ADVERTISEMENT

ಕೇವಲ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ: ಜೆಡಿಎಸ್ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ: ಆಡಳಿತ ವೈಫಲ್ಯ, ಭ್ರಷ್ಟಾಚಾರದ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:08 IST
Last Updated 30 ಜೂನ್ 2025, 13:08 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.   

ಹಾಸನ: ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಆಡಳಿತ ವೈಫಲ್ಯ ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ವಿಪರೀತ ಮಳೆ ಕಾರಣ ರೈತರು ಹಾಗೂ ಜನರು ಸಂಕಷ್ಟಕ್ಕೀಡಾದರೂ ಸರ್ಕಾರದಿಂದ ಪರಿಹಾರ ಸಿಗುತ್ತಿಲ್ಲ. ಕೇವಲ ಮುಖ್ಯಮಂತ್ರಿ ಕುರ್ಚಿಗಾಗಿ ಪ್ರತಿದಿನ ಪೈಪೋಟಿ ನಡೆಯುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರು. ಇಂದು ಕೇವಲ ಎಂಟು ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿದೆ. ಮೆಕ್ಕೆಜೋಳ ಬೆಳೆಯಲು ಮುಂದಾದ ರೈತರಿಗೆ ಆ ಬೆಳೆಯಿಂದಲೂ ನಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿದ್ದು, ರೈತರಿಗೆ ಪರಿಹಾರ ಒದಗಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ’ ಎಂದು ದೂರಿದರು.

ಹಿಂದಿನ ಸರ್ಕಾರ ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಿತ್ತು. ಮನೆ ಕುಸಿತಕ್ಕೆ ಸೂಕ್ತ ಪರಿಹಾರ ಘೋಷಿಸಿತ್ತು. ಆದರೆ ಈ ಸರ್ಕಾರದಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದ್ದು, ಎಲ್ಲ ಸಚಿವರು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವಲ್ಲಿಯೇ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಂಪೂರ್ಣ ಆಡಳಿತ ಕುಸಿದು ಹೋಗಿದ್ದು, ಪೊಲೀಸ್ ಠಾಣೆಗಳಲ್ಲಿ ಬಡವರ ದೂರು ಕೇಳುವವರೇ ಇಲ್ಲದಾಗಿದೆ. ಸಾರ್ವಜನಿಕರು ದೂರು ನೀಡಲು ಹೋದರೆ ದಬ್ಬಾಳಿಕೆ ಮಾಡಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ರಾಜಿ ಪಂಚಾಯಿತಿ ಸಹ ಮಾಡುತ್ತಿದ್ದಾರೆ. ಒಬ್ಬ ಮಾಜಿ ಸೈನಿಕನಿಗೂ ಈ ರೀತಿಯ ಅನುಭವ ಆಗಿದ್ದು, ಈ ರೀತಿಯ ದುರಾಡಳಿತ ಜಿಲ್ಲೆಯಲ್ಲಿ ಮುಂದುವರಿದಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಿ ಹಿಡಿದ ಕಾಂಗ್ರೆಸ್ ಸರ್ಕಾರ, ಇದೀಗ ಆ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿಯೂ ವಿಫಲವಾಗಿದೆ. ಜನರಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಗುತ್ತಿಗೆದಾರರ ಬಾಕಿ ಹಣ ಪಾವತಿ ಮಾಡುವುದಕ್ಕೂ ವಿಳಂಬ ಮಾಡುತ್ತಿದೆ. ಪರಿಶಿಷ್ಟರಿಗೆ ಮೀಸಲಾಗಿರುವ ಹಣವನ್ನು ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದ್ದು, ಕೇವಲ ತುಷ್ಟೀಕರಣ ರಾಜಕಾರಣದಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಸಕ ಎ.ಮಂಜು ಮಾತನಾಡಿ, ಬಡವರಿಗೆ ಮನೆ ವಿತರಣೆ ಮಾಡುವಲ್ಲಿಯೂ ಸರ್ಕಾರ ಲೋಪ ಎಸಗಿದ್ದು, ಒಂದು ಮನೆಗೆ ₹ 10‌ಸಾವಿರ ವಸೂಲಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಅಲ್ಲ. ನಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ. ನಮ್ಮ ತಾಲ್ಲೂಕಿನ 50 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 16 ಪಂಚಾಯಿತಿಗಳಿಗೆ ಮಾತ್ರ ಮನೆ ಮಂಜೂರಾತಿ ಮಾಡಲಾಗಿದೆ. ಅದು ಕೂಡ ಹಣ ನೀಡಿದವರಿಗೆ ಮಾತ್ರ ಎಂದು ಆರೋಪಿಸಿದರು.

ಉಪ ಮೇಯರ್‌ ಹೇಮಲತಾ, ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ಮುಖಂಡರಾದ ಎನ್.ಆರ್ ಸಂತೋಷ್, ಸಮೀರ್ ಅಹಮದ್, ಜಯರಾಮ್, ಮಂಜೇಗೌಡ, ಪರಮ ದೇವರಾಜೇಗೌಡ, ಸಂಗಮ್, ಕಮಲ್ ಕುಮಾರ್, ಗಿರೀಶ್ ಚನ್ನವೀರಪ್ಪ, ಪಕ್ಷದ ವಕ್ತಾರ ರಘು ಹೊಂಗೆರೆ, ಬೈಲಹಳ್ಳಿ ಸತ್ಯನಾರಾಯಣ, ದುದ್ದ ಲಕ್ಷ್ಮಣ್, ಶಂಕರ್, ದೇವರಾಜೇಗೌಡ, ಚಂದ್ರಶೇಖರ್, ದೊಡ್ಡದಿಣ್ಣೆ ಸ್ವಾಮಿ, ಪುಟ್ಟಸ್ವಾಮಪ್ಪ, ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. 

ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ಸಿಗರ ಜಗಳ ಬಡವರು, ರೈತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲ ಏಜೆಂಟ್‌ ಮೂಲಕ ಹಣ ವಸೂಲಿ ಮಾಡುತ್ತಿರುವ ಸಚಿವ ಜಮೀರ್
ಶಾಸಕರಿಗೆ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ. ಸ್ವಪಕ್ಷದ ಶಾಸಕರಿಗೂ ಅನುದಾನ ಬಿಡುಗಡೆ ಮಾಡದ ಕಾರಣ ಅವರು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ
ಸ್ವರೂಪ್ ಪ್ರಕಾಶ್ ಶಾಸಕ
ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಾಗಿದೆ. ಮುಡಾ ವಾಲ್ಮೀಕಿ ಹಗರಣ ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಅದೇ ಕಮಿಷನ್ ದಂಧೆಯಲ್ಲಿ ಮುಳುಗಿ ಹೋಗಿದೆ.
ಕೆ.ಎಸ್. ಲಿಂಗೇಶ್ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

ಎಸ್ಪಿ ವಿರುದ್ಧ ರೇವಣ್ಣ ಕಿಡಿ

ಪ್ರತಿಭಟನಾ ಮೆರವಣಿಗೆ ವೇಳೆ ಶಾಸಕ ಎಚ್.ಡಿ. ರೇವಣ್ಣ ಅವರು ಎಸ್ಪಿ ಮೊಹಮ್ಮದ್‌ ಸುಜೀತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಎಸ್ಪಿ ತಮ್ಮಯ್ಯ ಅವರ ಜೊತೆ ಮಾತನಾಡಿದ ರೇವಣ್ಣ ‘ಏನ್ರಿ ನಮಗೂ ಸ್ವಲ್ಪ ಗೌರವವಿದೆ. ನಾವು ಪಾಪ ಹೆಣ್ಣಮಗಳು ಅಂತ ಮೇಡಂ ಎಂದು ಗೌರವ ಕೊಡುತ್ತೇವೆ. ಕರಸಿ ಅವರನ್ನ ಲಿಂಗಾಯತ ವ್ಯಕ್ತಿಯ ಮನೆಗೆ ಹೋಗಿ ದಬ್ಬಾಳಿಕೆ ಮಾಡುತ್ತಾರೆ. ಮಾಜಿ ಸೈನಿಕ ದೂರು ಕೊಡಲು ಹೋದರೆ ತೆಗೆದುಕೊಳ್ಳುವುದಿಲ್ಲ’ ಎಂದು ಕಿಡಿಕಾರಿದರು. ನಮ್ಮನ್ನು ಒಳಗೆ ಹಾಕುವುದಾದರೆ ಹಾಕಲಿ ನೋಡೋಣ. ಕಾನೂನಿನಂತೆ ನಡೆದುಕೊಳ್ಳಬೇಕು ಎಂದರು.

Cut-off box - ‘ಅನುದಾನ ಬಿಡುಗಡೆಗೆ ಮೀನಮೇಷ’ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದಾಗಿ ಬೆಳೆ ನಾಶವಾಗಿದ್ದು ನೂರಾರು ಮನೆಗಳು ಬಿದ್ದಿವೆ. ಇದುವರೆಗೂ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿಲ್ಲ. ರಸ್ತೆಗಳು ಗುಂಡಿಮಯವಾಗಿದ್ದು ದುರಸ್ತಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಆರೋಪಿಸಿದರು. ಈ ಹಿಂದೆ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ವಿತರಣೆ ಮಾಡಲಾಗುತ್ತಿತ್ತು. ಮುಖ್ಯಮಂತ್ರಿ ಕೇವಲ ಕಾಂಗ್ರೆಸ್ ಅಧಿಕಾರದಲ್ಲಿರುವ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಕೇವಲ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದು ಸರ್ಕಾರದ ಈ ರೀತಿಯ ಬೇಜಾವಾಬ್ದಾರಿ ಆಡಳಿತ ಸರಿಯಲ್ಲ. ಇಂದಿನ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು ರೈತರ ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಸರ್ಕಾರ ಕೇವಲ ಆಂತರಿಕ ಬೇಗುದಿಯಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.