ADVERTISEMENT

ಹಾಸನ | ವಸತಿ ಯೋಜನೆಯಲ್ಲಿ ಅಕ್ರಮ: ₹2 ಕೋಟಿಗೂ ಅಧಿಕ ಹಣ ಅನರ್ಹರಿಗೆ

ಮೂವರು ಆರೋಪಿಗಳ ಬಂಧನ

ಚಿದಂಬರಪ್ರಸಾದ್
Published 19 ಸೆಪ್ಟೆಂಬರ್ 2025, 23:43 IST
Last Updated 19 ಸೆಪ್ಟೆಂಬರ್ 2025, 23:43 IST
<div class="paragraphs"><p>ಹಣ </p></div>

ಹಣ

   

ಹಾಸನ: ಜಿಲ್ಲೆಯಲ್ಲಿ ವಸತಿ ಯೋಜನೆಯ 190 ಫಲಾನುಭವಿಗಳಿಗೆ ತಲುಪಬೇಕಿದ್ದ ಅನುದಾನದ ಮೊತ್ತ ಅನರ್ಹರ ಖಾತೆಗೆ ಜಮೆಯಾಗಿದೆ. ನೈಜ ಫಲಾನುಭವಿಗಳು ತಾಲ್ಲೂಕು ಪಂಚಾಯಿತಿಯಲ್ಲಿ ದೂರು ದಾಖಲಿಸಿದ ಬಳಿಕ ‘ಅಕ್ರಮ’ ಬೆಳಕಿಗೆ ಬಂದಿದೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆಯ ₹2 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪದ ಅಡಿ, ಜಿಲ್ಲಾ ಪ್ರಭಾರ ನೋಡಲ್ ಅಧಿಕಾರಿ ರಾಜೇಶ್ ಎಂ, ಹಾಸನ ತಾಲ್ಲೂಕಿನ ಅಂಕಪುರ ಗ್ರಾಮ ಪಂಚಾಯಿತಿ ಸದಸ್ಯ ರಾಮೇಗೌಡ, ಗ್ರೇಡ್‌ –1 ಕಾರ್ಯದರ್ಶಿ ಬ್ಯಾಟರಾಯಿಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಈ ಮೂವರೂ ಶಾಮೀಲಾಗಿ, ಸಕಲೇಶಪುರ ತಾಲ್ಲೂಕಿನ ವಿವಿಧ ಫಲಾನುಭವಿಗಳಿಗೆ ಸೇರಬೇಕಾಗಿದ್ದ ಹಣವನ್ನು, ಹಾಸನ ತಾಲ್ಲೂಕಿನ ಅಂಕಪುರ ಪಂಚಾಯಿತಿ ವ್ಯಾಪ್ತಿಯ ಅನರ್ಹರ ಖಾತೆಗೆ ಜಮೆ ಆಗುವಂತೆ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ. 

ಸಕಲೇಶಪುರ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ದೂರು ನೀಡಿದ್ದರು.

ನಿಯಮ ಏನು?: ಫಲಾನುಭವಿಗಳ ಮನೆ ನಿರ್ಮಾಣದ ಪ್ರಗತಿಯ ಬಗ್ಗೆ ಪಿಡಿಒಗಳು ಫೋಟೊ ತೆಗೆದು ನೋಡಲ್ ಅಧಿಕಾರಿಗೆ ಕಳುಹಿಸಬೇಕು. ಅದನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ (ಇಒ) ಗಮನಕ್ಕೆ ತರಬೇಕು. ಇಒ ಅವರು ವೆಬ್‌ಸೈಟ್‌ನಲ್ಲಿ ಮಾಹಿತಿ ದಾಖಲಿಸಬೇಕು. ನಂತರ ಜಿಲ್ಲಾ ಪಂಚಾಯಿತಿಗೆ ಕಳುಹಿಸಲಾಗುತ್ತದೆ. 

ಸಕಲೇಶಪುರ ನೋಡಲ್‌ ಅಧಿಕಾರಿಯಾಗಿದ್ದ ರಾಜೇಶ್‌, 2022ರ ಜುಲೈನಿಂದ ಜಿಲ್ಲಾ ನೋಡಲ್‌ ಅಧಿಕಾರಿಯಾಗಿ ಹೆಚ್ಚುವರಿ ಪ್ರಭಾರದಲ್ಲಿ ಇದ್ದರು. 2025ರ ಫೆ.2 ರಂದು ತಾಲ್ಲೂಕು ಪಂಚಾಯಿತಿ ಇಒಗೆ ಹೊಸ ಲಾಗಿನ್‌ ಸೃಷ್ಟಿಸಿ, ಅದರಲ್ಲಿ ತಮ್ಮದೇ ಮೊಬೈಲ್‌ ಫೋನ್‌ ಸಂಖ್ಯೆ ಹಾಕಿದ್ದರು. ಯಾವುದೇ ಮಾಹಿತಿ ದೊರೆಯಬಾರದೆಂದು, ಲಾಗಿನ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಿರಲಿಲ್ಲ. ತಮ್ಮದೇ ಮೊಬೈಲ್ ಸಂಖ್ಯೆ ದಾಖಲಿಸಿದ್ದರಿಂದ ಅವ್ಯವಹಾರ ಆಗಿರುವುದು ಇ.ಒ ಮತ್ತು ಜಿಪಂ ಸಿಇಒ ಅವರ ಗಮನಕ್ಕೂ ಬಂದಿರಲಿಲ್ಲ. 

ಬೆಳಕಿಗೆ ಬಂದಿದ್ದು ಹೇಗೆ?: ನೈಜ ಫಲಾನುಭವಿಗಳ ದೂರು ಆಧರಿಸಿ ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ, ಸಕಲೇಶಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿ, ಫಲಾನುಭವಿ ಹೆಸರು, ಗ್ರಾಮ, ಫಲಾನುಭವಿ ಸಂಖ್ಯೆ, ಮಂಜೂರಾತಿ ಸಂಖ್ಯೆಗಳಷ್ಟೇ ನಮೂದಾಗಿದ್ದವು. ಜೊತೆಗೆ, ಹಾಸನ ತಾಲ್ಲೂಕಿನ ಜನರ ಬ್ಯಾಂಕ್‌ ಖಾತೆ ಹಾಗೂ ಐಎಫ್‌ಎಸ್‌ಸಿ ಕೋಡ್‌ಗಳನ್ನು ನಮೂದಿಸಿದ್ದು ಕಂಡು ಬಂತು. ನಂತರ, ಕೂಲಂಕಷ ತನಿಖೆ ನಡೆಸಿದಾಗ, ಹಣ ನೈಜ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂಬುದು ಖಚಿತಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.