
ಹೊಳೆನರಸೀಪುರ: ಪಟ್ಟಣದ ಕೋಟೆ ಉತ್ತರಾದಿಮಠದ ಜಗಲಿಯ ಮೇಲೆ 1925ರಲ್ಲಿ ಬೆರಳೆಣಿಯಷ್ಟು ಮಕ್ಕಳನ್ನು ಕೂರಿಸಿಕೊಂಡು ಶಿಕ್ಷಕರು ಪಾಠ ಕಲಿಸುತ್ತಿದ್ದರು. ಉತ್ತರಾದಿಮಠದ ಅಂದಿನ ಗುರುಗಳು ಈ ಜಾಗವನ್ನು ಶಾಲೆಗೆ ಬಿಟ್ಟುಕೊಟ್ಟಿದ್ದರಿಂದ ಕೋಟೆಯ ಈ ಸರ್ಕಾರಿ ಶಾಲೆ ಆರಂಭವಾಗಿದ್ದು, ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ.
100 ವರ್ಷದ ಹಿಂದೆ ಇಡೀ ತಾಲ್ಲೂಕಿಗೆ ಇದ್ದುದು ಕೇವಲ 2 ಸರ್ಕಾರಿ ಶಾಲೆಗಳು. ಒಂದು ಮಹಾತ್ಮಗಾಂಧಿ ಉದ್ಯಾನವನದ ಹಿಂದೆ ಇರುವ ಸರ್ಕಾರಿ ಜಿ.ಕೆ.ಬಿ.ಎಸ್, ಶಾಲೆ, ಇನ್ನೊಂದು ಈ ಕೋಟೆ ಸರ್ಕಾರಿ ಶಾಲೆ. 1 ರಿಂದ 5 ತರಗತಿವರೆಗೆ ಪ್ರಾರಂಭವಾಗಿದ್ದ ಈ ಶಾಲೆಯಲ್ಲಿ, ಇಂದು ಎಲ್.ಕೆ.ಜಿ. ಯಿಂದ 7ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. 450 ವಿದ್ಯಾರ್ಥಿಗಳಿದ್ದು, ಶೇ 65 ರಷ್ಟು ಬಾಲಕಿಯರು, ಶೇ 35 ರಷ್ಟು ಬಾಲಕರಿದ್ದಾರೆ.
ಈ ಶಾಲೆಗೆ ಸೇರಿಸಲು ಪೋಷಕರು ನಾಮುಂದು, ತಾಮುಂದು ಎಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲದೇ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನದಲ್ಲಿ ಈ ಶಾಲೆಗೆ ಇಷ್ಟೊಂದು ಬೇಡಿಕೆ ಹೆಚ್ಚಲು ಅಂದಿನಿಂದ ಇಂದಿನವರೆಗೂ ಸೇವೆ ಸಲ್ಲಿಸಿದ ಶಿಕ್ಷಕರೇ ಕಾರಣ ಎನ್ನುತ್ತಾರೆ ಸ್ಥಳೀಯರು.
ಈ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸರ್ಕಾರದ ಬಿಸಿಯೂಟ, ಸಮವಸ್ತ್ರ, ಶೈಕ್ಷಣಿಕ ಪ್ರವಾಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಪ್ರತಿಭಾಕಾರಂಜಿ, ನಲಿಕಲಿ ಯೋಜನೆಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದ್ದು, ಈ ಶಾಲೆಯ ಯಶಸ್ಸಿಗೆ ಕಾರಣ ಎನ್ನುತ್ತಾರೆ ಶಿಕ್ಷಕರು.
ಶುಕ್ರವಾರ (ಜ.30) ಸಂಜೆ ನಡೆಯುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಪತ್ನಿ ಹಾಗೂ ಎಚ್.ಡಿ. ದೇವೇಗೌಡರ ಪುತ್ರಿ ಅನುಸೂಯ ಮಂಜುನಾಥ್ ಭಾಗವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ಈ ಶಾಲೆಗೆ ಪ್ರಧಾನಮಂತ್ರಿ ಅನುದಾನ ದೊರೆಯುತ್ತಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆಕೆ.ಎಚ್. ಚಂದ್ರಶೇಖರ್ ಸಿಆರ್‌ಪಿ
ಮಕ್ಕಳಿಗೆ ಮಕ್ಕಳಂತೆ ಕಲಿಸುತ್ತಿರುವ ಕಾರಣ ನಮ್ಮ ಶಾಲೆಯ ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡುತ್ತಿರುವುದು ಇತರ ಪೋಷಕರ ಮೇಲೆ ಪ್ರಭಾವ ಬೀರುತ್ತಿದೆಪುಫ್ಪಲತಾ ನಿಂಗರಾಜು ಶಿಕ್ಷಕಿ
ನಾನು ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಈ ಶಾಲೆಗೆ ಮುಖ್ಯಶಿಕ್ಷಕನಾಗಿ ಅಧಿಕಾರ ವಹಿಸಿಕೊಂಡಿರುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆಪಿ. ರಾಜು ಮುಖ್ಯಶಿಕ್ಷಕ
ನಾನು ಈ ಶಾಲೆಯಲ್ಲಿ 20 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪೋಷಕರು ಸಾರ್ವಜನಿಕರು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಸಹಕಾರದಿಂದ ಶಾಲೆ ಪ್ರಗತಿಯಾಗಿದೆಪುಷ್ಪಲತಾ ಮಹೇಶಪ್ಪ ಶಿಕ್ಷಕಿ
ಶಾಲೆಯಲ್ಲಿ ಕಲಿತವರು...
ಈ ಶಾಲೆಯಲ್ಲಿ ಓದಿದ ದಿವಂಗತ ಎಚ್.ವೈ. ಶಾರದಾಪ್ರಸಾದ್ ಪತ್ರಿಕಾ ರಂಗದಲ್ಲಿ ದೊಡ್ಡ ಸಾಧನೆ ಮಾಡಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು. ಹಾಲಿ ಶಾಸಕ ಎಚ್.ಡಿ. ರೇವಣ್ಣ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೇವೇಗೌಡರ ಪುತ್ರಿ ಅನುಸೂಯ ಮಂಜುನಾಥ್ ನಿವೃತ್ತ ನ್ಯಾಯಾಧೀಶ ಎಚ್.ಆರ್. ಶ್ರೀನಿವಾಸ್ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರಮೇಶ್ ಸೇರಿದಂತೆ ಈ ಶಾಲೆಯಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಕ್ರೀಡೆ ಸಾಹಿತ್ಯ ವೈದ್ಯಕೀಯ ವಿಜ್ಞಾನ ಪತ್ರಿಕೋದ್ಯಮ ಸಾರಿಗೆ ರಕ್ಷಣೆ ಪೊಲೀಸ್ ಇಲಾಖೆಗಳಲ್ಲಿ ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.