ADVERTISEMENT

ಹೊಳೆನರಸೀಪುರ: ಲಕ್ಷ್ಮೀನರಸಿಂಹ ಬ್ರಹ್ಮರಥೋ‌ತ್ಸವಕ್ಕೆ ಕ್ಷಣಗಣನೆ

ಜಾತ್ರೆಗೆ ಪೂರ್ಣಗೊಂಡ ಸಿದ್ಧತೆ– ಸಹಸ್ರಾರು ಭಕ್ತಾದಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:42 IST
Last Updated 2 ಮಾರ್ಚ್ 2026, 6:42 IST
ಹೊಳೆನರಸೀಪುರದಲ್ಲಿ ಮಂಗಳವಾರ ನಡೆಯಲಿರುವ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ರಥವನ್ನು ನವವಧುವಿನಂತೆ ಸಿಂಗರಿಸಲಾಗಿದೆ.
ಹೊಳೆನರಸೀಪುರದಲ್ಲಿ ಮಂಗಳವಾರ ನಡೆಯಲಿರುವ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ರಥವನ್ನು ನವವಧುವಿನಂತೆ ಸಿಂಗರಿಸಲಾಗಿದೆ.   

ಹೊಳೆನರಸೀಪುರ: ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ನಡೆಯಲಿದ್ದು, ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.

ರಥೋತ್ಸವಕ್ಕೆ ಮುನ್ನ ನಡೆಯುವ ಪೂಜಾ ವಿಧಿ ವಿಧಾನಗಳು ನಿತ್ಯ ನಡೆಯುತ್ತಿವೆ. ನಿತ್ಯ ಪೂಜೆಯನ್ನು ಒಂದೊಂದು ಇಲಾಖೆಯವರ ಸಹಯೋಗದಲ್ಲಿ ನಡೆಸಲಾಗುತ್ತಿದೆ. ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ರಥೋತ್ಸವದಂದು ರಥವನ್ನು ವಿವಿಧ ಬಗೆಯ ಹೂವುಗಳಿಂದ ನವವಧುವಿನಂತೆ ಸಿಂಗರಿಸಲಾಗಿದೆ.

ರಥೋತ್ಸವಕ್ಕೆ ಬರುವವರಿಗೆ ಮನರಂಜನೆ ನೀಡಲು ಇಲ್ಲಿನ ಬಯಲು ರಂಗಮಂದಿರದ ಆವರಣದಲ್ಲಿ ದೊಡ್ಡ ಮನರಂಜನೆ ಪಾರ್ಕ್‌ ತೆರೆದಿದೆ. ಬಯಲುರಂಗ ಮಂದಿರದ ಆವರಣದಲ್ಲಿ ಆಟಿಕೆಗಳ ಜೊತೆಗೆ ವಿವಿಧ ಬಗೆಯ ತಿನಿಸು, ತಂಪು ಪಾನೀಯದ ಅಂಗಡಿಗಳನ್ನು ತೆರೆಯಲಾಗಿದೆ. ಇದರ ಜೊತೆಗೆ ಮನರಂಜನೆಯ ಆಟಗಳ ಮಳಿಗೆಗಳೂ ತೆರೆದಿವೆ. ಕೋಟೆ ಮುಖ್ಯರಸ್ತೆಯಲ್ಲಿ ಎಲ್ಲಮ್ಮ ದೇವಿ ದೇವಸ್ಥಾನದವರೆಗೆ ವಿವಿಧ ಬಗೆಯ ಆಟಿಕೆಯ ಅಂಗಡಿ ತೆರೆಯಲು, ಮಿಠಾಯಿ, ಬತ್ತಾಸು, ಕಡ್ಲೆಪುರಿ, ಖರ್ಜೂರದ ಅಂಗಡಿಗಳನ್ನು ತೆರೆಯಲು ಜೋಡಿಸಿಕೊಂಡಿದ್ದಾರೆ.

ADVERTISEMENT

ಪುರಸಭೆಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಸಾದ ಸ್ವೀಕರಿಸಿದ ನಂತರ ತಟ್ಟೆಗಳನ್ನು ಕಸದ ಆಟೋಗಳಲ್ಲಿ ಹಾಕಿ ಸಹಕರಿಸಬೇಕು ಎಂದು ಪರಿಸರ ಎಂಜಿನಿಯರ್‌ ರುಚಿ ದರ್ಶಿನಿ ವಿನಂತಿಸಿದ್ದಾರೆ.

ರಥೋತ್ಸವದ ದಿನ ಕೆಲವರು ಹೋಳಿ ಆಡುತ್ತಾರೆ. ಈ ರೀತಿ ಹೋಳಿ ಆಡುವವರು ರಥೋತ್ಸವಕ್ಕೆ ಬರುವವರಿಗೆ ಬಣ್ಣ ಎರಚಿದರೆ, ಕ್ರಮ ತೆಗೆದುಕೊಳ್ಳವಾಗುವುದು ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಹಾಗೂ ನಗರಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅಭಿಜಿತ್‌ ಎಚ್ಚರಿಸಿದ್ದಾರೆ. ರಥೋತ್ಸವ ದಿನದಂದು ರಥ ಸಾಗುವ ಮಾರ್ಗದಲ್ಲಿ ಯಾವುದೇ ಬಗೆಯ ವಾಹನಗಳನ್ನು ನಿಲ್ಲಿಸಬಾರದು ಎಂದು ತಿಳಿಸಿದ್ದಾರೆ.

ಬಿಗಿ ಪೊಲೀಸ್‌ ಬಂದೋಬಸ್ತ್‌: ತೇರಿಗೆ ಹೊಸಬಟ್ಟೆ ತೊಡಿಸುವ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಬೇಕು– ಬೇಡ ಎನ್ನುವ ವಾದ ನಡೆದ ಹಿನ್ನೆಲೆಯಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುಂಜಾಗ್ರತೆ ವಹಿಸಲಾಗಿದೆ.

ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪ್ರಸಾದ ನೀಡಲು ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಸಿದ್ದರಾಗಿದ್ದಾರೆ. ಪ್ರಸಾದ ವಿತರಣೆ ಜಾಗದಲ್ಲಿ ಕಂದಾಯ ಇಲಾಖೆ ನೌಕರರನ್ನು ಹೊರತುಪಡಿಸಿ ಬೇರಾರಿಗೂ ಅವಕಾಶ ಇರುವುದಿಲ್ಲ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ರಥೋತ್ಸವಕ್ಕೆ ಬರುವವರಿಗೆ ಮನರಂಜನೆ ನೀಡಲು ಬಯಲುರಂಗ ಮಂದಿರದ ಆವರಣದಲ್ಲಿ ಮನರಂಜನೆ ಪಾರ್ಕ್‌ ಸಿದ್ಧಗೊಂಡಿದೆ.
ತಾತನ ಜೊತೆಯಲ್ಲಿ ಜಾತ್ರೆ ನೋಡಲು ಬರುತ್ತಿದ್ದೆ. ನಮ್ಮೂರಿನ ಜಾತ್ರೆ ವೈಭವ ಉಳಿಸಿಕೊಂಡು ಬಂದಿದೆ. ಹಿಂದೆ ದನಗಳ ಜಾತ್ರೆಯೂ ನಡೆಯುತ್ತಿತ್ತು. ಈ ದನಗಳ ಜಾತ್ರೆ ನಡೆಯದಿರುವುದು ಬೇಸರದ ಸಂಗತಿ
ಎನ್‌.ಜಿ.ಮುಕುಂದ ವೆಂಕಟೇಶ ಮೆಡಿಕಲ್‌ ಸ್ಟೋರ್‌ ಮಾಲೀಕ
ಜಾತ್ರೆ ಅಂದರೆ ನಮಗೆ ಶ್ರದ್ದೆ. ಜಾತ್ರೆಯ ದಿನ ಲಕ್ಷ್ಮೀನರಸಿಂಹನ ದರ್ಶನ ಮಾಡಿ ರಥ ಎಳೆಯದಿದ್ದರೆ ನಮಗೆ ಸಮಾದಾನವೇ ಇರುವುದಿಲ್ಲ. ಆದಿನ ರಥ ಎಳೆಯುವುದಕ್ಕೇ ನನ್ನ ಮೊದಲ ಆದ್ಯತೆ
ಮನೋಹರ ಜ್ಯೋತಿ ಟೆಲಿಲಿಂಕ್‌ ಅಂಗಡಿ ಮಾಲೀಕ

ರಥೋತ್ಸವದ ಯಶಸ್ಸಿಗೆ ಸಹಕರಿಸಿ

ರಥೋತ್ಸವದ ದಿನ ಬೆಳಿಗ್ಗೆ 3 ಗಂಟೆಯಿಂದಲೇ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ರಥಾರೋಹಣಕ್ಕೆ ಮುನ್ನ ಉತ್ಸವಮೂರ್ತಿಯ ಉತ್ಸವ ಪೂಜಾ ವಿಧಿ ವಿಧಾನಗಳು ನಡೆದ ನಂತರ ಸ್ವಾಮಿಯ ರಥಾರೋಹಣ ನಡೆಯುತ್ತದೆ ಎಂದು ದೇವಾಲಯದ ಅರ್ಚಕ ನಾರಾಯಣ್‌ ಭಟ್ಟ ತಿಳಿಸಿದರು. ರಥದಲ್ಲಿ ಪೂಜೆ ಹರಕೆ ಹೊತ್ತವರಿಗೆ ಪ್ರಸಾದ ನೀಡಿದ ರಥೋತ್ಸವ ಪ್ರಾರಂಭವಾಗುತ್ತದೆ. ರಥೋತ್ಸವದ ದಿನ ಗ್ರಹಣ ಇರುವುದರಿಂದ ಆ ದಿನ ಮಧ್ಯಾಹ್ನ 1 ಗಂಟೆಯಿಂದ 6 ಗಂಟೆಯವರೆಗೆ ದೇವಾಲಯ ತೆರೆದಿರುವುದಿಲ್ಲ. ಕಂದಾಯ ಇಲಾಖೆ ಹಾಗೂ ಮುಜರಾಯಿ ಇಲಾಖೆಯಿಂದ ಪ್ರಸಾದ ವಿತರಣೆ ಕಾರ್ಯಕ್ರಮ ಇರುತ್ತದೆ. ಭಕ್ತರು ರಥೋತ್ಸವ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.