
ಸಕಲೇಶಪುರ: ‘ಕನ್ನಡ ಭಾಷೆಯ ಇತಿಹಾಸ ತಿಳಿಯದೇ ಇದ್ದರೆ ವರ್ತಮಾನಕ್ಕೆ ಬರಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಕನ್ನಡ ಉತ್ತಮ ಭಾಷೆಯಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಿಲ್ಲ’ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಗುರುವಾರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಹೊಯ್ಸಳ ಕನ್ನಡ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ನುಡಿ ಹಬ್ಬ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
‘ಜಾಗತೀಕರಣದಿಂದ ಒಂದು ದೇಶ, ಭಾಷೆ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ತಂತ್ರಜ್ಞಾನ ಎಂಬುದೂ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಹೇರಳವಾಗಿ ಪರಿಣಾಮ ಬೀರಿರುವುದನ್ನು ನಾವೆಲ್ಲರೂ ಕಾಣಬಹುದು. ಈ ನಾಡಿನ ಭಾಷೆ, ಸಂಸ್ಕೃತಿಯ ಇತಿಹಾಸ ಅರಿತಕೊಳ್ಳುವ ಅವಶ್ಯಕತೆ ಇದೆ’ ಎಂದರು.
‘ಆಚಾರ್ಯ ವಿನೋಬಾ ಭಾವೆ ಹೇಳುವ ಹಾಗೆ ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಬಣ್ಣಿಸಿರುವುದು ಕನ್ನಡ ಭಾಷೆಗೆ ಇರುವ ಮಹತ್ವ ಸಾರುತ್ತದೆ’ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಆರ್.ಗುರುದೇವ್ ಮಾತನಾಡಿ, ‘ಬಾಳ್ಳುಪೇಟೆಯಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮ ನಡೆದು ಬಹಳ ವರ್ಷಗಳೇ ಅಗಿವೆ. ಇದು ಪ್ರಜಾಪ್ರಭುತ್ವ ದೇಶವಾಗಿದ್ದು, ಧರ್ಮ, ಜಾತಿ, ನಾಡು, ನುಡಿ, ಸಂಸ್ಕೃತಿಯ ಮೂಲಕ ವಿಭಜನೆ ಮಾಡುವ ಪ್ರಯತ್ನ ನಡೆದಿತ್ತು. ಅಂತ ಪ್ರಯತ್ನಗಳಿಗೆ ಇಂತಹ ಕಾರ್ಯಕ್ರಮ ಸ್ಪಷ್ಟ ಉತ್ತರ ನೀಡಲಿದೆ. ಹಿಂದಿ ರಾಷ್ಟ್ರ ಭಾಷೆಯಾಗಿದ್ದು, ದೇಶದ ಒಗ್ಗಟ್ಟಿಗೆ ಹಿಂದಿ ಭಾಷೆಯನ್ನು ಗೌರವಿಸುವ ಕೆಲಸ ನಮ್ಮಿಂದ ಆಗಬೇಕು. ವಿದೇಶಿ ಭಾಷೆ ನಮಗೆ ಬೇಡ. ಕನ್ನಡ ಪರ ಸಂಘಟನೆಗಳು ನಾಡು, ನುಡಿ ಸಂರಕ್ಷಣೆ ಹೆಸರಿನಲ್ಲಿ ಹಿಂದಿ ಅಳವಡಿಸಿರುವ ಬೋರ್ಡ್‌ಗಳಿಗೆ ಕಪ್ಪು ಮಸಿ ಬಳಿಯುವುದಕ್ಕೆ ನನ್ನ ವಿರೋಧವಿದೆ’ ಎಂದರು.
ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಯಸಳೂರಿನ ತೆಂಕಲಗೂಡು ಬೃಹನ್ ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಂಡೆಮಠದ ಬಸವಲಿಂಗ ಸ್ವಾಮೀಜಿ, ಸಂಕಲಾಪುರ ಮಠದ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಇಬ್ರಾಹಿಂ ಮುಸ್ಲಿಯಾರ್, ಕ್ರಿಶ್ಚಿಯನ್ ಧರ್ಮಗುರು ರೆ.ಫಾ.ಜೀವನ ಪ್ರಭು, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ ಮಂಜುನಾಥ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾ.ಪಂ ಮಾಜಿ ಸದಸ್ಯ ಯಡೇಹಳ್ಳಿ ಆರ್.ಮಂಜುನಾಥ್, ಬೆಳಗೋಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಮುಖಂಡರಾದ ಬಿ.ಡಿ.ಬಸವಣ್ಣ, ರೋಹಿತ್ ಕಿತ್ಲೆಮನೆ, ಗುರುಬಸಪ್ಪ, ರೋಹಿತ್ ಉಪಸ್ಥಿತರಿದ್ದರು.
ಕನ್ನಡ ಜಗತ್ತಿನ ಅಚ್ಚರಿಗಳಲ್ಲಿ ಒಂದು ಕನ್ನಡ ಎನ್ನುವುದು ಜಗತ್ತಿನ ಅಚ್ಚರಿಗಳಲ್ಲೊಂದು. ಕನ್ನಡ ಭಾಷೆಗೆ ಜಗತ್ತನ್ನೇ ಅಚ್ಚರಿಗೊಳಿಸುವ ಶಕ್ತಿಯಿದೆ. ಕನ್ನಡ ಭಾಷೆಗಿರುವಷ್ಟು ಸಂಪತ್ತು ದೇಶದ ಬೇರೆ ಇನ್ಯಾವ ಭಾಷೆಗೂ ಇಲ್ಲ. ಕನ್ನಡ ನೆಲ ಮೂಲದಿಂದ ಬಂದ ಭಾಷೆಯಾಗಿದ್ದು ನಾವು ಬೇರೆ ಭಾಷೆ ಒಪ್ಪಿಕೊಂಡು ಅಪ್ಪಿಕೊಂಡು ನಮ್ಮನ್ನು ನಾವು ಮರೆಯುತ್ತಿರುವುದು ಆತಂಕದ ವಿಷಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎನ್. ಮಲ್ಲೇಶ್ ಗೌಡ ಹೇಳಿದರು. ಜಗತ್ತಿನ ಯಾವ ದೇಶದ ಭಾಷೆಯ ಜೊತೆಗೆ ಕನ್ನಡ ಭಾಷೆ ಕೂಡಿಕೊಂಡರೆ ತನ್ನತನವನ್ನು ಕಳೆದುಕೊಳ್ಳದೇ ಇರುವುದು ಕನ್ನಡ ಭಾಷೆಗೆ ಮಾತ್ರ. ಕನ್ನಡ ಭಾಷಾ ಸಂಪತ್ತು 13 ಆವೃತ್ತಿಗಳಲ್ಲಿದ್ದು ಒಂದೊಂದು ಆವೃತ್ತಿಯು 1500 ಕ್ಕೂ ಹೆಚ್ಚು ಪುಟಗಳಲ್ಲಿದೆ. ವಿಶ್ವದ ಹತ್ತು ಪ್ರಮುಖ ಭಾಷೆಯಲ್ಲಿ ಕನ್ನಡ ಮೊದಲ ಸ್ಥಾನದಲ್ಲಿದೆ. ಬೇರೆ ಭಾಷೆಗಳು ತಮ್ಮ ಸೃಜನಶೀಲತೆ ಕಳೆದುಕೊಂಡಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.