
ಹಾಸನ: ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯಕ್ಕೂ ಯಾವುದೇ ಹಾನಿಯಿಲ್ಲ. ಬದಲಾಗಿ ಅದು ಮತ್ತೊಂದು ಅಮೂಲ್ಯ ಜೀವ ಉಳಿಸುವ ಮಹತ್ತರ ಸೇವೆಯಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕಿ ಡಾ. ರಂಗಲಕ್ಷ್ಮಿ ಆರ್.ಎನ್. ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ನಿಸರ್ಗ ಕಾಲೇಜು ಆಫ್ ನರ್ಸಿಂಗ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತವನ್ನು ಎ, ಬಿ, ಎಬಿ ಮತ್ತು ಒ ಎಂಬ ನಾಲ್ಕು ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ರಕ್ತದಾನಿಗಳಿಂದ ಸುಮಾರು 350 ಮಿ.ಲೀ. ರಕ್ತ ಸಂಗ್ರಹಿಸಲಾಗುತ್ತಿದ್ದು, ಅದನ್ನು ಪ್ಲಾಸ್ಮಾ, ಪ್ಲೇಟ್‌ಲೆಟ್ಸ್ ಹಾಗೂ ರೆಡ್ ಬ್ಲಡ್ ಸೆಲ್‌ಗಳಾಗಿ ವಿಭಜಿಸಿ ಅನೇಕ ರೋಗಿಗಳಿಗೆ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಆಸ್ಟ್ರಿಯಾ ದೇಶದ ವಿಜ್ಞಾನಿ ಕಾರ್ಲ್ ಲ್ಯಾಂಡ್‌ಸ್ಟ್ರೈನರ್ ಅವರು ರಕ್ತದ ಗುಂಪುಗಳ ವೈಜ್ಞಾನಿಕ ವರ್ಗೀಕರಣ ಕಂಡುಹಿಡಿದ ಮಹತ್ವವನ್ನು ವಿವರಿಸಿದರು.
ಆಸ್ಟ್ರೇಲಿಯದ ಜೇಮ್ಸ್ ಹ್ಯಾರಿಸನ್ ಅವರು ತಮ್ಮ ಜೀವಿತಾವಧಿಯಲ್ಲಿ ಸುಮಾರು 1,173 ಬಾರಿ ರಕ್ತದಾನ ಮಾಡಿ ವಿಶ್ವದಲ್ಲೇ ಅತಿ ಹೆಚ್ಚು ರಕ್ತದಾನ ಮಾಡಿದ ವ್ಯಕ್ತಿಯಾಗಿ ದಾಖಲೆ ಬರೆದಿದ್ದಾರೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಉದಯ್‌ಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ರಾಜರತ್ನಂ ಪಿ. ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕೀ-ಚೈನ್‌ಗಳನ್ನು ನೀಡಲಾಯಿತು. ಶಿಬಿರದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಅಮ್ಜದ್ ಖಾನ್, ಗಿರೀಶ್, ಶಬ್ಬೀರ್ ಅಹ್ಮದ್, ಕಾಲೇಜಿನ ಉಪಪ್ರಾಂಶುಪಾಲೆ ರಾಜಲಕ್ಷ್ಮಿ ಜಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.