ಹಳೇಬೀಡು: ಜಲಜೀವನ್ ಮಿಷನ್ ಅಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಶುದ್ದ ಕುಡಿಯುವ ನೀರಿನ ಯೋಜನೆಯಡಿ ಇಲ್ಲಿನ ಹೊಯ್ಸಳ ಬಡಾವಣೆಯ ಹಲವು ಬೀದಿಗಳಲ್ಲಿ ಅಳವಡಿಸಿರುವ ನಳಗಳು ಮುರಿದು ಬಿದ್ದಿವೆ. ಕಾಮಗಾರಿ ಪೂರ್ಣ ಮುಗಿಯುವ ಮೊದಲೇ ನಳಗಳು ಮಲಗುವ ಸ್ಥಿತಿಗೆ ತಲುಪಿದೆ. ಹೀಗಾಗಿ ಮನೆ ನಲ್ಲಿಗಳಿಗೆ ನೀರು ಪೂರೈಕೆ ಆಗುತ್ತದೆಯೇ ಎಂಬ ಅನುಮಾನದ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
‘ಕಾಂಕ್ರೀಟ್ ಕಂಬ ನಿಲ್ಲಿಸಿ, ನಳಗಳನ್ನು ಮನೆಗಳ ಮುಂದೆ ಅಳವಡಿಸಲಾಗಿದೆ. ಮೋಟುದ್ದದ ಕಂಬಗಳನ್ನು ಆಳವಾಗಿ ಹೂಳದೇ ನಳ ಅಳವಡಿಸಿದ್ದಾರೆ. ಹೀಗಾಗಿ ನಳಕ್ಕೆ ನಾಯಿ ಮೈ ಉಜ್ಜಿದರೂ ಬುಡ ಸಮೇತ ಬಿದ್ದು ಹೋಗುತ್ತಿವೆ. ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಹಸು ಮೈ ಉಜ್ಜಿದಾದ ನಲ್ಲಿ ಮುರಿದು ಬಿದ್ದಿದೆ. ದುರಸ್ತಿ ಮಾಡಲು ಯಾರೂ ಬರುತ್ತಿಲ್ಲ’ ಎಂದು ಹೊಯ್ಸಳ ಬಡಾವಣೆ ನಾಗರಿಕರು ದೂರಿದ್ದಾರೆ.
‘ಹಳೇಬೀಡಿನಲ್ಲಿ 10ಕ್ಕೂ ಹೆಚ್ಚು ಕಡೆ ಜೆಜೆಎಂ ನಳಗಳು ಮುರಿದು ಬಿದ್ದಿವೆ. ಕಾಲಕ್ರಮೇಣ ನೂರಾರು ನಳಗಳು ನೆಲಕ್ಕುರುಳುವ ಸಾಧ್ಯತೆ ಇದೆ. ಕೆ.ಮಲ್ಲಾಪುರ ಗ್ರಾಮದಲ್ಲಿಯೂ ಜೆಜೆಎಂ ಕಾಮಗಾರಿ ಗುಣಮಟ್ಟ ಇಲ್ಲ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಎಂಜಿನಿಯರ್, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀತಾರಾಮು ದೂರಿದರು.
ಪೈಪ್ ಲೈನ್ ಆಳವಾಗಿ ಹೂಳಿಲ್ಲ. ದೊಡ್ಡ ವಾಹನಗಳು ರಸ್ತೆ ಬದಿಯಲ್ಲಿ ಸಂಚರಿಸಿದರೆ ಪೈಪ್ ಲೈನ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ರಸ್ತೆಯನ್ನು ಬಗೆದು ಪೈಪ್‌ಲೈನ್ ಕೆಲಸ ನಿರ್ವಹಿಸಿರುವುದರಿಂದ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳಿಗೂ ಹಾನಿಯಾಗಿದೆ. ಕಾಮಗಾರಿ ಕೈಗೊಂಡವರು ತಕ್ಷಣ ರಸ್ತೆ ದುರಸ್ತಿ ಮಾಡಬೇಕು ಎಂಬ ನಿಯಮ ಜಾರಿಗೆ ತರಬೇಕಾಗಿತ್ತು. ಜೆಜೆಎಂ, ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯಿತಿ ಹೀಗೆ ರಸ್ತೆ ದುರಸ್ತಿ ಮಾಡಿಸುವಂತೆ ಯಾರನ್ನು ಕೇಳಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದು ಹೇಳಿದರು.
ವಾಹನ ಗುದ್ದಿಸಿದಾಗ ಇಲ್ಲವೇ ಚರಂಡಿ ನಿರ್ಮಾಣ ಮಾಡಿದಾಗ ನಳಗಳು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸಮಸ್ಯೆ ಇರುವ ಕಡೆ ಬಗೆಹರಿಸುತ್ತೇವೆಅನ್ವರ್ ಪಾಷಾ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್
ಸಿದ್ದಾಪುರ ಗ್ರಾಮದಲ್ಲಿ ಸಾಕಷ್ಟು ಮನೆಗಳಿಗೆ ನಲ್ಲಿ ಅಳವಡಿಸಿಲ್ಲ. ಗ್ರಾಮ ಪಂಚಾಯಿತಿಗೆ ತಿಳಿಸಿದರೂ ನಲ್ಲಿ ಅಳವಡಿಸುವ ಪೈಪ್ ಲೈನ್ ಕೆಲಸ ಸಮರ್ಪಕವಾಗಿಲ್ಲ ಎಂದು ದೂರು ಬಂದರೂ ಗುತ್ತಿಗೆದಾರರು ಸರಿಪಡಿಸಿಲ್ಲಜಿ.ಎನ್.ರಾಜಶೇಖರ್ ಸಾರಿಗೆ ಸಂಸ್ಥೆ ನಿವೃತ್ತ ಟ್ರಾಫಿಕ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.