ADVERTISEMENT

ಹಾಸನ: ಸೋಂಕಿತರಿಗೆ ಸೀಲ್ ಹಾಕಲು ಸೂಚನೆ

ಸಿಸಿ ಕೇಂದ್ರಕ್ಕೆ ಬರಲು ನಿರಾಕರಿಸಿದವರ ಮೇಲೆ ಪ್ರಕರಣ ದಾಖಲಿಸಿ: ಡಿ.ಸಿ ಗಿರೀಶ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 14:39 IST
Last Updated 4 ಜೂನ್ 2021, 14:39 IST
 ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರು ತಹಶೀಲ್ದಾರ್‌ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು.
 ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರು ತಹಶೀಲ್ದಾರ್‌ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು.   

ಹಾಸನ: ಮನೆ ಆರೈಕೆಯಲ್ಲಿ ಇರುವವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೋವಿಡ್ 19 ನಿಯಂತ್ರಣ ಕುರಿತು ತಹಶೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆಸಭೆ ನಡೆಸಿ ಮಾತನಾಡಿದ ಅವರು, ಹೋಂ ಕ್ವಾರಂಟೈನ್‌ನಲ್ಲಿರುವ ಹಾಗೂ ಪ್ರಾಥಮಿಕ ಸೋಂಕಿತರನ್ನು ಗುರುತಿಸಿ ಕಡ್ಡಾಯವಾಗಿ ಸೀಲ್ ಹಾಕಿ, ಮನೆಗಳಿಗೆ ಪೋಸ್ಟರ್‌ಗಳನ್ನು ಹಾಕಬೇಕು. ಸಿಸಿ ಕೇಂದ್ರಗಳಿಗೆ ಬರಲು ನಿರಾಕರಿಸಿದವರ ಮೇಲೆ ಪ್ರಕರಣ ದಾಖಲಿಸಬೇಕು. ಸ್ಥಳೀಯ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಿ ದಂಡ ವಿಧಿಸುವಂತೆ ಸೂಚಿಸಿದರು.

ಜನಸಂದಣಿ ನಿಯಂತ್ರಣಕ್ಕಾಗಿ ಮಾರುಕಟ್ಟೆಗಳನ್ನು ಬೇರೆ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಿ, ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್‌ಫೋರ್ಸ್‌ ಕಡ್ಡಾಯವಾಗಿ ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಬೇಕು. ಅಂಗವಿಕಲರಿಗೆ ತ್ವರಿತವಾಗಿ ಲಸಿಕೆಹಾಕಬೇಕು. ವಿಳಂಬವಾದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ 45 ವರ್ಷ ಮೇಲ್ಪಟ್ಟು ಲಸಿಕೆಪಡೆಯದವರಿಗೂ ಆದ್ಯತೆ ಮೇರೆಗೆ ಲಸಿಕೆ ಹಾಕುವಂತೆ ತಿಳಿಸಿದರು.

ADVERTISEMENT

ಸರ್ಕಾರದ ನಿರ್ದೇಶನದಂತೆ ಹೊಸದಾಗಿ ಕೋವ್ಯಾಕ್ಸಿನ್ ಮೊದಲ ಡೋಸ್ ಯಾರಿಗೂ ನೀಡುವಂತಿಲ್ಲ. ಮೊದಲಡೋಸ್ ಪಡೆದ ಎಲ್ಲರಿಗೂ 30 ದಿನಗಳ ನಂತರ 2 ನೇ ಡೊಸ್ ನೀಡಬೇಕು. ಕೋವಿಡ್ ಪರೀಕ್ಷೆ ವೇಳೆ ಕಡ್ಡಾಯವಾಗಿ ಸರಿಯಾದ ವಿಳಾಸ ಹಾಗೂ ಬದಲಿ ದೂರವಾಣಿ ಸಂಖ್ಯೆ ಪಡೆಯಬೇಕು. ಅದರಿಂದ ಸೋಂಕಿತರ ಪತ್ತೆಗೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವೈದ್ಯರ ನಡೆ ಹಳ್ಳಿಯ ಕಡೆ ಇನ್ನೂ ಎರಡು ದಿನದಲ್ಲಿ ಮುಕ್ತಾಯಗೊಳ್ಳುತ್ತಿದ್ದು, ಎರಡನೇ ಹಂತವನ್ನು ಜೂನ್ 8 ರಿಂದಪ್ರಾರಂಭಿಸುವಂತೆ ಅವರು ತಿಳಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‍ಗೌಡ ಮಾತನಾಡಿ, ಮುಖ್ಯ ರಸ್ತೆಗಳು ಹಾಗೂ ಅಡ್ಡ ರಸ್ತೆಗಳಿಗೆ ಬ್ಯಾರಿಕೇಡ್ನಿರ್ಮಿಸಿ, ಜನ ಸಂಚಾರ ತಡೆಗಟ್ಟಬೇಕು. ಬಟ್ಟೆ, ಮೊಬೈಲ್ ಅಂಗಡಿಗಳು ಹಾಗೂ ಇತರೆ ತುರ್ತು ಅವಶ್ಯಕವಿಲ್ಲದಅಂಗಡಿಗಳು ತೆರೆಯದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪ್ರತಿ ಹಳ್ಳಿಗೆ ಭೇಟಿ ನೀಡಿ, ಸೋಂಕಿನ ಲಕ್ಷಣವಿರುವವರನ್ನು ಪತ್ತೆ ಹಚ್ಚಿ, ಕೋವಿಡ್ ಆರೈಕೆ ಕೆಂದ್ರಕ್ಕೆ ಸ್ಥಳಾಂತರ ಮಾಡಬೇಕು. ಅಗತ್ಯಬಿದ್ದರೆ ಪೊಲೀಸರ ಸಹಕಾರ ಪಡೆಯುವಂತೆ ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ಕುಮಾರ್‌, ಡಿವೈಎಸ್ಪಿ ಪುಟ್ಟಸ್ವಾಮಿ ಗೌಡ, ಆರ್‌ಸಿಎಚ್‌ ಅಧಿಕಾರಿ ಕಾಂತರಾಜು, ತಹಶೀಲ್ದಾರ್ ಶಿವಶಂಕರಪ್ಪ, ತಾಲ್ಲೂಕು ಆರೋಗ್ಯಧಿಕಾರಿ ಡಾ. ವಿಜಯ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.