
ಹೊಳೆನರಸೀಪುರ: ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ಲಕ್ಷ್ಮೀ ನರಸಿಂಹಸ್ವಾಮಿ ರಥಕ್ಕೆ ಬಟ್ಟೆ ಹಾಕುವ ವಿಷಯದಲ್ಲಿ ಶಾಸಕ, ಸಂಸದರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ತಾಲ್ಲೂಕು ಆಡಳಿತಕ್ಕೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಸಂಜೆಯ ವೇಳೆಗೆ ಹೂವಿನ ಅಲಂಕಾರದಲ್ಲಿಯೇ ರಥೋತ್ಸವ ನಡೆಸಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
ಸೋಮವಾರ ಮತ್ತೆ ರಥಕ್ಕೆ ಒಗೆದು ಹಾಕಿದ್ದ ಬಟ್ಟೆಯನ್ನು ಬಿಚ್ಚಿಸಲಾಗಿತ್ತು. ಶಾಸಕ ರೇವಣ್ಣ ಬೆಳಿಗ್ಗೆ ರಥದ ಬಳಿಗೆ ಬರುತ್ತಿದ್ದಂತೆ ರಥಕ್ಕೆ ಮತ್ತೆ ಹಳೆ ಬಟ್ಟೆ ಹಾಕಿದರು. ಈ ವೇಳೆ ಅಧಿಕಾರಿಗಳು ಹಾಗೂ ಶಾಸಕ ರೇವಣ್ಣ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಸಭೆಯ ನಿರ್ಣಯದಂತೆ ಮಾಡುವುದನ್ನು ಬಿಟ್ಟು, ನಿಮಗೆ ತೋಚಿದಂತೆ ಮಾಡುವುದು ಸರಿಯಲ್ಲ. ಶಾಸಕರಿಗೆ ಬೆಲೆ ಇಲ್ಲವೇ ಎಂದು ರೇವಣ್ಣ ಪ್ರಶ್ನಿಸಿದರು.
‘ಜಿಲ್ಲಾಧಿಕಾರಿ ಹಳೆಯ ಹಾಗೂ ಹೊಸ ಬಟ್ಟೆ ಬೇಡ. ಹೂವಿನ ಅಲಂಕಾರ ಮಾಡಲು ಹೇಳಿದ್ದರೂ ಹಳೆ ಬಟ್ಟೆ ಏಕೆ ಹಾಕಿದರು’ ಎಂದು ಸಂಸದ ಶ್ರೇಯಸ್ ಪಟೇಲ್ ರಥದ ಬಳಿಗೆ ಬಂದರು. ಹಳೆ ಬಟ್ಟೆ ಬಿಚ್ಚಿಸಿ ಎಂದು ಅವರ ಬೆಂಬಲಿಗರು ಒತ್ತಾಯಿಸಿದರು.
‘ಜಿಲ್ಲಾಧಿಕಾರಿ ಆದೇಶದಂತೆ ಹೂವಿನ ಅಲಂಕಾರಿ ಮಾಡಿ’ ಎಂದು ಸಂಸದ ಶ್ರೇಯಸ್ ಸೂಚಿಸಿದರು. ‘ನೀವು ಒಮ್ಮತದ ನಿರ್ಣಯಕ್ಕೆ ಬಂದು ರಥೋತ್ಸವಕ್ಕೆ ಸಹಕಾರ ನೀಡಿದರೆ ರಥೋತ್ಸವ ನಡೆಸಲು ಅವಕಾಶ ನೀಡುತ್ತೇವೆ. ಇಲ್ಲ ಎಂದಾದರೆ ರಥೋತ್ಸವ ನಡೆಸಲು ಬಿಡುವುದಿಲ್ಲ’ ಎಂದು ಜಗದೀಶ್ ಗಂಗಣ್ಣವರ್ ಹೇಳಿದರು.
‘ನೀವು ರಥೋತ್ಸವ ನಿಲ್ಲಿಸಲು ಆದೇಶ ನೀಡಿದರೆ, ಅದಕ್ಕೆ ಹಳೆ ಬಟ್ಟೆ ಹಾಕಿ ಎಂದು ಪಟ್ಟು ಹಿಡಿದವರೇ ಕಾರಣರಾಗುತ್ತಾರೆ. ನಾನಂತೂ ರಥೋತ್ಸವ ನಡೆಸಲು ಉತ್ಸುಕನಾಗಿದ್ದೇನೆ’ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ರಥದ ಸುತ್ತ ಬಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಡಿವೈಎಸ್ಪಿಗಳಾದ ಶ್ರೀನಿಧಿ, ಎಂ.ಎಚ್. ಖಾನ್, ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್, ನಗರಠಾಣೆ ಸಬ್ ಇನ್‌ಸ್ಪೆಕ್ಟರ್ ಅಭಿಜಿತ್, ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಇದ್ದರು.
ರಥೋತ್ಸವ ಆಚರಣೆಯ ಪೂರ್ವಭಾವಿಯಾಗಿ ನಡೆದ ಮೊದಲ ದಿನದ ಸಭೆಯಲ್ಲಿ ಕೆಲವರು ‘ರಥಕ್ಕೆ ದಾನಿಗಳು ಹಣ ನೀಡುತ್ತಾರೆ. ನೀವು ಹೊಸ ಬಟ್ಟೆ ಹಾಕುತ್ತೀರಾ’ ಎಂದು ಕೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ರೇವಣ್ಣ ‘ಹಣ ಕೊಡುವವರು ಕೊಡಲಿ. ಅದನ್ನು ತಾಲ್ಲೂಕು ಆಡಳಿತ ರಥೋತ್ಸವಕ್ಕೆ ಬಳಸಿಕೊಳ್ಳುತ್ತದೆ. ಈ ಬಾರಿ ಗ್ರಹಣದ ಪ್ರಯುಕ್ತ ಹೊಸಬಟ್ಟೆ ಬೇಡ’ ಎಂದಿದ್ದರು. ನಿರ್ಣಯ ಆದ ಮೇಲೆ ತಹಶೀಲ್ದಾರ್ ತೇರಿಗೆ ಹೊಸಬಟ್ಟೆ ಹೊಲಿಸಲು ಬಟ್ಟೆ ತರಿಸಿ ದೇವಾಲಯದ ಆವರಣದಲ್ಲಿ ಹೊಲಿಯಲು ಕಳುಹಿಸಿದ್ದರು. ‘ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಏಕೆ ಬಟ್ಟೆ ಹೊಲೆಯಲು ಬಂದಿದ್ದೀರಿ’ ಎಂದು ಕೆಲವರು ಗಲಾಟೆ ಮಾಡಿ ಕಳುಹಿಸಿದ್ದರು.
ಸಂಜೆಯ ವೇಳೆಗೆ ಪರಿಸ್ಥಿತಿ ತಿಳಿಯಾಗಲಿಲ್ಲ. ಕೊನೆಗೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮಧ್ಯೆ ರಥಕ್ಕೆ ಹಾಕಿದ್ದ ಹಳೆಯ ಬಟ್ಟೆಯನ್ನು ತೆಗೆಸಿದರು. ನಂತರ ಹೂವಿನ ಅಲಂಕಾರ ಮಾಡಿದರು. ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ರಥೋತ್ಸವ ಮಂಗಳವಾರ ಹೂವಿನ ಅಲಂಕಾರದೊಂದಿಗೆ ನಡೆಯುವುದು ಬಹುತೇಕ ಖಚಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.