
ಅರಸೀಕೆರೆ: ತಾಲ್ಲೂಕಿನ ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇವಿಯವರ ನೂತನ ದೇವಾಲಯದ ವಿಮಾನ ಗೋಪುರ ಕಳಶಾರೋಹಣ ಕಾರ್ಯಕ್ರಮ ಶುಕ್ರವಾರ ಸಹಸ್ರಾರು ಭಕ್ತರು ಹಾಗೂ ಹತ್ತಾರು ದೇವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮುಂಜಾನೆ ಬ್ರಾಹ್ಮಿ ಲಗ್ನದಿಂದಲೇ ಗಂಗಾಪೂಜೆ ಹಾಗೂ ಗೋಪೂಜೆಯಿಂದ ಪೂಜಾ ವಿಧಾನಗಳು ಆರಂಭವಾದವು. ವಿಶೇಷ ಪುರೋಹಿತ ತಂಡದೊಂದಿಗೆ ದೇವಿಯವರಿಗೆ ಅಭಿಷೇಕ ದೇವಾಲಯದ ಆವರಣದಲ್ಲಿ ನವದುರ್ಗ ಸಮೇತ ಚಂಡಿಕಾ ಹೋಮ, ಪ್ರತ್ಯಂಗಿರಿ ಹೋಮ, ಮಹಾ ಪೂರ್ಣಾಹುತಿ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.
ದಾಸೀಹಳ್ಳಿ ಗ್ರಾಮದ ರಾಜ ಬೀದಿಗಳಲ್ಲಿ 108 ಕುಂಭಗಳ ಸಮೇತ ಮೆರವಣಿಗೆ ನಂತರ ವೃಶ್ಚಿಕ ಲಗ್ನದಲ್ಲಿ ಕಳಶಾರೋಹಣ ನಡೆದು ಬಲಿ ಪ್ರಧಾನ ದೃಷ್ಟಿ ಪೂಜೆ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ನೆರವೇರಿತು.
ಅಮ್ಮನಹಟ್ಟಿ ಗಂಗಾಮಾಳಿಕಾ ದೇವಿ, ಯಾದಾಪುರದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ದೇವತೆಗಳ ಮೂರ್ತಿಗಳು ಆಗಮಿಸಿದ್ದವು. ನಂತರ ದೇವಿಯವರಿಗೆ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ನಡೆದು ಮಹಾಮಂಗಳಾರತಿ ಸಲ್ಲಿಸಿ ತೀರ್ಥ ಪ್ರಸಾದ ವಿನಿಯೋಗವು ನಡೆಯಿತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ , ಜೆಡಿಎಸ್ ಮುಖಂಡ ಎನ್ .ಆರ್.ಸಂತೋಷ್ ಸೇರಿದಂತೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ದಾಸೀಹಳ್ಳಿ ರಾಜರಾಜೇಶ್ವರಿ ಹುತ್ತದಮ್ಮ ದೇವಿಯವರ ಸಮಿತಿಯವರು, ಸುತ್ತಮುತ್ತಲಿನ ಗ್ರಾಮಸ್ಥರು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.