ಹಾಸನ: ‘ಮಂಡ್ಯದಿಂದ ಮಗ, ಹಾಸನದಿಂದ ಮೊಮ್ಮಗ, ಬೆಂಗಳೂರು ಗ್ರಾಮಾಂತರದಿಂದ ಅಳಿಯನನ್ನು ಕಣಕ್ಕೆ ಇಳಿಸಿದ್ದಾರೆ. ಬೇರೆ ಯಾರೂ ಇರಲಿಲ್ಲವೇ’ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಚ್.ಡಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಸೋಮವಾರ ನಡೆದ ರ‍್ಯಾಲಿಯಲ್ಲಿ ಮಾತನಾಡಿ, ‘ಜೆಡಿಎಸ್ ಶಕ್ತಿ ಕಳೆದುಕೊಂಡಿದೆ. ಶಕ್ತಿ ಇದ್ದಿದ್ದರೆ, ಅಳಿಯನನ್ನು ಬಿಜೆಪಿಯಿಂದ ಏಕೆ ನಿಲ್ಲಿಸುತ್ತಿದ್ದರು’ ಎಂದು ಪ್ರಶ್ನಿಸಿದರು.
‘ಅಧಿಕಾರದಿಂದ ಕೆಳಗಿಳಿಸಿದವರೊಂದಿಗೇ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ನಾನು, ಜಿ.ಟಿ. ದೇವೇಗೌಡ, ಶಿವಲಿಂಗೇಗೌಡರು ಮೈತ್ರಿ ಸರ್ಕಾರ ಉಳಿಸಲು ಬಾಂಬೆಗೆ ಹೋಗಿದ್ವಿ. ಸರ್ಕಾರವನ್ನು ಬೀಳಿಸಿದ್ದು ನಾವೇ ಎಂದು ಕುಮಾರಸ್ವಾಮಿ ಈಗ ಹೇಳುತ್ತಿದ್ದಾರೆ. ಈ ಹಾಸನಾಂಬೆ ಮೇಲೆ ಸತ್ಯ ಮಾಡಿ ಕುಮಾರಸ್ವಾಮಿ ಹೇಳಲಿ. ನಾನು ಹಾಸನಾಂಬೆ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾವು ತಾಯಿಗೆ ದ್ರೋಹ ಮಾಡುವ ಮಕ್ಕಳಲ್ಲ. ಹೋರಾಟ ಮಾಡುವ ಮಕ್ಕಳು’ ಎಂದು ತಿರುಗೇಟು ನೀಡಿದರು.
‘ಜೆಡಿಎಸ್‌ನಿಂದ ಮೂವರು, ಬಿಜೆಪಿಯಿಂದ ಒಬ್ಬರು ಸೇರಿ, ಕಣಕ್ಕಿಳಿದಿರುವ ನಾಲ್ವರಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಇವರು ನನ್ನನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತಾರೆಯೇ? ಪ್ರೀತಂಗೌಡರೇ (ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ), ಚುನಾವಣೆ ಕಳೆದ ಮೇಲೆ ನಿಮ್ಮನ್ನು ಸಮಾಧಿ ಮಾಡಿಬಿಡುತ್ತಾರೆ. ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ. ಸುರೇಶ್ ನಿಮ್ಮನ್ನು ಬಿಡುವುದಿಲ್ಲ. ಕಡೂರಿನ ಮಾಜಿ ಶಾಸಕ, ಬಿಜೆಪಿಯ ಬೆಳ್ಳಿ ಪ್ರಕಾಶ್ ಅವರ ಬಳಿ ಚುನಾವಣೆ ಮುಗಿದ ಮೇಲೆ ಬೆಳ್ಳಿನೂ ಇರಲ್ಲ, ಚಿನ್ನಾನೂ ಇರಲ್ಲ’ ಎಂದು ಎಚ್ಚರಿಕೆ ನೀಡಿದರು.
‘2013ರಲ್ಲಿ ನಡೆದ ಉಪ ಚುನಾವಣೆಯಲ್ಲಿ ನನ್ನ ತಮ್ಮ ಡಿ.ಕೆ. ಸುರೇಶ್‌ಗೆ ಟಿಕೆಟ್ ಕೊಟ್ಟರು. ಬಿಜೆಪಿ– ಜನತಾದಳ ಒಂದಾಗಿ ಅನಿತಾ ಕುಮಾರಸ್ವಾಮಿಯವರನ್ನು ನಿಲ್ಲಿಸಿದರು. ಡಿ.ಕೆ. ಸುರೇಶ್ ಒಂದು ಲಕ್ಷ ಮತಗಳಿಂದ ಗೆದ್ದರು. ನಮಗೆ ರಾಜಕೀಯ ಹೊಸದೇನಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.