ಕ್ರೀಡಾಂಗಣದೊಳಗಿನ ವುಡನ್ ಕೋರ್ಟ್ ಸಿದ್ಧವಾಗಿದ್ದು, ಸಣ್ಣ ಪುಟ್ಟ ಕೆಲಸ ಬಾಕಿ ಇವೆ
ಹೊಳೆನರಸೀಪುರ: ಪಟ್ಟಣದ ಕ್ರೀಡಾಪಟುಗಳಿಗೆ ಆಸರೆ ಯಾಗಬೇಕಿದ್ದ ಇಲ್ಲಿನ ಒಳಾಂಗಣ ಕ್ರೀಡಾಂಗಣ, ಇನ್ನೂ ಪೂರ್ಣ ವಾಗುತ್ತಿಲ್ಲ. ಕ್ರೀಡೆಗಳಿಗೆ ವೇದಿಕೆಯಾಗಬೇಕಿದ್ದ ಈ ಒಳಾಂಗಣ ಕ್ರೀಡಾಂಗಣ ಕೇವಲ ಅರ್ಧಂಬರ್ಧ ಕಟ್ಟಡವಾಗಿ ನಿಂತಿದೆ.
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಕ್ರೀಡಾಪ್ರೇಮಿಗಳಿಗೆ ಸೌಲಭ್ಯ ಒದಗಿಸಲು ಅಂದು ಲೋಕೋಪಯೋಗಿ ಸಚಿವರಾಗಿದ್ದ ಈಗಿನ ಶಾಸಕ ಎಚ್.ಡಿ. ರೇವಣ್ಣ ಅವರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅನುದಾನದಲ್ಲಿ ₹8.5 ಕೋಟಿ ವೆಚ್ಚದಲ್ಲಿ ಈಜುಕೊಳ, 4 ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್, ಒಂದು ಬ್ಯಾಸ್ಕೆಟ್‌ಬಾಲ್ ಕೋರ್ಟ್ ಹೊಂದಿರುವ ಒಳಾಂಗಣ ಕ್ರೀಡಾಂಗಣದ ಆರಂಭಿಸಿದ್ದರು. ಈ ಕಾಮಗಾರಿ 3 ವರ್ಷಗಳಿಂದ ನಿಂತು ಹೋಗಿದ್ದು, ಇದುವರೆವಿಗೂ ವೆಚ್ಚವಾಗಿರುವ ₹4.5 ಕೋಟಿ ವ್ಯರ್ಥವಾಗಿದೆ.
2017ರಲ್ಲಿ ಸಚಿವರಾಗಿದ್ದ ಶಾಸಕ ಎಚ್.ಡಿ. ರೇವಣ್ಣ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. 2017ರಲ್ಲಿ ಪ್ರಾರಂಭವಾದ ಕಾಮಗಾರಿ ಬಹುತೇಕ ಪೂರ್ಣವಾಗಿದೆ.
‘ಈಜುಕೊಳಕ್ಕೆ ನೀರಿನ ಟ್ಯಾಂಕ್ ಅಳವಡಿಕೆ, ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಬ್ಯಾಡ್ಮಿಂಟನ್‌ಗೆ ವುಡನ್ ಕೋರ್ಟ್ ನಿರ್ಮಾಣ, ವಿದ್ಯುತ್ ಪರಿವರ್ತಕ ಅಳವಡಿಕೆ, ಜನರೇಟರ್ ಕೊಠಡಿ, ನಿರ್ವಹಣಾ ಕೊಠಡಿ ಹಾಗೂ ದಾಸ್ತಾನು ಸಂಗ್ರಹ ಕೊಠಡಿ ನಿರ್ಮಾಣ ಆಗಬೇಕಿದೆ. ಇದಕ್ಕೆ ₹3.5 ಕೋಟಿ ಅವಶ್ಯಕತೆ ಇದೆ’ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಬಹುತೇಕ ಕಾಮಗಾರಿ 2021 ಕ್ಕೆ ಮುಕ್ತಾಯವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಕ್ರೀಡಾಂಗಣಕ್ಕೆ ಅಳವಡಿಸಿದ್ದ ಅಲ್ಯುಮಿನಿಯಂ ಕಿಟಕಿಗಳು, ಇನ್ನಿತರ ಕೆಲವು ವಸ್ತುಗಳು ಕಳವಾಗಿವೆ. ಇನ್ನು ಕೆಲವು ದಿನ ಇದು ಹೀಗೆ ಇದ್ದರೆ ಮತ್ತಷ್ಟು ಸಲಕರಣೆಗಳು ಕಳ್ಳರ ಪಾಲಾಗುತ್ತವೆ. ಎಲ್ಲವೂ ಹಾಳಾಗುವ ಮುನ್ನ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಿ, ಕ್ರೀಡಾಪ್ರೇಮಿಗಳ ಉಪಯೋಗಕ್ಕೆ ನೀಡಿದರೆ ಸಾರ್ವಜನಿಕರು ತೆರಿಗೆ ಕಟ್ಟಿದಕ್ಕೂ ಸಾರ್ಥಕ ಎನ್ನುತ್ತಾರೆ ಕ್ರೀಡಾಪಟುಗಳು.
ಇನ್ನೂ ₹3.5 ಕೋಟಿ ಅನುದಾನ ಅಗತ್ಯವಿದ್ದು, ಸದನದಲ್ಲಿ ಅನೇಕ ಬಾರಿ ಪ್ರಶ್ನಿಸಿದ್ದೇನೆ. ಹತ್ತಾರು ಪತ್ರ ಬರೆದಿದ್ದೇನೆ. ಸರ್ಕಾರ ಉಳಿಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ಉಳಿಕೆ ಹಣ ಬಿಡುಗಡೆ ಮಾಡಿಸಿ, ನಮ್ಮೂರಿನ ಹೆಮ್ಮೆಯ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಳಿಸಲು ಪತ್ರ ವ್ಯವಹಾರ ನೆಡೆಸಿದ್ದೇನೆ ಎಂದು ಹೇಳಿದ್ದಾರೆ.
ಈಜುಕೊಳದ ಕಾಮಗಾರಿ ಶೇ 70 ರಷ್ಟು ಮುಕ್ತಾಯವಾಗಿದ್ದು, ಇನ್ನುಳಿದ ಕೆಲಸಗಳು ಬಾಕಿ ಉಳಿದಿವೆ
ಈ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪ್ರಾರಂಭವಾದಾಗ, ಸಂತಸ ಪಟ್ಟಿದ್ದೆವು. ಆದರೆ ಕಾಮಗಾರಿ 3 ವರ್ಷದಿಂದ ನಿಂತು ಹೋಗಿದ್ದು, ನಿರಾಸೆ ಉಂಟಾಗಿದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕುನರೇಂದ್ರಬಾಬು, ಕ್ರೀಡಾಪಟು
ಸದ್ಯ ಸೋಷಿಯಲ್ ಕ್ಲಬ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದೇವೆ. ಹೇಮಾವತಿ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಿದರೆ ಅನುಕೂಲಎಚ್.ಆರ್. ಅರ್ಜುನ್, ರಾಜ್ಯಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಆಟಗಾರ
ಬಾಕಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಣ ಬಿಡುಗಡೆ ಆಗುವ ನಿರೀಕ್ಷೆ ಇದ್ದು, ಒಳಾಂಗಣ ಕ್ರೀಡಾಂಗಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆವಿನೂತನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.