
ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ 125 ರ ಸಂಭ್ರಮ. ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕರು ಫೆ. 19 ರಂದು ನಡೆಯುವ ಸಂಭ್ರಮಾಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ಎಂದು 1899 ರಲ್ಲಿ ಪ್ರಾರಂಭವಾದ ಈ ಶಾಲೆ, 1942 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪದೋನ್ನತಿ ಹೊಂದಿತು. ಈ ಶಾಲೆ ಪ್ರಾರಂಭ ಆದ ದಿನದಿಂದ ಇಂದಿನವರೆಗೂ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಒಳಗೊಂಡಂತೆ, 1 ರಿಂದ ತರಗತಿಯಿಂದ 7 ನೇ ತರಗತಿವರೆಗೆ 200 ವಿದ್ಯಾರ್ಥಿಗಳು ಸೇರಿದ್ದಾರೆ. ಶಿಕ್ಷಣದ ಗುಣಮಟ್ಟದಿಂದ ಈ ಶಾಲೆ 2024–25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪಿಎಂಶ್ರೀ ಯೋಜನೆ ಪಡೆಯಿತು. ಇದರಿಂದಾಗಿ ಶಾಲೆಯಲ್ಲಿ ಕರಾಟೆ, ಯೋಗ, ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ.
ಮಕ್ಕಳ ಹಾಗೂ ಶಾಲೆಯ ಭದ್ರತೆಯ ದೃಷ್ಟಿಯಿಂದ ಅಗತ್ಯಕ್ಕೆ ತಕ್ಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಶಾಲೆಯ ಸುತ್ತ ಗಿಡಗಳನ್ನು ಬೆಳೆಸಿದ್ದು, ವಾತಾವರಣವನ್ನು ತಂಪಾಗಿಸಿದ್ದಾರೆ. ಶಾಲೆಗೆ ವಿಶಾಲವಾದ ಜಾಗ ಇದ್ದು, ಮಕ್ಕಳ ಕ್ರೀಡೆಗೆ ಸಹಕಾರಿಯಾಗಿದೆ. ಇಲ್ಲಿ ದೊಡ್ಡ ಆಟದ ಮೈದಾನ ಇರುವುದರಿಂದ ಹಳ್ಳಿ ಶಾಲೆಯ ಮಕ್ಕಳು ಲಗೋರಿ, ಸೂರಚೆಂಡ್, ಜೂಟಾಟಗಳನ್ನು ಆಡುತ್ತಾರೆ. ಶಾಲೆಯ ಅಭಿವೃದ್ದಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆಯ ಹಾಗೂ ಇಂದಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.
ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಿ.ಪಿ. ದೇವರಾಜ್, ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಎಚ್. ರವಿಕುಮಾರ್, ಮೈಸೂರಿನ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್, ಸೇರಿದಂತೆ ಇಲ್ಲಿ ಓದಿಸಿದ ಅನೇಕರು, ಅತ್ಯುನ್ನತ ಸ್ಥಾನದಲ್ಲಿದ್ದಾರೆ.
ಫೆ.19ರಂದು ಕಾರ್ಯಕ್ರಮ
ಹಳ್ಳಿಮೈಸೂರು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 125ರ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಫೆ.19 ರಂದು ಬೆಳಿಗ್ಗೆ 10.30 ರಿಂದ ರಾತ್ರಿ 10 ಗಂಟೆಯವರೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ. ಶಾಸಕ ಎ.ಮಂಜು ಅಧ್ಯಕ್ಷತೆ ವಹಿಸಲಿದ್ದು ಶಾಸಕ ಎಚ್.ಡಿ. ರೇವಣ್ಣ ಉಪಸ್ಥಿತಿಯಲ್ಲಿ ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ರವಿಕುಮಾರ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಭಾಗವಹಿಸಲಿದ್ದಾರೆ.
ನಮ್ಮ ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸಂಭ್ರಮಾಚರಣೆಗೆ ಆಹ್ವಾನಿಸಿದ್ದು ಅನೇಕರು ಬರುವ ನಿರೀಕ್ಷೆ ಇದೆ.ಎಚ್.ಎಂ. ನಟೇಶ್, ಸಿಆರ್‌ಪಿ
ನಮ್ಮ ಶಾಲೆಯಲ್ಲಿ ಶಿಕ್ಷಕರು ಸಹಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಮಿತ್ರದೇವಿ, ಮುಖ್ಯಶಿಕ್ಷಕಿ
ನಮ್ಮ ಶಾಲೆ ಕುಟುಂಬದಂತಿದೆ. ಜನರ ಸಹಕಾರ ಎಸ್‌ಡಿಎಂಸಿ ಸದಸ್ಯರ ಪೋಷಕರ ಸಹಕಾರದಿಂದ ಶಾಲೆ 125 ನೇ ಸಂಭ್ರಮದಲ್ಲಿದೆ.ಶೈಲಜಾ, ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.