ADVERTISEMENT

ಜೆಡಿಎಸ್ ಬೆಳ್ಳಿಹಬ್ಬ | ಜ.24ರಂದು ಸಮಾವೇಶ: ಸಿದ್ಧತೆ ಪರಿಶೀಲಿಸಿದ ಎಚ್.ಡಿ.ಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 3:19 IST
Last Updated 22 ಜನವರಿ 2026, 3:19 IST
ಹಾಸನದಲ್ಲಿ ಸಮಾವೇಶದ ಸಿದ್ಧತೆಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪರಿಶೀಲಿಸಿದರು. 
ಹಾಸನದಲ್ಲಿ ಸಮಾವೇಶದ ಸಿದ್ಧತೆಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪರಿಶೀಲಿಸಿದರು.    

ಹಾಸನ: ಜೆಡಿಎಸ್‌ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಜ.24ರಂದು ಹಾಸನದಲ್ಲಿ ಆಯೋಜಿಸಲಾಗಿರುವ ಬೃಹತ್ ಜನತಾ ಸಮಾವೇಶವು ಐತಿಹಾಸಿಕವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಸಮಾವೇಶವನ್ನು ಹಾಸನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ ಸಾಂಕೇತಿಕ ಕಾರ್ಯಕ್ರಮ ನಡೆಸಲಾಗಿದೆ. ಹಾಸನ ದೇವೇಗೌಡರ ಜನ್ಮಭೂಮಿ. ಅವರ ರಾಜಕೀಯ ಜೀವನ ಸೊಸೈಟಿ ಚುನಾವಣೆಯಿಂದ ಆರಂಭವಾಗಿದ್ದು, 62 ವರ್ಷಗಳ ದೀರ್ಘ ಅನುಭವ ಹೊಂದಿದೆ. ದೇವೇಗೌಡರು ಗೆದ್ದರೂ, ಸೋತರೂ ಮಾನಸಿಕ ಸ್ಥೈರ್ಯ ನೀಡಿದ ಜಿಲ್ಲೆ ಇದು. ಹೀಗಾಗಿ ಈ ಸಮಾವೇಶ ಜೆಡಿಎಸ್‌ಗೆ ಅತ್ಯಂತ ಮಹತ್ವದ ಸಭೆಯಾಗಲಿದೆ ಎಂದು ಹೇಳಿದರು.

ADVERTISEMENT

ಇತ್ತೀಚೆಗೆ ಹಾಸನದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಸೇರಿ ಎರಡು ಸಭೆಗಳನ್ನು ನಡೆಸಿರುವುದು ಕಾಕತಾಳೀಯವಲ್ಲ. ಜೆಡಿಎಸ್ ಅನ್ನು ಮುಗಿಸಬೇಕು ಎನ್ನುವ ಉದ್ದೇಶದಿಂದಲೇ ಈ ಸಭೆಗಳನ್ನು ನಡೆಸಲಾಗಿದೆ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಮಾವೇಶದ ಮೂಲಕ ಚುನಾವಣೆಗೆ ಸ್ಪಷ್ಟ ಸಂದೇಶ ನೀಡುವ ಉದ್ದೇಶವೂ ಇದೆ. ಮೈತ್ರಿಯ ಹೊಂದಾಣಿಕೆಯಲ್ಲೇ ಚುನಾವಣೆ ಎದುರಿಸುವುದು ನಮ್ಮ ಆದ್ಯತೆ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ:

ಇತಿಹಾಸದಲ್ಲಿಯೇ ಇಂತಹ ಕೆಟ್ಟ ಸರ್ಕಾರ ನೋಡಿಲ್ಲ. ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಆದರೆ, ಕುರ್ಚಿಯ ಕದನದಲ್ಲಿ 5 ಕಡೆ ಅಹಿಂದ ಸಮಾವೇಶ ನಡೆಸಲು ಹೊರಟಿದ್ದಾರೆ. 2023 ರಿಂದ 2026 ರವರೆಗೆ ಒಬಿಸಿ, ಅಲ್ಪಸಂಖ್ಯಾತ ಸಮುದಾಯದ ₹1.64 ಲಕ್ಷ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಕ್ಕಿಲ್ಲ. ಅಹಿಂದ ವರ್ಗಕ್ಕೆ ಸೇರಿದ ಈ ಮಕ್ಕಳಿಗೆ ವಂಚನೆ ಮಾಡಲಾಗಿದೆ. ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಅಹಿಂದ ವರ್ಗದ ಮಕ್ಕಳ ಹಿತರಕ್ಷಣೆ ಎಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ ಎಂಬುದನ್ನು ಆ ಸಮುದಾಯ ಗಮನಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಿದೆ? ಕೇಂದ್ರ ಸರ್ಕಾರ ಹಣ ಕೊಟ್ಟಿದ್ದರೂ, ರಾಜ್ಯ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಬಿಳಿಕೆರೆಯಿಂದ ಎಡೆಗೋಡನಹಳ್ಳಿ ಚತುಷ್ಪಥ, ಬೇಲೂರು ಚತುಷ್ಪಥ ಯೋಜನೆ ಸ್ಥಗಿತಗೊಂಡಿವೆ. ಹೆಣ್ಣುಮಗಳು ದೇಶದ ಆರ್ಥಿಕ ಸಚಿವರಾಗಿ ಸಮರ್ಥರಾಗಿ ಕೆಲಸ ಮಾಡುತ್ತಿದ್ದು, ಅಂಥವರ ಬಗ್ಗೆ ಯಾವ ಪದ ಬಳಕೆ ಮಾಡಿದ್ದಾರೆ? ಪದೇ ಪದೇ ಕೇಂದ್ರ ಸರ್ಕಾರದತ್ತ ಬೊಟ್ಟು ತೋರುವ ರಾಜ್ಯ ಸರ್ಕಾರ, ತನ್ನ ಜವಾಬ್ದಾರಿ ಎಷ್ಟರ ಮಟ್ಟಿಗೆ ನಿಭಾಯಿಸಿದೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳ ನಡುವಳಿಕೆ, ಭ್ರಷ್ಟಾಚಾರದ ಬಗ್ಗೆ ಯಾವುದೇ ರೀತಿ ಚರ್ಚೆ ಮಾಡಲು ಆಗದಂತಹ ಅಸಹ್ಯ ವಾತಾವರಣ ನಿರ್ಮಾಣ ಮಾಡಿದ್ದಾರೆ. ಸರ್ಕಾರದ ವರ್ಗಾವಣೆ ನೀತಿಯಿಂದ ಶಿಸ್ತನ್ನು ಕಾಪಾಡಲು ಆಗುತ್ತಿಲ್ಲ ಎಂದು ಪ್ರಾಮಾಣಿಕ ಅಧಿಕಾರಿಗಳೇ ಹೇಳಿದ್ದಾರೆ. 80 ಕ್ರಿಮಿನಲ್‌ ಪ್ರಕರಣಗಳು ಪೊಲೀಸ್ ಅಧಿಕಾರಿಗಳ ಮೇಲಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅಂಥ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಿದರೆ, ಅಂಥವರಿಂದ ಯಾವ ರೀತಿಯ ಕೆಲಸ ಆಗಲಿದೆ ಎಂಬುದು ಎಲ್ಲರಿಗೂ ಅರ್ಥವಾಗುವಂಥದ್ದು ಎಂದು ಲೇವಡಿ ಮಾಡಿದರು.

ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅವರ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಮಾನತು ಮಾಡಬೇಕಿತ್ತು. ಆದರೆ ಸರ್ಕಾರ ಮೀನಮೇಷ ಎಣಿಸುತ್ತಿದೆ. 2016–17ರಲ್ಲಿ ಬಿಳಿಕೆರೆ ಬಳಿ ಚಿನ್ನದ ವ್ಯಾಪಾರಿಯೊಬ್ಬರ ₹3 ಕೋಟಿ ಲೂಟಿ ಪ್ರಕರಣದಲ್ಲಿಯೂ ಇದೇ ಸರ್ಕಾರ ಇತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಿಗುವ ರಕ್ಷಣೆ ಬೇರೆ ಯಾವುದೇ ಸರ್ಕಾರದಲ್ಲಿಲ್ಲ ಎಂದು ಟೀಕಿಸಿದರು.

ಅಬಕಾರಿ ಅಧಿಕಾರಿಗಳಿಂದ ₹25 ಲಕ್ಷ ನಗದನ್ನು ಲೋಕಾಯುಕ್ತರೇ ವಶಕ್ಕೆ ಪಡೆದಿದ್ದಾರೆ. ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಪ್ರಿಯಾಂಕ ಖರ್ಗೆ ಅವರೇ ಎಂದು ಕೇಳಿದ ಅವರು, ಯಾವ ಹಿಟ್‌ ಆಂಡ್‌ ರನ್‌ ಇಲ್ಲ. ನಿಮ್ಮ ಕರ್ಮಕಾಂಡ ಹೇಳಲು ಸಾಕಷ್ಟು ವಿಷಯಗಳಿವೆ. ಸಮಾವೇಶದ ದಿನ ಇನ್ನೂ ಹಲವು ವಿಚಾರ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.

ಅಸಮರ್ಥ ಗೃಹ ಸಚಿವ ಎಂದರೂ ಬೇಜಾರಿಲ್ಲ ಎಂದು ಡಾ.ಪರಮೇಶ್ವರ ಅವರೇ ಹೇಳಿದ್ದಾರೆ. ಇದಕ್ಕಿಂತ ಹೆಚ್ಚು ನಾವೇನೂ ಹೇಳಬೇಕಿಲ್ಲ ಎಂದರು.

ಶಾಸಕ ಎಚ್.ಡಿ. ರೇವಣ್ಣ, ಸ್ವರೂಪ್ ಪ್ರಕಾಶ್, ಎಸ್‌.ಎಲ್‌. ಭೋಜೇಗೌಡ, ಮಾಜಿ ಶಾಸಕರಾದ ಸಾರಾ ಮಹೇಶ್, ಎಚ್.ಕೆ. ಕುಮಾರಸ್ವಾಮಿ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ ಹಾಜರಿದ್ದರು.

ಮತ ಪತ್ರ ಇವಿಎಂ ಬಗ್ಗೆ ಜೆಡಿಎಸ್ ಚರ್ಚೆ ಮಾಡಿಲ್ಲ. ಕಾಂಗ್ರೆಸ್‌ನವರು 136 ಸೀಟುಗಳನ್ನು ಇವಿಎಂ ಮೂಲಕ ಗಳಿಸಿದರೋ ಮತ ಪತ್ರಗಳ ಮೂಲಕ ಗಳಿಸಿದರೋ? ಮತ ಪತ್ರದಲ್ಲಿ ಯಾವ ಸಮಯದಲ್ಲಿ ಏನು ಬದಲಾವಣೆ ಆಗುತ್ತದೆಯೋ ಗೊತ್ತಿಲ್ಲ
ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
ಕಾಂಗ್ರೆಸ್ ಸರ್ಕಾರ ಬಂದ ನಂತರ ನಿತ್ಯ ಜಿಲ್ಲೆಯಲ್ಲಿ ಏನೇನೂ ನಡೆಯುತ್ತಿದೆ ಎಂಬುದರ ಬಗ್ಗೆ ದೇವೇಗೌಡರು ಶಾಸಕರನ್ನು ಕರೆಸಿ ಮಾತನಾಡಿದ್ದಾರೆ. ಅದರಂತೆ ಸಮಾವೇಶ ಮಾಡಲಾಗುತ್ತಿದೆ. ಜಿಲ್ಲೆಯಿಂದ 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ
ಎಚ್‌.ಡಿ. ರೇವಣ್ಣ ಶಾಸಕ
ರೇವಣ್ಣ ಅಣತಿಯಂತೆ ವಾಸ್ತು ಪಾಲಿಸಿದ ಕುಮಾರಸ್ವಾಮಿ
ಜೆಡಿಎಸ್ ಸಮಾವೇಶ ಸ್ಥಳ ಪರಿಶೀಲಿಸುವ ವೇಳೆ ರೇವಣ್ಣ ಅವರ ಅಣತಿಯಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಸ್ತು ಪ್ರಕಾರವೇ ಕಾರಿನಲ್ಲಿ ವೇದಿಕೆಯ ಬಳಿಗೆ ಬಂದರು. ಬೆಂಗಳೂರಿನಿಂದ ನೇರವಾಗಿ ಹಾಸನದ ಭುವನಹಳ್ಳಿ ಬಿಜಿಎಸ್‌ಕೆ ಲೇಔಟ್ ಪ್ರದೇಶದ ಬೃಹತ್ ವೇದಿಕೆ ಬಳಿ ಕಾರಿನಲ್ಲಿ ಬಂದ ಕುಮಾರಸ್ವಾಮಿ ಅವರನ್ನು ಕಾರಿನಿಂದ ಇಳಿಯದಂತೆ ತಿಳಿಸಿದ ರೇವಣ್ಣ ವಾಸ್ತು ಪ್ರಕಾರ ಬರುವಂತೆ ಕಾರು ಚಾಲಕನಿಗೆ ಸೂಚಿಸಿದರು. ಮೊದಲಿಗೆ ಕಾರು ದಕ್ಷಿಣ ದಿಕ್ಕಿನಿಂದ ವೇದಿಕೆ ಬಳಿಗೆ ಬಂದಿದ್ದು ಇಳಿಯಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಕಾರಿನಿಂದ ಇಳಿಯದಂತೆ ಸೂಚಿಸಿ ವಾಹನವನ್ನು ಮುಂದಕ್ಕೆ ಸಾಗಿಸಲು ಹೇಳಿದರು. ನಂತರ ಕಾರು ಉತ್ತರ ದಿಕ್ಕಿಗೆ ತೆರಳಿ ಈಶಾನ್ಯ ಮೂಲೆಯಿಂದ ಪೂರ್ವ ದಿಕ್ಕಿಗೆ ಬಂದು ನಿಲ್ಲಿಸಲಾಯಿತು. ಪೂರ್ವಾಭಿಮುಖವಾಗಿ ಕಾರು ನಿಂತ ಬಳಿಕ ಎಚ್.ಡಿ. ಕುಮಾರಸ್ವಾಮಿ ವಾಹನದಿಂದ ಇಳಿದು ವೇದಿಕೆಯತ್ತ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.