂದ ಕೊಡಗಿಗೆ ಹೋಗುವ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಲ್ಲದೇ ನಗರದಿಂದ ಅಷ್ಟೇನೂ ದೂರದಲ್ಲಿ ಇಲ್ಲದೇ ಇರುವುದರಿಂದ ಜಿಲ್ಲೆಯ ಬೇರೆಡೆ ಬರುವ ಪ್ರವಾಸಿಗರೂ ಇಲ್ಲಿಗೆ ಭೇಟಿ ನೀಡಲು ಅನುಕೂಲವಾಗಿದೆ. ಅಲ್ಲದೇ ರಸ್ತೆ ಸಂಪರ್ಕವೂ ಸರಿಯಾಗಿದ್ದು, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಹೇಳಿ ಮಾಡಿಸಿದಂಥ ಸ್ಥಳವಾಗಿದೆ.
ಹೇಮಾವತಿ ಜಲಾಶಯದಿಂದ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಸುವುದನ್ನು ವೀಕ್ಷಿಸಲು ಸಾವಿರಾರು ಜನರು ಈ ಸ್ಥಳಕ್ಕೆ ಬರುತ್ತಾರೆ. ಕೇವಲ ನೀರು ಹರಿಸುವುದನ್ನು ಕಣ್ತುಂಬಿಕೊಳ್ಳುವ ಜನರು, ಗೇಟ್ ಮುಚ್ಚಿದ ತಕ್ಷಣ ವಾಪಸಾಗಬೇಕಾಗಿದೆ. ಅದೇ ಉದ್ಯಾನ ನಿರ್ಮಾಣ ಮಾಡಿದರೆ, ವರ್ಷದ 12 ತಿಂಗಳೂ ಇಲ್ಲಿಗೆ ಜನರು ಬಂದು ಹೋಗಬಹುದಾಗಿದೆ.
ಆದಾಯವೂ ವೃದ್ಧಿ: ಕೆಆರ್‌ಎಸ್ ಮಾದರಿಯಲ್ಲಿ ಸುಂದರ ಉದ್ಯಾನ, ಬೆಳಕಿನ ವ್ಯವಸ್ಥೆ, ಸಂಗೀತ ಕಾರಂಜಿ, ಬೋಟಿಂಗ್‌ನಂತಹ ಸೌಲಭ್ಯಗಳನ್ನು ಒದಗಿಸಿದಲ್ಲಿ, ಪ್ರವಾಸೋದ್ಯಮದ ಮೂಲಕ ಆದಾಯವನ್ನೂ ಪಡೆಯಬಹುದಾಗಿದೆ.ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯ ಜೊತೆಗೆ ಹೇಮಾವತಿ ಜಲಾಶಯ ಉದ್ಯಾನದ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.
ಹಾಸನ ಜಿಲ್ಲೆಯ ಜೀವನದಿಯಾಗಿರುವ ಹೇಮಾವತಿ ಜಲಾಶಯದ ಬಳಿ 500 ಎಕರೆಗೂ ಅಧಿಕ ಜಾಗವಿದ್ದು ಉದ್ಯಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯ ಜೊತೆಗೆ ಹೇಮಾವತಿ ಜಲಾಶಯ ಉದ್ಯಾನದ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.