ADVERTISEMENT

ಆಹಾರ ಕ್ರಮದಿಂದ ಮಕ್ಕಳ ಮೇಲೆ ಪರಿಣಾಮ

ರಕ್ತಹೀನತೆ ತಪಾಸಣೆ ಶಿಬಿರದಲ್ಲಿ ಕಲಾವತಿ ಮಧುಸೂದನ್‌

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:28 IST
Last Updated 12 ಡಿಸೆಂಬರ್ 2025, 2:28 IST
ಹಾಸನದ ಕುವೆಂಪು ನಗರದ ಕೃಷ್ಣ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ಹಾಸನದ ಕುವೆಂಪು ನಗರದ ಕೃಷ್ಣ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು   

ಹಾಸನ: ‘ಇಂದಿನ ಆಹಾರ ಕ್ರಮ ನೇರವಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಫೆವಾರ್ಡ ಹಾಸನ ಅಧ್ಯಕ್ಷೆ ಕಲಾವತಿ ಮಧುಸೂದನ ಹೇಳಿದರು. 

ಹಾಸನ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಐಆರ್‌ಡಿ, ವಿಜಯಪುರದ ಸ್ಪಂದನ ಸಂಸ್ಥೆ, ಫೆವಾರ್ಡ ಕರ್ನಾಟಕ ವತಿಯಿಂದ ಆಲೂರಿನ ಹರ್ಷಿತ ಸಂಸ್ಥೆಯ ನೇತೃತ್ವದಲ್ಲಿ ನಗರದ ಕುವೆಂಪು ನಗರ ಕೃಷ್ಣ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ರಕ್ತಹೀನತೆ ತಡೆಗಟ್ಟುವ ಅರಿವು ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

‘ಸ್ವಯಂ ಸೇವಾ ಸಂಸ್ಥೆಗಳು ಸಾಮಾಜಿಕ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಆಹಾರ ಕ್ರಮದ ವ್ಯತ್ಯಾಸದಿಂದ ರಕ್ತ ಹೀನತೆ, ಅಪೌಷ್ಟಿಕತೆ ಉಂಟಾಗಿ ಮಕ್ಕಳು ನಿಶಕ್ತಿಯಿಂದ ಬಳಲುವಂತಾಗಿದೆ. ಕೋಪ, ದುಃಖ, ಖಿನ್ನತೆ, ಭಯ, ಆಲಸ್ಯಗಳಿಗೆ ಒಳಗಾಗಿ ವ್ಯಾಸಂಗದತ್ತ ಗಮನ ಹರಿಸಲು ತೊಡಕಾಗುತ್ತಿದೆ’ ಎಂದರು.

ADVERTISEMENT

‘ನಿತ್ಯ ಸೇವಿಸುವ ರಾಸಾಯನಿಕ ಯುಕ್ತ ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದು, ಸರ್ಕಾರ ಮತ್ತು ಸಂಘ ಸಂಸ್ಥೆಗಳು ರಕ್ತಹೀನತೆ ಮುಕ್ತ ಅಭಿಯಾನದ ಮೂಲಕ ಆರೋಗ್ಯಕರ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ರಕ್ತಹೀನತೆ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಮೂಲಕ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಜಿಲ್ಲೆಯಾದ್ಯಂತ ಕಾರ್ಯಕ್ರಮ ಆಯೋಜಿಲಾಗುತ್ತಿದೆ’ ಎಂದು ತಿಳಿಸಿದರು.

ಶ್ರೀಕಾಂತ ವಿದ್ಯಾ ಸಂಸ್ಥೆ ರಮಾಕಾಂತ್, ಆರೋಗ್ಯದ ಜಾಗೃತಿ ಕುರಿತು ಮಾತನಾಡಿದರು. ಪ್ರಚೋದನ ಸಂಸ್ಥೆಯವರು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ಹಂಚಿಕೊಂಡರು. ಜನ ಪ್ರಯತ್ನ ಸಂಸ್ಥೆ ಜಯರಾಜ್‌ , ಗೌರವಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಆರೋಗ್ಯ ಇಲಾಖೆ ಲತಾ ಮಾತನಾಡಿದರು.

ಶಿಕ್ಷಕ ಮೊಹಿಯುದ್ದೀನ್ ಪಾಷಾ ನಿರೂಪಿಸಿದರು. ಫೆವಾರ್ಡ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ನವೀನ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು. ಸಿಸ್ಟರ್ ಬೀನಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಧಾ, ಶಶಿಕಲಾ, ನಂಜಪ್ಪಶೆಟ್ಟಿ, ಶಾಲಾ ಸಿಬ್ಬಂದಿ ಇದ್ದರು. ಹರ್ಷಿತಾ ಸಂಸ್ಥೆ ಸಿಬ್ಬಂದಿ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ಸಹಕರಿಸಿದರು. ಸ್ಪಂದನ ಸಿರಿ ಕಾರ್ಯದರ್ಶಿ ಗಿರಿಜಾಂಬ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.