ADVERTISEMENT

ಶಿವಲಿಂಗೇಗೌಡ ವಿರುದ್ಧ ಎಚ್‌ಡಿಕೆ, ಎಚ್‌ಡಿಡಿ ಅಸಮಾಧಾನ

ಜನತಾ ಜಲಧಾರೆಗೆ ಅರಸೀಕೆರೆ ಶಾಸಕ ಗೈರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 15:41 IST
Last Updated 21 ಏಪ್ರಿಲ್ 2022, 15:41 IST
ಶಿವಲಿಂಗೇಗೌಡ
ಶಿವಲಿಂಗೇಗೌಡ   

ಹಾಸನ: ನಗರದಲ್ಲಿ ಗುರುವಾರ ನಡೆದ ಜನತಾ ಜಲಧಾರೆ ಸಮಾವೇಶಕ್ಕೆ ಗೈರು ಹಾಜರಾಗಿದ್ದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಸಮಾಧಾನ ಹೊರ ಹಾಕಿದರು.

ಕುಮಾರಸ್ವಾಮಿ ಮಾತನಾಡಿ, ‘ಪಕ್ಷದಲ್ಲಿದ್ದುಕೊಂಡು ಕುತ್ತಿಗೆ ಕೊಯ್ಯಬೇಡಿ. ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು. ತೆಂಗಿನ ನುಸಿ ರೋಗಕ್ಕೆ ಪರಿಹಾರ ಹಾಗೂ ಕುಡಿಯುವ ನೀರಿಗೆ ಅನುದಾನ ನೀಡಿದ್ದು ನಾನು. ಆದರೆ, ಚುನಾವಣೆಯಲ್ಲಿ ಗೆದ್ದ ಮೇಲೆ ಸಿದ್ದರಾಮಯ್ಯರಿಂದ ಗೆದ್ದೆ ಅಂದ್ರು. ತಪ್ಪು ಸರಿಪಡಿಸಿಕೊಳ್ಳಿ. ಯಾರಿಗೂ ನಾನು ರಾಜಿ ಆಗೋಲ್ಲ’ ಎಂದು ವಾಗ್ದಾಳಿ ನಡೆಸಿದರು.

ನಡುವೆಯೇ ಅವರಿಂದ ಮೈಕ್ ಪಡೆದು ಮಾತನಾಡಿದ ದೇವೇಗೌಡರು, ‘ನಾನು ತೆಂಗಿಗೆ ಪರಿಹಾರ ವಿಚಾರವಾಗಿ ಧರಣಿ ಮಾಡ್ತೀನಿ, ಮೂರು ದಿನ ಬಿಟ್ಟು ಬಂದು ಏಳಿಸಿ. ಕುಮಾರಸ್ವಾಮಿಗೆ ಹೇಳಿ ಏನಾದ್ರೂ ಪರಿಹಾರ ಕೊಡಿಸಿ ಅಂದ್ರು. ಅಬ್ಬಾ ಎಂತಾ ಡ್ರಾಮಾ... ಜಿಲ್ಲೆಯಲ್ಲಿ ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಇದಕ್ಕೆ ಧ್ವನಿಗೂಡಿಸಿದ ಕುಮಾರಸ್ವಾಮಿ, ‘ನನಗೆ ಗೊತ್ತು ವಿಧಾನಸಭೆಯಲ್ಲಿ ಮಾತನಾಡೋದೂ ಡ್ರಾಮಾನೇ. ಕ್ಷೇತ್ರದ ಜನ ನೋಡಲಿ ಅಂತ ಡ್ರಾಮಾ ಮಾಡ್ತಾರೆ’ ಎಂದು ಜರಿದರು.

ಸಮಾವೇಶಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಸಹ ಗೈರಾಗಿದ್ದರು.‘ಸಮಾವೇಶ ಆರಂಭವಾಗುವುದು ತಡವಾದ ಕಾರಣ ನಾಯಕರನ್ನು ಭೇಟಿ ಮಾಡಿ, ಅವರಿಗೆ ವಿಷಯ ತಿಳಿಸಿಯೇ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದೆ’ ಎಂದು ಎ.ಟಿ.ರಾಮಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಘಟನೆಯಿಂದ, ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.